Friday 4 January 2019


ವ್ಯಕ್ತಿತ್ವವಿಕಸನ ಹಾಗೂ ಭಾಷೆ

ಭೂಮಿಯಲ್ಲಿ ಹುದುಗಿರುವ ಜೇಡಿಮಣ್ಣನ್ನು, ಭೂಮಿಯಿಂದ ತೆಗೆದು ಹದಗೊಳಿಸಿ, ಅದರಿಂದ ಮಡಿಕೆ, ಕುಡಿಕೆ, ಕಲಾಕೃತಿ ಇತ್ಯಾದಿಗಳನ್ನು ಮಾಡಿದಾಗ ಮಾತ್ರವೇ, ಮಣ್ಣಿಗೆ ಒಂದು ನೆಲೆ ಹಾಗೂ ಬೆಲೆ ದೊರಕುವುದು. ಅಂತೆಯೇ ಮಣ್ಣಿನ ಮುದ್ದೆಯಂತಿರುವ ಮಗು, ತಾಯಿಯ ಗರ್ಭದಿಂದ ಬೇರ್ಪಟ್ಟು, ಜೀವನಾನುಭವದ ಮೂಸೆಯಲ್ಲಿ ಹದಗೊಂಡು, ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ. ಹಾಗಾಗೀ ವ್ಯಕ್ತಿತ್ವ ವಿಕಾಸಗೊಳ್ಳುವಂತಹುದೇ ಪರಂತು, ಸ್ವಯಂ ತನಗೆ ತಾನೇ ರೂಪುಗೊಳ್ಳುವುದಾಗಲೀ ಅಥವಾ ಏಕಾಏಕಿಯಾಗಿ ರೂಪುಗೊಳ್ಳುವಂತಹುದಲ್ಲ. ಈ ವ್ಯಕ್ತಿತ್ವ ವಿಕಸನವು ಹಲವಾರು ಅಂಶಗಳಿಂದ ಪ್ರಭಾವಿತವಾಗುತ್ತಲೇ ರೂಪುಗೊಳ್ಳುವ ಪ್ರಕ್ರಿಯೆಯಾಗಿದೆ.
ಹಾಗಾದರೆ ಈ ವ್ಯಕ್ತಿತ್ವ ಎಂದರೇನು? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ‘ವ್ಯಕ್ತಿತ್ವ’ವನ್ನು ಸುಲಭವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆಂಗ್ಲ ಭಾಷೆಯಲ್ಲಿ ಇದನ್ನು ‘Personality’ ಎಂಬ ಪದದಿಂದ ಕರೆಯುತ್ತಾರೆ. ಸಾಮಾನ್ಯ ನೆಲೆಯಲ್ಲಿ, ದೃಢಕಾಯ ಶರೀರವಿದ್ದರೆ, ಎಂತಹ ‘ಪರ್ಸನಾಲಿಟಿ’ ಇದೆ ಎಂದು ಗುರುತಿಸುತ್ತಾರೆ. ಹೀಗೆ ವ್ಯಕ್ತಿಯ ಶಾರೀರ್ಯವೇ ಪರ್ಸನಾಲಿಟಿಯೇ ಎಂಬ ಅನುಮಾನ ಮೂಡಲು ಇದು ಕಾರಣವಾಗುತ್ತದೆ. ಭೀಮನಂತಹ ಕಾಯ ಹೊಂದಿದ್ದವರು ಮಾತ್ರವೇ ‘Personality’ ಹೊಂದಿದ್ದಾರೆ ಎನ್ನಲು ಸಾಧ್ಯವಿಲ್ಲ. ಹಾಗೆ ಪರಿಗಣಿಸಿದರೆ, ಅತಿ ಅಧ್ಬುತ ವ್ಯಕ್ತಿತ್ವಗಳಾಗಿ ಜಗತ್ತಿನ ಇತಿಹಾಸದ ಪುಟಗಳಲ್ಲಿ ಹಾದುಹೋದ ಗಾಂಧೀಜಿ, ರಾಮಕೃಷ್ಣ ಪರಮಹಂಸರು ಇಂತಹವರಿಗೆ ‘Greatest Personality’ ಎಂಬ ಅಭಿದಾನ ದೊರೆಯುತ್ತಲೇ ಇರಲಿಲ್ಲ. ಹಾಗಾದರೆ, ಈ ‘ವ್ಯಕ್ತಿತ್ವ’ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಬಹಳ ಸಂಕೀರ್ಣವಾಗುತ್ತದೆ. ಅದು ವ್ಯಕ್ತಿಯ ಶಾರೀರ್ಯ, ಆಂತರಿಕ ಹಾಗೂ ಬಾಹ್ಯ ವರ್ತನೆಗಳೆಲ್ಲವನ್ನೂ ಒಳಗೊಳ್ಳುತ್ತದೆ. ಅದು ವ್ಯಕ್ತಿಯನ್ನು ಜಗತ್ತು ಗುರುತಿಸುವ ರೀತಿಯಾಗಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ವ್ಯಕ್ತಿಯ ಆಂತರ್ಯ ಜಗತ್ತಿಗೆ ಗೋಚರವಾಗುವುದಿಲ್ಲ. ಇದನ್ನು ಗುರುತಿಸುವ ಬಗೆ ಹೇಗೆ? ಅನ್ನೋ ಪ್ರಶ್ನೆಗಳು ಪ್ರಾದುರ್ಭವಿತವಾಗುತ್ತವೆ. ‘ವ್ಯಕ್ತಿತ್ವ’ ಎನ್ನುವುದು ನೀರಿನೊಳಗಿರುವ ಮೀನಿನ ಹೆಜ್ಜೆಗಳಂತೆ!.........ತೀಕ್ಷ್ಣವಾದ  ದೃಷ್ಟಿಯಿರುವ ಪಕ್ಷಿಗಳು ಮಾತ್ರ ಹೆಜ್ಜೆ ಗುರುತಿಲ್ಲದ ಮೀನನ್ನು ಗುರುತಿಸಬಲ್ಲುದು. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಲು ಸಾಮಾನ್ಯರಿಗೆ ಕಷ್ಟ ಸಾಧ್ಯವೇ ಆಗಿದೆ ಎನಿಸಬಹುದು. ಆದರೆ, ವಾಸ್ತವವಾಗಿ ಈ ವ್ಯಕ್ತಿತ್ವವನ್ನು ಗುರುತಿಸಿ, ಅದನ್ನು ನಿರ್ಧರಿಸುವವರು ಈ ಸಾಮಾನ್ಯರೇ ಎನ್ನುವುದನ್ನು ಎಂದಿಗೂ ಮರೆಯಬಾರದು.  ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುವುದು ಆತ ಸನ್ನಿವೇಶವೊಂದರಲ್ಲಿ ನಡೆದುಕೊಳ್ಳುವ ರೀತಿಯಿಂದಲೇ ಪರಂತು, ಮತ್ಯಾವುದರಿಂದಲೂ ಅಲ್ಲ. ‘ಸತ್ಯ’ವನ್ನು ಎಲ್ಲರೂ ಹೇಳಿದರೂ, ‘ಸತ್ಯ ಹರಿಶ್ಚಂದ್ರ’ನಾಗಲು ಸಾಧ್ಯವಾಗಿಲ್ಲ. ಹರಿಶ್ಚಂದ್ರನಿಗೆ ‘ಸತ್ಯ’ತೆಯ ಸಮ್ಮಾನ ದೊರಕಿರುವುದು, ‘ಸತ್ಯ’ದೊಂದಿಗೆ ಆತನಿಗಿದ್ದ ಬದ್ಧತೆಯಿಂದಾಗಿಯೇ ಆಗಿದೆ. ವಿವೇಕರ ಜೀವನದ ನಿದರ್ಶನವನ್ನು ನಮೂದಿಸುವುದು ಇಲ್ಲಿ ಸೂಕ್ತವಾದುದು. ವಿವೇಕರು ವಿಶ್ವಧರ್ಮ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ, ಅವರ ವ್ಯಕ್ತಿತ್ವದಿಂದ ಆಕರ್ಷಿತಳಾಗಿದ್ದ ಯುವತಿಯೊಬ್ಬಳು, ವಿವೇಕರಿಂದ, ಅವರಂತೆಯೇ ಇರುವ ಮಗುವನ್ನು ಬಯಸಿ, ತನ್ನ ಅಪೇಕ್ಷೆಯನ್ನು ವಿವೇಕರೊಂದಿಗೆ ಪ್ರಸ್ತಾಪಿಸಿದಾಗ, ವಿವೇಕರು ನೀಡಿದ ಉತ್ತರ ಹೀಗಿತ್ತು. “ಅಮ್ಮಾ! ನನ್ನಿಂದ ನನ್ನಂತೆಯೇ ಇರುವ ಮಗುವನ್ನು ನೀನು ಬಯಸಿದರು, ನೀನು ನಿರೀಕ್ಷಿಸಿದ ರೀತಿಯಲ್ಲಿ, ಆ ಮಗುವಿನಿಂದ ಮತ್ತೊಂದು ‘ವಿವೇಕ’ ಜನಿಸಿ ಬರುವುದರ ಭರವಸೆ ನೀಡಲಾಗುವುದಿಲ್ಲ!............. ಈ ಬಯಕೆಯ ಬದಲಿಗೆ ನನ್ನನ್ನೇ ನಿನ್ನ ಮಗುವೆಂದು ಏಕೆ ಪರಿಭಾವಿಸಬಾರದು?!.............” ಎಂಬ ಶ್ರೇಷ್ಠ ಪ್ರತಿಕ್ರಿಯೆಯನ್ನು ನೀಡಿ, ನಿಜವಾಗಿಯೂ ‘ವಿವೇಕ’ರಾದರು. ಈ ಹಿನ್ನೆಲೆಯಲ್ಲಿ, ಬಹಳ ಸುಲಭವಾಗಿ ಸಾಮಾನ್ಯ ಕೂಡಾ ವ್ಯಕ್ತಿತ್ವವನ್ನು ಗುರುತಿಸುತ್ತಾನೆ. ಆದರೆ, ಸಾಮಾನ್ಯ ಗುರುತಿಸಲು ಸಾಧ್ಯವಾಗುವುದು ಸಂರಚನೆಯಗೊಂಡ ವ್ಯಕ್ತಿತ್ವವನ್ನೇ ಪರಂತು, ಸಂರಚನೆಗೊಳ್ಳುತ್ತಿರುವ ವ್ಯಕ್ತಿತ್ವವನ್ನಲ್ಲ!........... ಸ್ಥಿರವಾಗಿರುವ ಅಂಶವನ್ನು ಸಾಮಾನ್ಯವಾಗಿ ಗುರುತಿಸಬಹುದು. ಆದರೆ, ಬದಲಾಗುತ್ತಿರುವ ಯಾವುದೇ ಅಂಶಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ, ಕಷ್ಟಸಾಧ್ಯವಾದ ಸಂಗತಿಯಾಗಿದೆ.  ವ್ಯಕ್ತಿತ್ವವು ಬದಲಾಗುವ ಸಂಗತಿಯಾಗಿದೆ. ಜೀವನದ ಪೂರ್ವ ಭಾಗದಲ್ಲಿ, ಚೋರನಾಗಿದ್ದ ವಾಲ್ಮೀಕಿ, ಆದರ್ಶ ರಾಮನ ಜೀವನ ಚರಿತ್ರೆ ಬರೆದ ಕವಿಯ ವ್ಯಕ್ತಿತ್ವದಲ್ಲಿ ನೆಲೆಗೊಳ್ಳುತ್ತದೆ. ಗುರುದ್ರೋಣರಂತಹ ಮಹಾವ್ಯಕ್ತಿಯ ಪುತ್ರನಾಗಿ, ಬೆಳೆದು ಧೀರೋದಾತ್ತ ನೆಲೆಯಲ್ಲಿ ರೂಪುಗೊಂಡ ಅಶ್ವತ್ಥಾಮನ ವ್ಯಕ್ತಿತ್ವ, ದುರ್ಯೋಧನನ ಸಾವಿನಿಂದ ಆಕ್ರೋಶಭರಿತನಾಗಿ ಎಸಗಿದ ದುರಾಚಾರಗಳಿಂದ, ಒಮ್ಮೆಲೇ ನೆಲಕಚ್ಚುವುದನ್ನು ನಾವು ಕಾಣಬಹುದು. ಹಾಗಾಗೀ ಸಾಮಾನ್ಯರಾದ ನಾವು ಸಂದರ್ಭಗಳಲ್ಲಿ ವ್ಯಕ್ತಿ ವರ್ತಿಸುವ ರೀತಿಯಿಂದ ವ್ಯಕ್ತಿತ್ವ ಬದಲಾಗುವ ದಿಕ್ಕುಗಳನ್ನು ಪತ್ತೆ ಹಚ್ಚಬಹುದು. ಮಾತ್ರವಲ್ಲ ಸರಿದಿಕ್ಕಿಗೆ ಕೊಂಡೊಯ್ಯಬಹುದು. ಅರ್ಥಾತ್ ವ್ಯಕ್ತಿತ್ವವನ್ನು ಇಚ್ಛಿಸಿದ ರೀತಿಯಲ್ಲಿ ನಾವು ಮುನ್ನಡೆಸಬಹುದಾಗಿದೆ.
ಮಗು ಶುಭ್ರವಾದ ಬಿಳಿಹಾಳೆಯಿದ್ದಂತೆ, ಬಿಳಿಹಾಳೆಯ ಮೇಲೆ ಕೆಸರು ಚೆಲ್ಲಿದರೂ ಅಂಟಿಕೊಳ್ಳುತ್ತದೆ!........ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದರೂ ಅದೂ ಕೂಡಾ ಒಡಮೂಡುತ್ತದೆ. ಅವಳಿ ಗಿಳಿಗಳ ಕತೆಯ ಆದರ್ಶ ಇಲ್ಲಿ ಉಲ್ಲೇಖನೀಯವಾದುದು. ಸಂನ್ಯಾಸಿಯೊಂದಿಗೆ, ಬೆಳೆದ ಗಿಳಿ, ಬಂದ ಅತಿಥಿಗಳನ್ನು ಸ್ವಾಗತಿಸಿದರೆ, ಕಳ್ಳರೊಂದಿಗೆ ಬೆಳೆದ ಗಿಳಿ ‘ಕಡಿ!......ಕೊಚ್ಚು!.......ಕೊಲ್ಲು!....... “ಎಂಬ ಉದ್ಗಾರ ತೆಗೆಯುವ ಸಾಂಕೇತಿಕ ಕತೆ, ವ್ಯಕ್ತಿತ್ವವನ್ನು ಇಚ್ಛಿತ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮಗುವಿನ ವ್ಯಕ್ತಿತ್ವ ಪೋಷಣೆಗೆ ಅಗತ್ಯವಾದ ಪರಿಸರವನ್ನು ಸೃಜಿಸಬೇಕಾದುದು ಕುಟುಂಬ, ಸಮಾಜ ಇತ್ಯಾದಿ ಎಲ್ಲಾ ವ್ಯವಸ್ಥೆಯ ಕರ್ತವ್ಯವೇ ಆಗಿದೆ. ಕೇವಲ ಒದಗಿ ಬರುವ ಅಥವಾ ಒದಗಿರುವ ಪರಿಸರದಿಂದ ವ್ಯಕ್ತಿತ್ವ ನಿರ್ಮಾಣ ಅಸಾಧ್ಯ. ಇವುಗಳಿಗೆ ಪೋಷಕವಾಗಿ ವ್ಯಕ್ತಿಯಲ್ಲಿ ‘ಇಚ್ಛಾಶಕ್ತಿ’ ಅವಶ್ಯಕ. ‘ಇಚ್ಛಾಶಕ್ತಿ’ಯನ್ನು ನಿರ್ಧಾರಿತ ಗುರಿಯನ್ನು ಸಾಧಿಸುವ ತೀವ್ರವಾದ ಹಂಬಲವೆಂದು ಗುರುತಿಸಬಹುದು. ಗುರಿಸಾಧನೆಯವರೆವಿಗೂ ಸ್ಥಿರವಾಗಿರದ ಚಂಚಲ ಚಿತ್ತ, ವ್ಯಕ್ತಿತ್ವ ನಿರ್ಮಾಣದಲ್ಲಿ ದೊಡ್ಡ ಅಡೆತಡೆಯಾಗಿ ಗೋಚರಿಸುತ್ತದೆ. ಈ ಪ್ರಬಲವಾದ ಇಚ್ಛಾಶಕ್ತಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದ ಗಾಂಧೀಜಿ ಮೊದಲ ತೆಗೆದುಕೊಂಡ ಕೇಸ್ ನಲ್ಲಿಯೇ ಯಶಸ್ಸಿನ ತುದಿಗಾಲಲ್ಲಿ ನಿಂತಿದ್ದರೂ, ಅಂತಿಮ ಕ್ಷಣದಲ್ಲಿ ತನ್ನ ಕಕ್ಷಿದಾರನ ಮೋಸ ಅರಿತು, ತಮ್ಮ ವಾದವನ್ನು ನ್ಯಾಯಾಲಯದಿಂದ ಹಿಂತೆಗೆದುಕೊಂಡು, ತಮ್ಮ ವಾದವನ್ನು ಸೋಲಿಸಿ, ಸತ್ಯವನ್ನು ಗೆಲಿಸಿದ ಸಂಗತಿ ‘’ಸತ್ಯ’ ಕುರಿತ ‘ಇಚ್ಛಾಶಕ್ತಿ’ಯನ್ನು  ಪ್ರಚುರ ಪಡಿಸುತ್ತದೆ. ಸಾವಿನ ಭಯವನ್ನೂ ಮೀರಿ, ಸತ್ಯ ಸಂಧತೆಗೆ ಬದ್ಧವಾದ ‘ಪುಣ್ಯಕೋಟಿ’ಯ ವ್ಯಕ್ತಿತ್ವ ಸತ್ಯಸಂಧತೆಯಲ್ಲಿ ನೆಲೆ ಕಾಣುತ್ತದೆ.  ಆದರೆ, ಇಂದು ಈ ‘ಇಚ್ಛಾಶಕ್ತಿ’ಯ ಕೊರತೆ ಎದ್ದು ಕಾಣುತ್ತಿದೆ. ಬಹುಶಃ ತಂದೆ-ತಾಯಿ, ಪೋಷಕರ ಅತಿಯಾದ ರಕ್ಷಣಾ ಪ್ರವೃತ್ತಿ ಈ ಇಚ್ಛಾಶಕ್ತಿಗೆ ಮಾರಕವಾಗಿದೆಯೇನೋ?!...... ಎಂಬ ಅಂಶ ಅನುಭವಕ್ಕೆ ಬರುತ್ತಿದೆ. ಹಾಗಾಗೀ ಮಗು ಇಂದು ಅತಿಯಾದ ಸೂಕ್ಷ್ಮ ಮನಸ್ಥಿತಿಗೆ ಜಾರುತ್ತಿದ್ದಾರೆ. ಇಂದಿನ ಮಕ್ಕಳು ಸದೃಢರಾಗಿ ಬೆಳೆಯುತ್ತಿಲ್ಲ. ಸೂಕ್ಷ್ಮಮತಿಗಳಾಗುತ್ತಿದ್ದಾರೆ. ಈ ಸೂಕ್ಷ್ಮಮತಿತ್ವವು ಒಂದು ಕಡೆ, ಕುಟುಂಬ, ಶಾಲೆ-ಕಾಲೇಜು ಎಲ್ಲಾ ಕಡೆ ಇರುವ ಕಠಿಣ ಶಿಸ್ತಿನ ಕಾರಣದಿಂದ ಒಡಮೂಡುತ್ತಾ ಇದ್ದರೆ; ಮತ್ತೊಂದು ಕಡೆ, ಮಕ್ಕಳ ಮೇಲಿನ ಅತಿಯಾದ ಖಾಳಜಿಯಿಂದ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವ ಮನೋವೃತ್ತಿಯಿಂದ ಉಂಟಾಗುತ್ತಿದೆ. ಅತಿಯಾದ ‘ಭಯ’ ಹಾಗೂ ‘ಖಾಳಜಿ’ತ ಪ್ರಭಾವಳಿಂದ ಮಗುವಿನ ಮನಸ್ಥಿತಿ ಸೂಕ್ಷ್ಮವಾಗುತ್ತಾ ಸಾಗಿದೆ. ಹಾಗಾಗಿಯೇ ಕಿಶೋರಾವಸ್ಥೆಯಲ್ಲಿ ಮಕ್ಕಳು, ವ್ಯಕ್ತಿತ್ವ ನಿರ್ಮಾಣಗೊಳ್ಳುವ ಮೊದಲೇ, ವಿವೇಚನೆ ಇಲ್ಲದೆಯೇ, ಆತ್ಮಹತ್ಯೆ’ ಯಂತಹ ಪಾತಕಗಳಿಗೆ ಕೈ ಹಾಕುತ್ತಿರುವುದು. ಇಂತಹ ‘ಸೂಕ್ಷ್ಮಮತಿತ್ವ’ಕ್ಕೆ, ಭಾವೋದ್ವೇಗಗಳು ಪ್ರಮುಖ ಕಾರಣ. ಮಕ್ಕಳ ಭಾವನೆಗಳಿಗೆ ತರಬೇತಿ ನೀಡುವ ಅಗತ್ಯತೆ ಇದೆ. ಅವರ ಭಾವನೆಗಳಿಗೆ ಸ್ಪಂದಿಸುವ, ಪೋಷಿಸುವ, ಶುದ್ಧೀಕರಿಸುವ ಕಾರ್ಯ ಜರುಗಬೇಕಿದೆ. ಮಕ್ಕಳ ಭಾವನೆಗಳಿಗೆ ಹಿರಿಯರಾದವರು ಸ್ಪಂದಿಸಬೇಕು. ವಿವೇಚನೆ ಅವರ ಹೃದಯವನ್ನು ತಟ್ಟಿದರೆ ಸಾಕು ಎಂದು ಕೊಳ್ಳುತ್ತೇವೆ. ಆದರೆ, ‘ವಿವೇಚನೆ’ ಅವರನ್ನು ತಟ್ಟಬಾರದು, ಮುಟ್ಟಬೇಕು. ತಟ್ಟಿದರೆ, ನೋವುಂಟಾಗುತ್ತದೆ. ಆದರೆ, ಮುಟ್ಟಿದರೆ, ಹಿತವಾಗಿರುತ್ತದೆ. ಸಾಹಿತ್ಯದಲ್ಲಿ ಬರುವ, ‘ಕಾಂತಾಸಂಹಿತೆ’ಯನ್ನು ಇಲ್ಲಿ ಆದರ್ಶವಾಗಿ ಸ್ವೀಕರಿಸಬೇಕು. ‘ಕಾಂತೆ’ಯ ನುಡಿ ಹಿತವಾದಂತೆ, ನಮ್ಮ ಮಾತುಗಳೂ ಅವರಿಗೆ ಹಿತವೆನಿಸಬೇಕು. ಅದಕ್ಕಾಗಿ, ನಾವು ಮಕ್ಕಳೊಂದಿಗೆ, ಒಂದು ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಭಯ ಹುಟ್ಟಿಸುವುದರಿಂದಾಗಲಿ, ಬಾಹ್ಯಶಿಸ್ತನ್ನು ಅವರ ಮೇಲೆ ಹೇರುವುದರಿಂದಾಗಲೀ, ನಾವು ಅವರ ವ್ಯಕ್ತಿತ್ವವನ್ನು ಇಚ್ಛಿಸಿದಂತೆ ರೂಪಿಸುವುದು ಸಾಧ್ಯವಿಲ್ಲ. ಆ ರೀತಿ ಒತ್ತಡದಿಂದ ರೂಪಿಸಿದ ವ್ಯಕ್ತಿತ್ವ ಕೇವಲ ತೋರಿಕೆಯ ವ್ಯಕ್ತಿತ್ವಾಗಿರುತ್ತದೆ. ಬದಲಿಗೆ ಮೊದಲು ಪ್ರೀತಿಯನ್ನು ಗಳಿಸಿಕೊಂಡು, ನಂತರ ಒಡಮೂಡಿಸುವ ವ್ಯಕ್ತಿತ್ವ, ಶಾಶ್ವತವಾಗಿರುತ್ತದೆ. ಮಕ್ಕಳ ಭಾವೋದ್ವೇಗಗಳನ್ನು ನಿಯಂತ್ರಿಸಬೇಕು. ಇಲ್ಲವೇ, ಮಕ್ಕಳ ಸೂಕ್ಷ್ಮ ಮನಸ್ಥಿತಿಯ ಕಟ್ಟೆ, ಭಾವ ಪ್ರವಾಹಕ್ಕೆ ತುತ್ತಾಗಿ, ವ್ಯಕ್ತಿತ್ವ ನಿರ್ಮಾಣವಾಗುವ ಮೊದಲೇ ಒಡೆದು ಹೋಗುತ್ತದೆ. ಪ್ರವಾಹದಂತೆ ಬರುವ ನದಿಯ ಅಲೆಗಳಿಗೆ ಅಣೆಕಟ್ಟು ಕಟ್ಟಿ, ಸ್ವಲ್ಪ ಸ್ವಲ್ಪವೇ ನೀರನ್ನು ಬಿಟ್ಟಲ್ಲಿ, ನೀರಿನ ಸದ್ಭಳಕೆಯಾಗಿ, ಉತ್ತಮ ಫಸಲನ್ನು ತೆಗೆಯಬಹುದಲ್ಲವೇ?!..... ಹಾಗೆಯೇ, ಭಾವಗಳ ಕಾಲ - ಕಾಲಿಕ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿದಲ್ಲಿ. ಸೂಕ್ಷ್ಮ ಮನಸ್ಥಿತಿಗೆ ಆಗುವ ಹಾನಿಯನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಭಾವನೆಗಳಿಗೆ ಸ್ಪಂದಿಸುತ್ತಾ, ಅವರಿಗೆ ಸಕಾಲಿಕ ಸಲಹೆ ಮಾರ್ಗದರ್ಶನವನ್ನು ಪ್ರೀತಿಯಿಂದ ನೀಡಿದಲ್ಲಿ, ಅವರ ಮನಸ್ಥಿತಿ ಗಟ್ಟಿಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ವ್ಯಕ್ತಿತ್ವ ವಿಕಸನದ ಅನುಭವ, ನಮಗುಂಟಾಗುವುದು ಮಗುವಿನ ಮಾತು ಹಾಗೂ ಕೃತಿಗಳಿಂದ. “ನಾಲಿಗೆ ಕುಲವನ್ನು ಹೇಳಿತು” ಎಂಬ ಮಾತಿದೆ. ಈ ಉಕ್ತಿಯನ್ನು ನಾವು ವಿಶಾಲವಾದ ಅರ್ಥದಲ್ಲಿ ತೆಗೆದುಕೊಂಡಾಗ, ‘ವ್ಯಕ್ತಿಯ ಭಾಷೆ, ವ್ಯಕ್ತಿತ್ವವನ್ನು ಸಾರುತ್ತದೆ’, ಎಂಬ ಮಾತು ನಿಹಿತವಾಗುತ್ತದೆ. ‘ಪ್ರಗತಿಪರತೆ’ಯು ವಿಕಸನದ ಲಕ್ಷಣ. ಈ ‘ಪ್ರಗತಿಪರತೆ’ ಎಲ್ಲದರಲ್ಲಿಯೂ ಗೋಚರಿಸುತ್ತದೆ. ಅದು ಭಾಷೆಯಾಗಿರಬಹುದು ಅಥವಾ ವ್ಯಕ್ತಿತ್ವವಾಗಿರಬಹುದು. ಇಲ್ಲಿ ಭಾಷೆಯ ವಿಕಸನವನ್ನು ನಾವು ವ್ಯಕ್ತಿತ್ವ ವಿಕಸನದಿಂದ ಬೇರೆಯಾಗಿ ನೋಡುವಂತಿಲ್ಲ!........ ಏಕೆಂದರೆ, ವ್ಯಕ್ತಿತ್ವ ವಿಕಸನದ ಒಂದು ಅವಿಭಾಜ್ಯ ಅಂಗವಾಗಿ, ‘ಭಾಷೆ’ ಕಾರ್ಯ ನಿರ್ವಹಿಸುತ್ತಾ ಇರುತ್ತದೆ. ಅಂತೆಯೇ ವ್ಯಕ್ತಿತ್ವ ವಿಕಸನದ ಧ್ಯೋತಕವಾಗಿಯೂ ‘ಭಾಷೆಯು ಕಾರ್ಯ ನಿರ್ವಹಿಸುತ್ತದೆ. ‘ತೊದಲು ನುಡಿಗಳನ್ನಾಡುತ್ತಾ, ತನ್ನ ತಾತನನ್ನು “ಬಾರೋ ತಾತ!......” ಎಂದು ಕರೆಯುತ್ತಿದ್ದ ಪುಟಾಣಿಯೇ, ಮುಂದೊಂದು ದಿನ, “ ಬಾ ಇಲ್ಲಿ ಸಂಭವಿಸು ಈ ನನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯವತಾರ” ಎಂಬ ಘನೋಕ್ತಿಯನ್ನು ಪರಿಚಯಿಸುತ್ತಾನೆ. ಹಾಗಾಗೀ ವ್ಯಕ್ತಿತ್ವ ವಿಕಸನವನ್ನು ಗುರುತಿಸುವುದು, ಆತನಾಡುವ ‘ಭಾಷೆ’ಯಿಂದಲೇ ಎಂದರೆ, ತಪ್ಪಾಗಲಾರದು. ಇದೇ ಭಾಷೆಯೇ, ಆತನ ಆಲೋಚನೆ, ಚಿಂತನೆಗಳಿಗೆ ನೆಲೆಯಾಗಿ, ವ್ಯಕ್ತಿತ್ವಕ್ಕೆ ಬುನಾದಿಯಾಗುತ್ತದೆ. ಈ ಭಾಷೆ ಹಾಗೂ ಆಲೋಚನೆಗಳು ಮಾನವನಲ್ಲಿ ವಿವಿಧ ಮೂಲಗಳಿಂದ ಸೃಜಿತವಾಗುತ್ತದೆ. ವಿಕಸನದ ಮೊದಲ ಹಂತಗಳಲ್ಲಿ ಆಲೋಚನೆ ಹಾಗೂ ಭಾಷೆಯ ಬೆಳವಣಿಗೆ ನಮ್ಮ ಬುದ್ಧಿಗಮ್ಯವಾಗಿರುವುದಿಲ್ಲ. ಆದರೆ, ವಿಕಸನವಾಗುತ್ತಾ ಸಾಗಿದಂತೆ, ಅನುಭವ ಹೆಚ್ಚಾದಂತೆ, ಆಲೋಚನೆ ಹಾಗೂ ಭಾಷೆ ಸಮಾನಾಂತರವಾಗಿ ಸಾಗದೆ, ಪರಸ್ಪರ ಸಮೀಪವಾಗುತ್ತಾ, ಆಗಾಗ ಅಲ್ಲಲ್ಲಿ ಸಂಧಿಸಿ, ಅಂತಿಮವಾಗಿ ಭಾಷೆಯಲ್ಲಿ ಆಲೋಚನೆ ಅಂತಿಮವಾಗಿ ಲೀನವಾಗುತ್ತದೆ. ಈ ಹಂತದಲ್ಲಿಯೇ ‘ವ್ಯಕ್ತಿತ್ವ’ ವಿಕಾಸ ಹೊಂದುವುದು. ಹಾಗಾಗೀ, ‘ವ್ಯಕ್ತಿತ್ವ ವಿಕಾಸ’ಗೊಳ್ಳುವುದು ಈ ಭಾಷೆ ಹಾಗೂ ಆಲೋಚನೆಗಳು ಸಂಧಿಸುವ  ಈ ‘ಸಂಧಿ ಕ್ಷೇತ್ರ’ದಲ್ಲಿಯೇ ಆಗಿದೆ. ಹಾಗಾಗೀ ವಿವೇಕಾನಂದರು, ನ್ಯೂಟನ್, ಆರ್ಯಭಟ, ಕುವೆಂಪು, ಮುಂತಾದ ಘನ ವ್ಯಕ್ತಿತ್ವಗಳು ರೂಪುಗೊಂಡಿರುವುದು. ಅವರ ಚಿಂತನೆಗಳು ‘ಚಿರಂಜೀವಿತ್ವ’ವನ್ನು ಪಡೆದಿರುವುದು, ಇದೇ ಸಾಂಕೇತಿಕ ಭಾಷೆಯಿಂದಲೇ ಆಗಿದೆ. ಹಾಗಾಗೀ ವ್ಯಕ್ತಿತ್ವ ವಿಕಸನಕ್ಕೆ ಭಾಷೆಯೇ ನೆಲೆ ಎನ್ನಬಹುದು.
ವ್ಯಕ್ತಿಯಾಡುವ ಮಾತೂ ಕೂಡಾ, ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಚುರ ಪಡಿಸುತ್ತವೆ. ಬಸವಣ್ಣನವರ ವಚನವನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮ. “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ, ಮಾಣಿಕ್ಯದ ದೀಪ್ತಿಯಂತಿರಬೇಕು”, ಅಂತೆಯೇ, ಮತ್ತೊಂದು ಉಕ್ತಿಯೂ ಇದನ್ನು ಪೋಷಿಸುತ್ತದೆ. “ಮಾತು ಹೇಗಿರಬೇಕು, ಭಾವ ಬಾಗಿರಬೇಕು”, ಎಂಬುದಾಗಿದೆ. ಇಲ್ಲಿ ಭಾಷೆಯು ವ್ಯಕ್ತಿಯ ವ್ಯಕ್ತಿತ್ವದ ಸ್ವರೂಪವನ್ನು ಹೇಗೆ ನಿರ್ಧರಿಸುತ್ತಿದೆ? ಎಂಬುದು ಸ್ಪಷ್ಟವಾಗಿದೆ. ಹಾಗಾಗೀ ಭಾಷೆಯು ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ, ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅಂತೆಯೇ, ವ್ಯಕ್ತಿಯ ವ್ಯಕ್ತಿತ್ವಕ್ಕೂ ಭಾಷೆಗೂ ಇರುವಂತಹ, ಅವಿನಾಭಾವವಾದ ಸಂಬಂಧ ಸ್ಪಷ್ಟವಾಗಿ ನಿರೂಪಿತವಾಗಿದೆ. ವಿವಿಧ ಭಾಷೆಗಳ ಜ್ಞಾನವೂ ವ್ಯಕ್ತಿತ್ವವನ್ನು ಉನ್ನತಿಗೇರಿಸವಲ್ಲಿ, ಸಹಕಾರಿಯಾಗಲಿದೆ. ಮಾತೃಭಾಷೆಯೊಂದಿಗೆ,  ವಿವಿಧ ಭಾಷೆಗಳ ಅಧ್ಯಯನ ಇಂದಿನ ಅಗತ್ಯವಾಗಿದೆ. ವ್ಯಕ್ತಿಯ ವ್ಯಕ್ತಿತ್ವ, ದೇಶಾತೀತ, ಕಾಲಾತೀತವಾಗಿ ಪ್ರತಿಷ್ಠಾಪನೆಗೊಳ್ಳುವಲ್ಲಿ, ‘ಬಹುಭಾಷಿಕ ಜ್ಞಾನ’ ಅಗತ್ಯವಾದುದು. ಇದು ವಿಶ್ವದಲ್ಲಿ ಹರಡಿರುವ, ವಿವಿಧ ಆಲೋಚನೆ, ಚಿಂತನೆಗಳ ಜ್ಞಾನವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ. ಈ ಜ್ಞಾನಾಂಶಗಳ ಗಳಿಕೆಯಿಂದ, ವ್ಯಕ್ತಿಯು ಮಿಶ್ರ ಚಿಂತನೆಗಳನ್ನು ಬಳಸಿಕೊಂಡು, ವಿಶಿಷ್ಠ ಚಿಂತನೆಗಳನ್ನು ಆಧರಿಸಿದ, ವ್ಯಕ್ತಿತ್ವ ಸಂರೂಪಿಸಿಕೊಳ್ಳಲು ನೆರವಾಗುತ್ತದೆ. ಹಾಗಾಗೀ, ಭಾಷೆಗಳಲ್ಲಿ ಭೇದವರಿಯದೇ, ಮಡಿವಂತಿಕೆಯಿಂದ ದೂರವಾಗಿ, ಎಲ್ಲವನ್ನೂ ಸ್ವೀಕರಿಸುವ ಪ್ರವೃತ್ತಿ ಇರಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿತ್ವ ಭಾಷಾ ಸಂವಹನವನ್ನು ಆಧರಿಸಿರುತ್ತದೆ. ಬೇಂದ್ರೆಯವರ ಮಾತುಗಳು, “ನಾನು ಹೇಳಿದ್ದು, ನೀವು ಕೇಳಿದ್ದು ಒಂದೇ ಆಗಬೇಕು”, ಎಂಬ ಮಾತು, ಬಹಳ ಪ್ರಮುಖವಾಗುತ್ತದೆ. ಇಂದು ಯಾವುದೇ ವೃತ್ತಿಗೆ ಸೇರಲು, ಜ್ಞಾನದ ನೆಲೆಯ ಪರೀಕ್ಷೆಗಿಂತ, ‘ವ್ಯಕ್ತಿತ್ವ ಪರೀಕ್ಷೆ’ಗಳಿಗೆ, ಆದ್ಯತೆ ನೀಡಲಾಗುತ್ತಿದೆ. ಈ ವ್ಯಕ್ತಿತ್ವದ ಪರೀಕ್ಷೆಗಳಲ್ಲಿ ‘ಸಂವಹನ ಭಾಷೆ’ಗೆ ಪ್ರಾಧಾನ್ಯತೆ ಇದೆ. ಇಲ್ಲಿ ‘ಸಂವಹನ ಭಾಷೆ’ ಎಂದರೆ, ಕೇವಲ ಬುದ್ಧಿ ಪ್ರಾಧಾನ್ಯ ಭಾಷೆ ಎಂದುಕೊಳ್ಳದಿರಿ. ವ್ಯಾಕರಣಾಧಾರಿತವಾಗಿ ಮಾತನಾಡುವುದಷ್ಟಕ್ಕೇ ‘ಸಂವಹನ ಭಾಷೆ’ ಸೀಮಿತವಾಗಿರುವುದಿಲ್ಲ.  ವ್ಯಕ್ತಿತ್ವ ಪರೀಕ್ಷೆಯಲ್ಲಿ, ಅದು ಹೃದಯ ಸಂಬಂಧೀ ಭಾಷೆಯಾಗಿರಬೇಕು. ಸನ್ನಿವೇಶ, ಸಂದರ್ಭಗಳಲ್ಲಿ ವ್ಯಕ್ತಿಯ ‘ಭಾಷಾ ಬಳಕೆ’ಯನ್ನು ವಿವೇಚಿಸುವುದು ವಿಶೇಷವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಮತ್ತೊಬ್ಬರೊಂದಿಗೆ ವ್ಯವಹರಿಸುವ ‘ಭಾಷಾವಿವೇಕ’ ಪ್ರಮುಖವಾಗುತ್ತದೆ. ‘ಭಾಷಾ ಬಳಕೆ’ಯಲ್ಲಿನ ಸಾತ್ವಿಕತೆ’ಯ ನಿರೀಕ್ಷೆ ಇರುತ್ತದೆ.  ಈ ಹಿನ್ನೆಲೆಯಲ್ಲಿಯೂ ವ್ಯಕ್ತಿತ್ವ ವಿಕಸನದಲ್ಲಿ ‘ಸಂವಹನ ಭಾಷೆ’ ಪ್ರಮುಖವಾಗುತ್ತದೆ.
ಈ ನೆಲೆಗಟ್ಟಿನಲ್ಲಿ ಪರಿಭಾವಿಸುವುದಾದರೆ, ಶಿಕ್ಷಣ ವ್ಯವಸ್ಥೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ, ಭಾಷಿಕ ನೆಲೆಯನ್ನು ಒದಗಿಸಬೇಕು. ಈ ಹಿನ್ನೆಲೆಯಲ್ಲಿ, ‘ಪರಿಪೂರ್ಣತೆ’ಯನ್ನು ನಿರೂಪಿಸುವುದು ಅವಶ್ಯಕವಾದುದು. ‘ಪರಿಪೂರ್ಣತೆ’ಯನ್ನು ‘ಇಡಿ ವಿಕಸನ’ ಎಂದು ನಿರೂಪಿಸಬಹುದು. “ ಇಡಿ ಎಂದರೆ, ಬಿಡಿಗಳ ಸಂಯೋಜನೆಯಲ್ಲ, ಅದು ಬಿಡಿ ಭಾಗಗಳು ಪರಸ್ಪರ ಸಂಯೋಗಗೊಂಡು, ಕಾರ್ಯ ನಿರ್ವಹಿಸುವ ಪರಿಯಾಗಿದೆ.” ಎಂದು ಸ್ಟೀನರ್ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾಷೆಯ ನೆಲೆಯನ್ನಿರಿಸಿಕೊಂಡು, ವಿವಿಧ ವ್ಯಕ್ತಿತ್ವ ವಿಕಸನದ ಚಟುವಟಿಕೆಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಂಯೋಜಿಸಿ, ಸಂಘಟಿಸಿದಲ್ಲಿ, ಬಹುಶಃ ‘ವ್ಯಕ್ತಿತ್ವ ವಿಕಸನ’ದಲ್ಲಿ, ಪರಿಪೂರ್ಣತೆ ಒದಗಿಸವಲ್ಲಿ ಯಶಸ್ವೀ ಕಾರ್ಯಾಚರಣೆ ಎನ್ನಬಹುದು. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಇತ್ಯಾದಿ, ಕಲಿಕಾ ವಿಷಯಗಳಿಗೆ, ಎಲ್ಲವಕ್ಕೂ ಅಡಿಪಾಯವಾಗಿ ಭಾಷೆಯನ್ನು ನೆಲೆಗೊಳಿಸಬೇಕು. ಹಾಗಾಗಿಯೇ, ಕೆಲ ಕ್ಷೇತ್ರಗಳಲ್ಲಿ ಮಾತ್ರವಿರುವ, ‘ಪಠ್ಯಕ್ರಮ ವ್ಯಾಪೀ ಭಾಷೆ’ ಕಾರ್ಯಾಚರಣೆ ಶಿಕ್ಷಣ ವ್ಯವಸ್ಥೆಯ ತಳ ವ್ಯವಸ್ಥೆಯಿಂದಲೇ ಅಸ್ಥಿತ್ವಕ್ಕೆ ಬರಬೇಕು. ಗಣಿತದಭಾಷೆ, ವಿಜ್ಞಾನದ ಭಾಷೆ, ಸಮಾಜವಿಜ್ಞಾನದ ಭಾಷೆ, ಅಷ್ಟೇ ಏಕೆ?!......... ಭಾಷೆಯ ಭಾಷೆ!.......... ಮಾತ್ರವಲ್ಲ ವ್ಯಕ್ತಿತ್ವದ ಭಾಷೆ!............ಈ ಪರಿಕಲ್ಪನೆಗಳಡಿಯಲ್ಲಿ ಪಠ್ಯಕ್ರಮವನ್ನು ಸೃಜಿಸಬೇಕು. ಅಂತೆಯೇ. ಶಾಲಾ-ಕಾಲೇಜು ಸನ್ನಿವೇಶಗಳಲ್ಲಿ ‘ವ್ಯಕ್ತಿತ್ವ ವಿಕಸನ’ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಭಾಷಾ ಆಧಾರಿತ ‘ವ್ಯಕ್ತಿತ್ವ ವಿಕಸನ ಶಿಕ್ಷಣ’ಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾಷಾವಿಕಸನ ವ್ಯಕ್ತಿತ್ವ ವಿಕಸನಕ್ಕೆ ನೆಲೆಯಾಗಲಿ ಎಂಬುದೇ ಇಲ್ಲಿನ ಆಶಯ.

No comments:

Post a Comment