Monday, 19 March 2018

'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಗೆ ನನ್ನದೊಂದು ಕಿರುಕಾಣಿಕೆ. ಸ್ತ್ರೀಶಕ್ತಿ ಮನುಕುಲದ ಮಹಾಶಕ್ತಿಯೇ ಸ್ತ್ರೀಶಕ್ತಿಯೇ ನಾರೀ ಅನುಗಾಲವು ಸೇವಿಸುವ ಮನುಕುಲದ ರುವಾರಿ ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!............. ಜನನೀ ಜನ್ಮಭೂಮಿ ನುಡಿಜಲವು ನೀ ತಾಯೇ ವಾತ್ಸಲ್ಯದಾಯಿನೀ ಪ್ರೇಮದಾತೆ ಮಾಯೇ ಅನುಬಂಧ ಸೃಜಿಸುವ ಸಮ್ಮೋಹ ಶಕ್ತಿಯೇ ಮನುಕುಲದ ಮಕುಟಮಣಿ ಕುಲದಾದಿ ಮಾತೆಯೇ ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!............. ನಾರಿಗುಣ ಶಿರೋಮಣಿ ಸ್ನೇಹದಾತೆ ರಮಣಿ ಜೀವಕಣದ ಬಳುವಳಿಯಾ ನೀಡೋ ತ್ಯಾಗರೂಪಿಣಿ ಅಣು ಅಣುವೂ ಕಣಕಣವೂ ಸ್ನೇಹಮಿಡಿಯೋ ಹೃದಯಮಣಿ ಕ್ಷಣಕ್ಷಣಕೂ ಬೆಳಕಾಗೋ ಸೃಜನಶೀಲ ಜ್ಞಾನವಾಣಿ ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!............. ಸಾಧನೆಯಾ ಹಾದಿ ನೀನೇ ನುಡಿಗೀತೆವಾಣಿ ಕ್ರೀಡಾವಿನೋದದಿ ಸಾಧನೆಯ ಹೊಂಗಣಿ ಸಂಶೋಧನೆ ಪ್ರಗತಿನೋಟ ಬೀರೋತಂತ್ರ ವಿಜ್ಞಾನಿ ದೇಶಕಾಗಿ ಪ್ರಾಣತ್ಯಜಿಸೋ ನಾರಿಯೇ ವೀರಾಘ್ರಣಿ ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!............. (ಪದಸಾ ಸರಿಗ ರಿಗಮನಿದನಿಪಾ ದಪಗಾ ಮಗರಿ ದದದನಿದನಿಪಾ ದದದನಿದನಿಪಾ..... ಪದಸಾ............ ಪದಸಾ........)

Thursday, 8 March 2018

ಸಿಂಧಘಟ್ಟದ ಸಿರಿ ಸೊಬಗು

ಅಕ್ಕರೆ : ಸಿಂಧಘಟ್ಟದ ಸಿರಿ ಸೊಬಗು

ಅಕ್ಕರೆ : ಸಿಂಧಘಟ್ಟದ ಸಿರಿ ಸೊಬಗು

ಸಿಂಧಘಟ್ಟದ ಸಿರಿ ಸೊಬಗು YouTube ನಲ್ಲಿ.
ದುರ್ಗ’ಮನ’ - ಒಮ್ಮೆ ಓದಿ. ನಿಮ್ಮ ಮನವು ರೋಚಕತೆಯಿಂದ ಸಿಂಧಘಟ್ಟ ತಲುಪುವಲ್ಲಿ, ಯಾವುದೇ ಅನುಮಾನ ಇಲ್ಲ. ಟ್ರಕ್ಕಿಂಗ್ ಪ್ರಿಯರ ಸ್ವರ್ಗ ಈ ತಾಣ‌‌. ವರ್ಷಕ್ಕೊಮ್ಮೆಯಾದರೂ ಭೇಟಿ ನೀಡಲು ಹಂಬಲಿಸಲಿದೆ ನಿಮ್ಮ ಮನ.
(“ಸಿಂಧಘಟ್ಟದ ಸುವರ್ಣ ಇತಿಹಾಸದ ಹೆಜ್ಜೆ ಗುರುತುಗಳು” –
‘ಸಿಂಧಘಟ್ಟದ ದೇವರು ಹಿಂದುಮುಂದು ಎಂಬ ಖ್ಯಾತಿ’, ಮುದಿಬೆಟ್ಟದಲ್ಲಿರುವ ಈಜಿಪ್ಟ್ ನಾಗರೀಕತೆ ಹೋಲುವ ‘ಸತ್ತವರ ದಿಬ್ಬ(ಹೆಣದ ಮಾಳ), ಹಾವಿನ ಮಾಳ, ಟಿಪ್ಪುಡ್ರಾಪ್ ಹೋಲುವ ‘ಒಕ್ಕರಸಿ ಕಲ್ಲು’, ಬೆಟ್ಟದ ನಿಗೂಢ ಸುರಂಗ, ಕಿರಬನ ಬೆಟ್ಟ, ಜೇನುಕಲ್ಲುಗುಡ್ಡ, ಚಂದಮಾಮನ ಗುಡ್ಡ, ಏಕಶಿಲೆಯ ‘ನಾರಾಯಣಗಿರಿದುರ್ಗ’, ಫ಼ಕೀರನ ತೆಕ್ಕೆ, ದುರ್ಗಮವಾದ ಏಳುಸುತ್ತಿನ ಕೋಟೆ, ಅರಿಶಿನದ ನೀರಿನ ಸೀತೆಕೊಳ, ಭೀಮನ ದೊಣೆ, ಅರ್ಜುನನ ದೊಣೆ, ಮೂಲ ನೆಲೆಯಲ್ಲಿರುವ ಹೊಯ್ಸಳದೇವಾಲಯಗಳಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಹಾಗೂ ಸಂಗಮೇಶ್ವರ ದೇವಾಲಯ, ಊರ ಸುತ್ತಣ ಕೋಟೆ, ಸಿಂಧಘಟ್ಟದ ಗ್ರಾಮ ದೇವತೆ ಲಕ್ಷ್ಮೀದೇವಮ್ಮ, ಶಕ್ತಿದೇವತೆ ತಗ್ಗಿತಾಳಮ್ಮ, ಪಂಚಲಿಂಗಗಳು, ದಿಡ್ಡಿಬಾಗಿಲು, ಕೋಟೆ ಆಂಜನೇಯ, ವಿಘ್ನ ನಿವಾರಕ ವಿಘ್ನೇಶ್ವರ, ಸಂಕ್ರಾಂತಿ ಮಂಟಪ, ಮಹಾನವಮಿ ಮಂಟಪ, ಉತ್ಸವ ಮಂಟಪ, ಓಕಳಿ ಮಂಟಪ, ಉಯ್ಯಾಲೆ ಮಂಟಪ, ಸಂಧ್ಯಾವಂದನೆ ಮಂಟಪ, ಮೂರುಕಾಲು ಮಂಟಪ, ವಿಜಯನಗರ ಕಾಲದ ಮಸೀದಿ, ದೊಡ್ಡ ಕೆರೆ, ಕೆರೆಯೊಳಗೆ ಎರಡು ಬೃಹತ್ ಬಾವಿಗಳು, ಕೆರೆಯೊಳಗಿರುವ ಬೃಹತ್ ಗಾಣದ ಕಲ್ಲು, ಊರ ಮೂಲೆಯಲ್ಲಿರುವ ವಿಶಿಷ್ಟ ನೆಲೆಯ ಕರಿಕಲ್ಲು,)
“ಊರಿಂದ ಅಜ್ಜಿ ಬಂದಿಹಳು
ರುಚಿ ರುಚಿ ತಿಂಡಿ ತಂದಿಹಳು
ಉಂಡೆ ಚಕ್ಕುಲಿ ಕೋಡುಬಳೆ
ಸವಿ ಸವಿಯಾದ ರಸಬಾಳೆ”
ಅಬ್ಬಬ್ಬಾ! ಅಜ್ಜಿ ಮನೆಗೆ ಬಂದಾಗ ಮಗುವಿಗೆ ಅದೇನು ಸಂಭ್ರಮ!............................ಅದೇನು ಉಲ್ಲಾಸ!................ ನಿಜ ಇಂತಹ ಸಂಭ್ರಮಕ್ಕೆ ಕಾರಣವಾಗುವವಳು ಅಜ್ಜಿ. ‘ಅಜ್ಜಿ’ ನಮ್ಮ ಮನೆಗೆ ಬಂದಾಗಲೇ ಇಷ್ಟೊಂದು ಸಂಭ್ರಮ ಇದ್ದಲ್ಲಿ, ಅಜ್ಜಿಯೂರಿಗೆ ಹೋಗುವ ದಿನದಂದು “ಸ್ವರ್ಗಕ್ಕೆ ಮೂರುಗೇಣೆ” ಸರಿ. ಅಂತಹ ಸ್ವರ್ಗ ನನ್ನಜ್ಜಿಯೂರು. ಅದೇ ‘ಸಿಂಧಘಟ್ಟ’. ನನಗೆ ಅಜ್ಜಿಯೂರೆಂದರೆ ಪ್ರಾಣ. ಪಂಪನ ಬನವಾಸಿಯ ಪ್ರೇಮದಂತೆ, ನನ್ನ ಮನವೂ ಕೂಡಾ, “ಸದಾಕಾಲ ನೆನೆವುದೆನ್ನ ಮನಂ ಸಿಂಧಘಟ್ಟಮಂ”. ಆತ ಕೋಗಿಲೆಯಾಗಿ, ಮರಿದುಂಬಿಯಾಗಿಯಾದರೂ ಈ ನೆಲದಲ್ಲಿ ಹುಟ್ಟುಬೇಕೆಂಬ ಆಸೆಯನ್ನು ಅಭಿವ್ಯಕ್ತಿಸುತ್ತಾನೆ. ನನಗೆ ಒಂದು ಪುಟ್ಟ ಇರುವೆಯಾಗಿದರೂ ಇದೇ ನೆಲದಲ್ಲಿ ಹುಟ್ಟಬೇಕೆಂಬ ಆಸೆ. ಹೌದು ನನ್ನ ಜನ್ಮದ ನೆಲೆಯಾಗಿ, ಬಾಲ್ಯದ ಬೆಳದಿಂಗಳೂಟಕ್ಕೆ ಹಸುವಿನ ನೊರೆಹಾಲ ನೀಡಿದ ನೆಲೆಯಾಗಿ ನಿಂತಿದುದು ನನ್ನಜ್ಜಿಯೂರು. ಪುಟ್ಟ-ಪುಟ್ಟ ಕೈಗಳಲ್ಲಿ ತಾಳ ಹಾಕುತ್ತಾ, ರಾಮಮಂದಿರದ ಭಜನೆ, ಸತ್ಸಂಗದಿಂದ ಇಂದಿನ ನನ್ನ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿ ಹಾಡಿದ ನನ್ನಜ್ಜಿಯೂರು. ಅಜ್ಜಿ ಊರಿಗೆ ಹೊರಡೋಣವೆಂದರೆ ಸಾಕು, ನನಗದೇನೋ ಸಂಭ್ರಮ. ನನಗೆ ಇನ್ನೂ ನೆನಪಿದೆ. ಆಗ ಪ್ರಾಯಶಃ ನನಗೆ 7 1/2 ಯಿಂದ 8 ವರ್ಷಗಳಿರಬೇಕು. ಬೇಸಿಗೆ ರಜೆ ಕಳೆಯಲು ಅಜ್ಜಿಯೂರಿಗೆ ತೆರಳಿದ್ದೆ. ಬೇಸಿಗೆ ರಜೆ ಕಳೆದ ಮೇಲೆ, ಮತ್ತೆ ಮಂಡ್ಯಕ್ಕೆ ನನ್ನನ್ನು ಕರೆತರಲು ನನ್ನ ಮುದ್ದಿನ ತಾತ ನಾಣಿಮೇಷ್ಟ್ರು ಪಟ್ಟ ಪಾಡು ಅಷ್ಟಿಟ್ಟಲ್ಲ. ಮಂಡ್ಯಕ್ಕೆ ಹೊರಡುವ ದಿನ ಬಂದಿದ್ದರಿಂದ, ಇಲ್ಲದ ಜ್ವರವನ್ನು ಬರಿಸಿಕೊಂಡದ್ದೂ ಉಂಟು. ಕೊನೆಗೆ ನನ್ನನ್ನು ಮಂಡ್ಯಕ್ಕೆ ಕರೆತರಲು, ಸತ್ಯ ಹೇಳಬೇಕಾದ ಮೇಷ್ಟ್ರಿಗೆ, ಸುಳ್ಳೇ ಸಾಥ್ ನೀಡಬೇಕಾಗಿ ಬಂದಿತು. ನನ್ನನ್ನು ಕೃಷ್ಣರಾಜಪೇಟೆಗೆ ಕರೆದುಕೊಂಡು ಹೋಗುತ್ತೇನೆಂದು ಮಂಡ್ಯಕ್ಕೆ ಕರೆ ತಂದಿದ್ದರು. ಬಸ್ ಹತ್ತಿದಾಗಲೂ ಅನುಮಾನ ನನಗೆ!....... ಆದರೆ, “ರಸ್ತೆ ರಿಪೇರಿ, ಮತ್ತೊಂದು ಮಾರ್ಗದಿಂದ ಬಸ್ ಕೃಷ್ಣರಾಜಪೇಟೆಗೆ ಕರೆದೊಯ್ಯುತ್ತಿದೆ” ಎಂದು ಹೇಳಿ ಕರೆತಂದರು. ಮಂಡ್ಯಕ್ಕೆ ಬಂದ ಮೇಲೆ ನನ್ನನ್ನು ಸಮಾಧಾನ ಪಡಿಸಲು ಹೆಚ್ಚು ಕಡಿಮೆ ಒಂದು ದಿನವೇ ಬೇಕಾಗಿತ್ತು.
ಇದೇನು?!......... ಆ ಊರಿನಲ್ಲಿ ಅಂತಹದ್ದೇನಿದೆ ಎಂದು ಕೊಂಡಿರಾ?!........... ನಿಜ ಅದು ಅಕ್ಷರಶಃ ಕುತೂಹಲಗಳನ್ನು ಹುಟ್ಟಿಸುವ ಊರು, ಈ ಊರಿನ ಬಗೆಗಿನ ಕುತೂಹಲವೇ, ಮುಂದೊಂದು ದಿನ ನನಗೆ ‘ಸಿಂಧುಘಟ್ಟದ ಸುವರ್ಣ ಇತಿಹಾಸ’ವನ್ನು ಬರೆಯಲು ಪ್ರೇರಣೆ ನೀಡಿತು. ತಾತ ಕೊಡಿಸಿದ ಗೊಂಬೆ ಶರ್ಟ್ ಹಾಕಿಕೊಂಡು, ಪುಟ್ಟ ಪುಟ್ಟ ಬೆರಳುಗಳಲ್ಲಿ ತಾತನ ಕೈಹಿಡಿದುಕೊಂಡು ತೋಟಕ್ಕೆ ತೆರಳುವಾಗ, ನನ್ನ ಗಮನವನ್ನು ಸೆಳೆಯುತ್ತಿದ್ದುದು, ಆ ‘ದೂರದ ಬೆಟ್ಟ’. ನನಗೆ ಬೆಟ್ಟದ ಕಥೆ ಕೇಳುವ ಹುಚ್ಚು. “ತಾತ!..... ತಾತ!......ನನಗೆ ಆ ಬೆಟ್ಟದ ಕಥೆ ಹೇಳು ತಾತ!.....” ಎಂದು ಕೇಳುತ್ತಿದ್ದೆ. ಮನೆಯಿಂದ ತೋಟಕ್ಕೆ ತೆರಳಿ, ಮರಳಿ ಬಂದರೂ ಆ ಕಥೆ ಮುಗಿಸಲು ನಾನು ಬಿಡುತ್ತಿರುಲಿಲ್ಲ. ಆಗ ತಾತ ಹೇಳಿದ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. “ಮಗೂ ಇದು ಸಿದ್ದರಬೆಟ್ಟ!. ಯೋಗಿಗಳು, ಮಹಾಪುರುಷರು ಆದ ಸಿದ್ದರು, ಉತ್ತರದ ಹಿಮಾಲಯದಿಂದ ಬಂದವರಂತೆ, ಅವರು ಯೋಗ ಸಿದ್ದಿಯನ್ನು ಪಡೆದಿದ್ದರಂತೆ!. ಅವರ ಜೀವನ ಶೈಲಿ ವಿಚಿತ್ರ. ಸಿದ್ದಿ ನಿಮಿತ್ತ ಮನುಕುಲಕ್ಕೆ ಕಂಟಕವಾಗುವುದನ್ನು ಕಂಡ, ಇಲ್ಲಿಯ ಬ್ರಾಹ್ಮಣರು ಅವರ ನಾಶಕ್ಕಾಗಿ ಹೋಮ-ಹವನ ಮಾಡಿದರಂತೆ! ಇದರಿಂದ ಕುಪಿತಗೊಂಡ ಸಿದ್ದರು, “ಸಿಂಧುಘಟ್ಟದಲ್ಲಿ ಕಾಲಾಂತರದಲ್ಲಿ ಬ್ರಾಹ್ಮಣ ಕುಲ ನಾಶವಾಗಿ ಹೋಗಲಿ”, ಎಂದು ಶಪಿಸಿ ಇಲ್ಲಿಂದ ತೆರಳಿದರಂತೆ, ಸಿದ್ದರು ನೆಲೆಸಿದ್ದರಿಂದ, ಇದು ‘ಸಿದ್ದರ ಬೆಟ್ಟ’ ಎಂದು ಪ್ರಖ್ಯಾತಿಯನ್ನು ಪಡೆದಿದೆ”, ಎಂದು ಹೇಳಿದ ನೆನಪು ಇನ್ನೂ ಮಾಸಿಲ್ಲ. ಕಾಕತಾಳೀಯವೆಂಬಂತೆ ಸಿಂಧಘಟ್ಟದಲ್ಲಿ ಬ್ರಾಹ್ಮಣರ ಸಂಖ್ಯೆ ಉದ್ಯೋಗ, ನಗರಗಳಿಗೆ ಸ್ಥಳಾಂತರ ಮುಂತಾದವುಗಳ ದೆಸೆಯಿಂದ, ಇಳಿಮುಖವಾಗುತ್ತಿರುವುದು ಸತ್ಯ. ಒಂದಾನೊಂದು ಕಾಲದಲ್ಲಿ ‘ರಾಜಬೀದಿ’ಯೆಂದೇ ಕರೆಯಿಸಿಕೊಳ್ಳುತ್ತಿದ್ದ, ಬ್ರಾಹ್ಮಣರ ಬೀದಿಯಲ್ಲಿ ಇಂದು ಬೆರಳೆಣಿಕೆಯಷ್ಟು ಬ್ರಾಹ್ಮಣ ಕುಟುಂಬಗಳು ಮಾತ್ರ ಇವೆ. ‘ಬ್ರಾಹ್ಮಣರ ಬೀದಿ’ ಅಂತಲೇ ನೆನಪಾಯಿತು. ಇಲ್ಲಿ ಜಾತಿ ಆಧಾರಿತವಾಗಿ ಮೊದಲು ಬೀದಿಗಳು ಕುಂಬಾರರ ಕೇರಿ, ಲಿಂಗಾಯಿತರ ಕೇರಿ, ಶೆಟ್ಟರ ಕೇರಿ, ಸಾಬರ ಬೀದಿ, ಹೊರಕೇರಿ, ಹೀಗೆ ರೂಪುಗೊಂಡಿದ್ದು, ಇತ್ತೀಚಿನ ಪ್ರಗತಿಪರತೆಯ ಧ್ಯೋತಕವಾಗಿ, ಎಲ್ಲಾ ಕೇರಿಗಳಲ್ಲೂ ಎಲ್ಲರೂ ವಾಸವಾಗಿರುತ್ತಾರೆ. ಆದರೆ, ಹೆಸರು ಮಾತ್ರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.

‘ಸಿಂಧಘಟ್ಟ’ದ ಹೆಸರಿನ ಹುಟ್ಟು ಹೇಗೆ?..................
ಸಿದ್ದರಬೆಟ್ಟ, ‘ಸಿಂಧುಘಟ್ಟ’ವಾಗಿದ್ದು ಕಥೆಯಷ್ಟೆ. ಈ ಕಥೆಯೇ ಪ್ರೇರಣೆಯಾಗಿ, ನಾನು ಬಿ.ಇಡಿ ಮಾಡುವ ಸಂದರ್ಭದಲ್ಲಿ, ನನ್ನ ಕುತೂಹಲವೇ ಈ ಒಂದು ಪ್ರಶ್ನೆಗೆ ನನಗೆ ಹಲವು ಉತ್ತರಗಳನ್ನು ತಂದುಕೊಟ್ಟಿದ್ದು ಮಾತ್ರವಲ್ಲದೇ, ಮತ್ತಷ್ಟು ಕುತೂಹಲಗಳನ್ನು ಸೃಷ್ಟಿಸಿತು. ಇಲ್ಲಿಯ ಮನೆ, ಬೀದಿಯ ರಚನೆ, ಇತ್ಯಾದಿಗಳು ‘ಸಿಂಧೂ ಬಯಲಿನ ನಾಗರೀಕತೆ’ಯನ್ನು ಹೋಲುತ್ತವೆ. ಬಹುಶಃ ಸಿಂಧೂ ನಾಗರೀಕತೆಯ ಜನರಿಂದ ಈ ಹೆಸರು ಬಂದಿತೇನೋ ಎಂಬ ಅನುಮಾನ ಮೂಡಿಬಂದಿದ್ದೂ ಉಂಟು. ಹೀಗೊಂದು ಅನುಮಾನ ಕಾಡಲು ಕಾರಣವಾಗಿದ್ದು, ಇಲ್ಲಿನ ‘ಮುದಿಬೆಟ್ಟ (ಮಹದೇಶ್ವರ ಬೆಟ್ಟ). ನಿಜ ಇಲ್ಲಿಂದ ಕಾಲ್ನಡಿಗೆಯಲ್ಲಿ ಸಾಗಿದರೆ, ನಿಮಗೆ ಮುದಿವಯಸ್ಸಾಗಿರುವ ‘ಗಿರಿರಾಜ’ ಕಾಣ ಸಿಗುತ್ತಾನೆ. ಅದನ್ನೇ ಇಲ್ಲಿಯ ಜನ ‘ಮುದಿಬೆಟ್ಟ’ ಎನ್ನುತ್ತಾರೆ. ‘ವೇದ ಸುಳ್ಳಾಗದರೂ ಗಾದೆ ಸುಳ್ಳಾಗುವುದಿಲ್ಲ”, ಜನಪದರ ಒಂದೊಂದು ಪದವೂ ಮುತ್ತು. ಹೌದು ಅದು ‘ಮುದಿಬೆಟ್ಟ’ವೇ. ಅದರ ವಯಸ್ಸು ಸಿಂಧೂ ನಾಗರೀಕತೆಗೂ ಅತಿ ಹಿಂದೆ ಸಾಗುತ್ತದೆ. ಈ ಸಂಗತಿ ನನಗೆ ತಿಳಿದಿದ್ದು, ಅಲ್ಲಿನ ಒಂದು ಕಲ್ಲನ್ನು ತಂದು, ನಮ್ಮ ಜಿಲ್ಲೆಯ ಸಾಹಿತಿಗಳು, ವೈಜ್ಞಾನಿಕ ಸಂಶೋಧಕರಾದ, ಶ್ರೀ ತೈಲೂರು ವೆಂಕಟಕೃಷ್ಣಯ್ಯರವರಿಗೆ ತೋರಿಸಿದ ಸಂದರ್ಭದಲ್ಲಿಯೇ. ಆ ಕಲ್ಲನ್ನು ನೋಡಿ, ದೊಡ್ಡದಾಗಿ ಕಣ್ಣುಗಳನ್ನು ತೆರೆಯುತ್ತಾ, “ಏನ್ರೀ?!........ ಎಲ್ಲಿಯ ಕಲ್ಲುಗಳಿವು? ಇವುಗಳ ಆಯಸ್ಸು ಶಿಲಾಯುಗದ್ದು?!............”, ಎಂದಾಗ, ನನಗೇ ಮಾತೇ ಹೊರಡದಾಯಿತು. ಆದರೆ, ಇದನ್ನು ತಜ್ಞರೇ ಅಧ್ಯಯನ ಮಾಡಿ ನಿರ್ಧರಿಸಬೇಕು. ಆದರೆ, ಪದಶಃ ಅರ್ಥದ ವಿವೇಚನೆ, ಸ್ವಲ್ಪಮಟ್ಟಿಗೆ ಸೂಕ್ತ ನೆಲೆಯ ಸಮಾಧಾನವನ್ನು ತರಬಲ್ಲದು. ‘ಸಿಂಧು’ ಎಂದರೆ, ‘ಮಾನ್ಯಮಾಡು’ ಎಂಬರ್ಥ. ‘ಘಟ್ಟ’ ಎತ್ತರದ ಪ್ರದೇಶ. ಹಾಗಾಗೀ ಹೊಯ್ಸಳರ ಕಾಲದಲ್ಲಿ ಇದೊಂದು ‘ಪಾಳೆಪಟ್ಟು’. ಬಹುಶಃ ‘ಸಿಂಧುಘಟ್ಟ’ ಹೊಯ್ಸಳರು ತಮ್ಮ ಸಾಮ್ರಾಜ್ಯದಲ್ಲಿ ‘ಪಾಳೆಗಾರರ’ ಅಧಿಕಾರವನ್ನು ಮಾನ್ಯಮಾಡಿದ ಪ್ರದೇಶವಿರಬಹುದು. ಹಾಗಾಗೀ ಇದನ್ನು ‘ಸಿಂಧುಘಟ್ಟ’ ಎಂದು ಕರೆದಿರಬಹುದೆಂಬ ಅಭಿಪ್ರಾಯಕ್ಕೆ ಬಂದೆ.

‘ಈಜಿಪ್ಟ ನಾಗರೀಕತೆ ಸಿಂಧುಘಟ್ಟದಲ್ಲಿ!?................................ ಸತ್ತವರ ದಿಬ್ಬವಾಗಿರುವ ‘ಹೆಣದಮಾಳ’
ಹೌದು. ಪ್ರಾಚೀನ ನಾಗರೀಕತೆಯ ಎಲ್ಲಾ ಲಕ್ಷಣಗಳನ್ನುಳ್ಳ. ಸಿಂಧಘಟ್ಟಕ್ಕೂ ಒಮ್ಮೆ ತಾಳೆ ಹಾಕಿ ನೋಡಿದೆ. ಇಲ್ಲಿನ ‘ಹೆಣದಮಾಳ’ ಅಲ್ಲಿನ ‘ಸತ್ತವರ ದಿಬ್ಬ’ದ ಲಕ್ಷಣ ಹೋಲುತ್ತಿತ್ತು. ಹೌದು. ಸತ್ತವರ ಹೆಣಗಳನ್ನು ಹಿಂದೆ, ಈ ಮುದಿಬೆಟ್ಟದ ಬಂಡೆಯ ಮೇಲಿಟ್ಟು, ಅದರ ಮೇಲೆ ಕಲ್ಲುಗಳನ್ನು ಜೋಡಿಸುತ್ತಿದ್ದರು, ಬಂಡೆಯ ಕಾವಿಗೆ ಶರೀರ ಸುಟ್ಟು ಕರಕಲಾಗುತ್ತಿತ್ತು. ಇಂದಿಗೂ ನೀವು ಈ ಮುದಿಬೆಟ್ಟದ ಮೇಲೇರಿದಾಗ, ಉದ್ದಕ್ಕೂ ಕಲ್ಲಿನ ಗುಡ್ಡೆಗಳ ರಾಶಿ ರಾಶಿಯೇ ಕಾಣಸಿಗುತ್ತವೆ. ಇವು ಕಲ್ಲಿನ ಗುಡ್ಡೆಗಳಲ್ಲ, ಹೆಣದ ಮಾಳ’. ಹಾಳಾದ ಕುತೂಹಲ ನನ್ನನ್ನು ಗುಡ್ಡೆಗಳನ್ನು ಕೆದಕುವಂತೆ ಪ್ರೇರೇಪಿಸಿತು. ಕೆದಕಿ ನೋಡಿದಾಗ, ಸಂಪೂರ್ಣ ಶೇಷಾವಸ್ಥೆಯಲ್ಲಿ ಪುಡಿ ಪುಡಿಯಾಗಿರುವ ಮೂಳೆಗಳು ಕಂಡುಬಂದವು. ಮನುಷ್ಯನ ತಲೆಯ ಭಾಗದ ಬುರುಡೆಯಷ್ಟೆ ಕೆಲವು ಕಡೆ ಮಾತ್ರ ಈಗಲೂ ಕಾಣಸಿಗುತ್ತವೆ. ಆದರೆ, ಬಳೆಗಾಜುಗಳು ಕೆಲವೊಂದು ಗುಡ್ಡೆಗಳಲ್ಲಿ ಈಗಲೂ ಕಾಣಸಿಗುತ್ತವೆ. ಇದು ನಿಜಕ್ಕೂ ಆಶ್ಚರ್ಯ ತರಿಸುವ ಸಂಗತಿಯಾಗಿದೆ. ಇದು ಗಾಜಿನ ಬಗೆಗೆ ಅವರಿಗೆ ತಿಳಿದಿದ್ದ ಸಂಗತಿಗೆ ಇಂಬು ನೀಡುತ್ತದೆ. ಆ ದಿನ, “ಲಭ್ಯವಾದರೆ, ಮುದಿಬೆಟ್ಟದಿಂದ ಒಂದು ತಲೆಬುರುಡೆಯನ್ನು ಹುಡುಕಿ ಮನೆಗೆ ಹೊತ್ತೊಯ್ಯುವೆ” ಎಂದಿದ್ದೇ ತಡ ನನಗೆ ಸಹಸ್ರ ನಾಮಾರ್ಚನೆಯೇ ಆಯಿತು. ಅದು ಲಭ್ಯವಾಗಲು ಸಾಧ್ಯವೂ ಇರಲಿಲ್ಲ. ಅದೆಷ್ಟು ಹಳೆಯ ಮಾನವ ಅವಶೇಷಗಳೆಂದರೆ, ಸಂಪೂರ್ಣ ಪುಡಿ ಪುಡಿಯಾಗಿ ನಿಮಗೆ ಗೋಚರವಾಗುತ್ತದೆ. ಕೆಲವು ಕಡೆ ಮಾತ್ರ ತಲೆಯ ಗಟ್ಟಿ ಭಾಗ ಹಾಗೆಯೇ ಉಳಿದುಕೊಂಡಿರುವುದು ಗೋಚರಿಸುತ್ತದೆ. ಇದೆಲ್ಲಾ ಕಾಲಗರ್ಭದಲ್ಲಿ ಅಡಗಿರುವ ಸತ್ಯವನ್ನು ಕೆದಕಲು ಪ್ರೇರೇಪಿಸುವಂತಿದೆ.

ಹಿಂದು ಮುಂದಾದ ಸಿಂಧುಘಟ್ಟದ ದೇವರು
ಅದೇ ಕುತೂಹಲವನ್ನು ಹೊಂದಿರುವ ಪುಟ್ಟ ಹುಡುಗನಾಗಿದ್ದ, ನಾನು ಒಮ್ಮೆ ‘ದುರ್ಗಾಷ್ಟಮಿ’ ಚಲನಚಿತ್ರ ನೋಡಲು ಹೋದಾಗ, ಇದ್ದಕ್ಕಿದಂತೆ, ಸಿಂಧುಘಟ್ಟಕ್ಕೆ ಸಂಬಂಧಿಸಿದ ಗಾದೆಯೊಂದು ಹಾಸ್ಯನಟ ದಿನೇಶರ ಬಾಯಲ್ಲಿ ಕೇಳ ಸಿಗುವುದೇ?!...............ಆ ಗಾದೆಯೇ “ಸಿಂಧುಘಟ್ಟದ ದೇವರು ಹಿಂದು ಮುಂದು”, ಈ ಗಾದೆ ಹೇಗೆ ಮೂಡಿತು?!...... ಯಾವ ದೇವರು ಸಿಂಧುಘಟ್ಟದಲ್ಲಿ ಹಿಂದು ಮುಂದಾಯಿತು?!.................. ಇದಕ್ಕೆ ತಾತನ ಹತ್ತಿರವೇ ಉತ್ತರ ದೊರೆಯುವುದೆಂದು, ಊರಿಗೆ ಹೋದಾಗ ಕೇಳಿದೆ. ಆಗ ತಾತ, ತಿರುಮಲ ದೇವರ ಗುಡ್ಡಕ್ಕೆ ಕರೆದೊಯ್ದು, ಅದರ ಕಥೆ ಹೇಳಿದರು. ತಾತನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಂಡರೆ, ನಿಮ್ಮ ಕುತೂಹಲವೂ ತಣಿಯಬಹುದು. ತಾತ ಕತೆ ಹೇಳ ತೊಡಗಿದರು. ಪಿಳಿಪಿಳಿ ಕಣ್ಣುಗಳನ್ನು ಬಿಡುತ್ತಾ, ಸಿಂಧುಘಟ್ಟದ ದೇವರು ಹಿಂದುಮುಂದಾದ ಕತೆ ಕೇಳ ತೊಡಗಿದೆ.” ಮಗೂ ಇದು ತಿರುಮಲ ದೇವರ ದೇವಸ್ಥಾನವೆಂದು, ಇದನ್ನು ಕಟ್ಟಿಸಿದವನು ಒಬ್ಬ ಪಾಳೆಯಗಾರನೆಂದೂ, ಇಲ್ಲಿರುವ ಕೊಳ ಸಿಹಿನೀರಿನ ಕೊಳವಾಗಿದ್ದು, ನಾವು ಇಲ್ಲಿಂದಲೇ ಕುಡಿಯುವ ನೀರು ಹೊರತ್ತಿದ್ದೆವು. ಇನ್ನು ಈ ದೇವಾಲಯದಲ್ಲಿನ ಮೂರ್ತಿ ‘ತಿರುಮಲ ನಾರಾಯಣ’ನನ್ನು ಶಿಲ್ಪಿಯೊಬ್ಬ ಬಹಳ ಶ್ರಮಪಟ್ಟು ಕೆತ್ತಿದ್ದ. ಇದನ್ನು ಪೀಠದ ಮೇಲೆ ಕೂಡ್ರಿಸುವುದರೊಳಗೆ, ಸಂಜೆ ಆಗಿ ಹೋಯಿತಂತೆ, ಸಂಜೆಗತ್ತಲು ಕವಿದು, ಏನೂ ಕಾಣಿಸದೇ ಹೋದಾಗ, ಆತ ಬೆಳಿಗ್ಗೆ ಬಂದು ಕೂರಿಸಿದರಾಯಿತು ಎಂದುಕೊಂಡು, ಮನೆಗೆ ಮರಳಿದನಂತೆ. ಬಾಗಿಲಿರದ ಈ ರಾತ್ರಿ ಕಾಡು ಹಂದಿಯೊಂದು. ತನ್ನ ತುರಿಕೆ ಪರಿಹರಿಸಿಕೊಳ್ಳಲು ಮೈ ಉಜ್ಜಿದಾಗ, ದೇವರ ಮೂರ್ತಿ ತಿರುಗು-ಮುರುಗಾಯಿತಂತೆ!. ಬೆಳಿಗ್ಗೆ ಮರಳಿ ಬಂದ ಶಿಲ್ಪಿ, ಬಂದು ನೋಡಿದಾಗ, ತಿರುಗು – ಮುರುಗಾಗಿರುವ ದೇವರನ್ನು ಕಂಡು, ಪೂರ್ವಾಪರ ಯೋಚಿಸದೇ, ‘ಸಿಂಧುಘಟ್ಟದ ದೇವರು ಹಿಂದು ಮುಂದಾಗಿದೆ’, ಎಂದು ಊರಿಗೆಲ್ಲಾ ಟಾಂ!....... ಟಾಂ!....... ಎಂದು ಸಾರಿದನಂತೆ, ಅಂದಿನಿಂದ ಈ ಗಾದೆ ರೂಢಿಗೆ ಬಂದಿತು”, ಎಂದು ರೋಚಕವಾಗಿ ಕಥೆ ಹೇಳಿದರು. ನನ್ನ ಉತ್ಸಾಹವೂ ತಣಿಯಿತು. ಇಂದಿಗೂ ಈ ದೇವಸ್ಥಾನ ಗುಡ್ಡದ ಮೇಲಿದೆ. ಆದರೆ, ‘ದೇವರು ಮಾತ್ರ ಹಿಂದು ಮುಂದಾಗಿಲ್ಲ’, ದೇವಸ್ಥಾನದ ತೊಲೆಯಲ್ಲಿ ‘ದೇವರಸನ ಸೇವೆ’ ಎಂಬ ಶಾಸನ ವಾಕ್ಯವಿದೆ. ಆದರೆ, ಈ ತಿರುಮಲನ ಪೂಜೆ ಮಾತ್ರ ನಿಂತು ಹೋಗಿದೆ.

ದೂರದ ಬೆಟ್ಟ
ಸಿಂಧುಘಟ್ಟದ ಸುತ್ತಲೂ ತಲೆಯೆತ್ತಿ ನಿಂತಿದ್ದ, ಸಾಲು ಸಾಲು ಪರ್ವತಗಳ ಸಾಲು ನನ್ನ ತಲೆಯಲ್ಲಿ ಸಾಲು ಸಾಲು ಪ್ರಶ್ನೆಗಳನ್ನೇ ಹುಟ್ಟಿ ಹಾಕುತ್ತಿದ್ದವು. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಲು ತಾತನ ತಲೆ ತಿನ್ನುತ್ತಿದ್ದೆ. ಈ ಹೊತ್ತಿಗೆ, ಸ್ವಲ್ಪ ದೊಡ್ಡವನಾಗಿದ್ದೆ. ನನ್ನ ಬಾಲ್ಯದ ಸಂಜೆಗೊಮ್ಮೆ ಜಾರಿ ಬರೋಣ. ನಾನಾ ತಾತ ಒಮ್ಮೆ ಕೆರೆ ಏರಿಯ ಮೇಲೆ ಸಂಜೆ ನಡೆದಾಡುತ್ತಾ ಸಾಗುತ್ತಿದ್ದೆವು., ಅತ್ತ ನೋಡಿದರೆ, ತುಂಬಿದ ಕೆರೆ!....... ಇತ್ತ ನೋಡಿದರೆ, ಹಸಿರಿನ ತೆರೆ!............ ಅಬ್ಬಬ್ಬಾ!..... ಭುವಿಗಿಳಿದ ಸ್ವರ್ಗವೇ ಆಗ ನನಗೆ ಕಾಣಿಸಿದ್ದು. ‘ಮೂರುಕಾಲು ಮಂಟಪ’. ಅರೆರೇ!......... ಏನಿದು? ಮಣ ಭಾರದ ಈ ಚಪ್ಪಡಿ ಕಲ್ಲು ಮೂರು ಕಲ್ಲುಗಳ ಮೇಲೆ ಕುಳಿತಿದೆಯಲ್ಲಾ?!............ ಯಾವುದೀ ಕಲ್ಲು?!.......... ಈ ಪ್ರಶ್ನೆಗೆ ತಾತ ಉತ್ತರ ನೀಡಿದ್ದರು. “ಮಗು ಇದನ್ನು ‘ಮೂರುಕಾಲು ಮಂಟಪ’ ಎನ್ನುವರು. ಇದು ಮೂರು ಕಾಲಿನ ಮೇಲೆಯೇ ನಿಂತಿರುವುದರಿಂದ ಇದನ್ನು ಮೂರು ಕಾಲು ಮಂಟಪ ಎನ್ನುವರು” ಎಂದರು. “ತಾತ, ಈ ಮಂಟಪವು ಮೂರು ಕಾಲಿನ ಮೇಲೆ ಹೇಗೆ ನಿಂತಿದೆ?!...... ಮತ್ತೆ ಈ ಮಂಟಪವನ್ನು ಕೆರೆ ಏರಿಯ ಮೇಲೆ ಇಲ್ಲೇಕೆ ಮಾಡಿದ್ದಾರೆ?!..............” ಎಂಬ ಪ್ರಶ್ನೆಗೆ, “ಮಗು ಈ ಮಂಟಪ ಮೂರು ಕಾಲಿನ ಮೇಲೆ ಹೇಗೆ ನಿಂತುಕೊಂಡಿಹುದೋ, ಅದು ನನಗೆ ತಿಳಿಯದು. ಆದರೆ, ಇಲ್ಲಿ ಈ ಮಂಟಪ ಏಕಿದೆ? ಎಂಬುದು ತಿಳಿದಿದೆ. ಈ ಮಂಟಪದ ಕೆಳಗೆ, ಮೊದಲು ಶಿವಲಿಂಗವಿದ್ದಿತು, ಇದು ರುದ್ರಭೂಮಿ. ಸ್ಮಶಾನ ಕಾಯುವ ಶಿವನನ್ನು ಇದರ ಕೆಳಗೆ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಇದನ್ನು ನಿರ್ಮಿಸಿರಬಹುದು. ಆದರೆ, ಈಗ ಆ ಶಿವಲಿಂಗ ಇಲ್ಲ”, ಎಂದರು. ಮೂರುಕಾಲಿನ ಮಂಟಪದ ಹಿನ್ನೆಲೆಯೇನೋ ತಿಳಿಯಿತು. ಆದರೆ, ಮೂರುಕಾಲಿನ ಮೇಲೆ ನಿಂತಿರುವ ಮಂಟಪದ ಮರ್ಮ ಇಂದಿಗೂ ಅರ್ಥವಾಗಿಲ್ಲ. ಅದೇ ಮಂಟಪದ ಮೇಲೇರಿ, ಸುತ್ತಲ ಗಿರಿ ಸರಣಿಗಳನ್ನು ಕುರಿತು ಪ್ರಶ್ನಿಸುಸ್ತಾ ಸಾಗಿದೆ. ತಾತ ಹಾಗೂ ನನ್ನ ನಡುವಿನ ಸಂಭಾಷಣೆ ಹೀಗಿತ್ತು.
ನಾನು:- ತಾತ ಇಲ್ಲಿ ದೊಡ್ಡದಾಗಿರುವ ಬೆಟ್ಟ ಯಾವುದು?
ತಾತ:- ಅದನ್ನು ‘ಮಹದೇಶ್ವರಬೆಟ್ಟ’ ಅಥವಾ ‘ಮುದಿಬೆಟ್ಟ’ ಎನ್ನುತ್ತಾರೆ. ಆದರೆ, ಅದು ದೊಡ್ಡ ಬೆಟ್ಟವಲ್ಲ. ಅತಿ ಚಿಕ್ಕ ಬೆಟ್ಟ.
ನಾನು:- ಮತ್ತೆ ದೊಡ್ಡದಾಗಿ ಕಾಣುತ್ತಿದೆ?!.................
ತಾತ:- ಹತ್ತಿರವಿರುವುದರಿಂದ ದೊಡ್ಡದಾಗಿ ಕಾಣುತ್ತಿದೆ ಅಷ್ಟೇ!.” ದೂರದ ಬೆಟ್ಟ ನುಣ್ಣ ಗೆ” ಎಂಬ ಉಕ್ತಿ ಕೇಳಿಲ್ಲವೇ?!.........
ನಾನು:- ಹೌದಾ?! ಹಾಗಾದರೆ, ದೊಡ್ಡ ಬೆಟ್ಟ ಯಾವುದು?
ತಾತ:- ಅದೇ ಹಿಂದೆ ಇದೆಯಲ್ಲಾ! ಒಂದೇ ಬಂಡೆಯಿಂದಾದಂತೆ ಕಾಣುತ್ತಿದೆಯಲ್ಲವೇ?! ಅದೇ ದೊಡ್ಡದು.
ನಾನು:- ಹೌದಾ?! ಹಾಗಾದರೆ, ಮಧ್ಯದಲ್ಲಿರುವ ಬೆಟ್ಟಗಳು?!.........
ತಾತ:- ಅವೇ ಒಂದು ಚಂದಮಾಮನ ಗುಡ್ಡ! ಮತ್ತೊಂದು ಜೇನುಕಲ್ಲುಗುಡ್ಡ!, ಮಗದೊಂದು ಕಿರಬನ ಬೆಟ್ಟ!
ನಾನು:- ಚಂದಮಾಮನ ಗುಡ್ಡದ ವಿಶೇಷತೆ ಏನು?
ತಾತ:- ಅಲ್ಲಿ ಶಿವಲಿಂಗವೊಂದಿದೆ. ಅದನ್ನು ‘ಚಂದ್ರಮೌಳೇಶ್ವರ’ ಎಂದು ಕರೆಯುತ್ತಾರೆ. ಈ ಶಿವಲಿಂಗವನ್ನು ಶ್ರೀ ಶಂಕರರು ದೇಶ ಪರ್ಯಟನೆ ಮಾಡುವ ಸಂದರ್ಭದಲ್ಲಿ ಸ್ಥಾಪಿಸಿದರೆಂದು ಹೇಳುತ್ತಾರೆ. ‘ಚಂದ್ರಮೌಳೇಶ್ವರ’ ಇರುವ ಬೆಟ್ಟವಾದ್ದರಿಂದ, ‘ಚಂದ್ರಮೌಳೇಶ್ವರ ಗುಡ್ಡ’, ಎಂಬ ಹೆಸರು ಪಡೆದಿತ್ತು. ಬರಬರುತ್ತಾ ಚಂದಮಾಮನ ಗುಡ್ಡವಾಗಿ ಹೋಯಿತು
ನಾನು:- ಹೌದೇ?!....... ಸರಿ ಇನ್ನೊಂದು ಬೆಟ್ಟವನ್ನು ‘ಕಿರಬನ ಬೆಟ್ಟ’ ಎಂದು ಏಕೆ ಕರೆಯುತ್ತಾರೆ?
ತಾತ:- ಅದು ವನ್ಯ ಪ್ರದೇಶ ಮಗೂ!....... ಅಲ್ಲಿ ಕಿರಬ ಅಂದರೆ, ಚಿರತೆಗಳು ಹೆಚ್ಚು ಹಾಗಾಗೀ ಕಿರುಬನ ಬೆಟ್ಟ ಎನ್ನುತ್ತಾರೆ.
ನಾನು:- ಈಗಲೂ ಚಿರತೆಗಳು ಇವೆಯಾ?!.......
ತಾತ:- ಖಂಡಿತವಾಗಿಯೂ ಇವೆ. ಅದಕ್ಕೆ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಒಬ್ಬೊಬ್ಬರೇ ಒಂಟಿ ಯಾರೂ ಹೋಗುವುದಿಲ್ಲ.
ನಾನು:- ಮತ್ತೆ ಆ ಗುಡ್ಡದಲ್ಲಿ ಏನೋ ಕಪ್ಪಗೆ ಕಾಣುತ್ತಿದೆಯಲ್ಲಾ?...... ಅದೇನು?!............
ತಾತ:- ಅದೇ, ‘ಜೇನುಕಲ್ಲು ಗುಡ್ಡ!. ನೋಡು ಮಗು ಇಡೀ ಗುಡ್ಡದಲ್ಲಿಯೇ ಜೇನು ಹೆಣೆದುಕೊಂಡಿರುತ್ತದೆ. ಎಲ್ಲವೂ ಹೆಜ್ಜೇನುಗಳು!.....ಹಾಗಾಗಿಯೇ ಅದನ್ನು ‘ಜೇನುಕಲ್ಲು ಗುಡ್ಡ’ ಎಂದು ಕರೆಯುವರು.
ನಾನು:- ಅಬ್ಬಾ! ಇಡೀ ಗುಡ್ಡ-ಬೆಟ್ಟವನ್ನೇ ಆವರಿಸುವಷ್ಟು ಜೇನುಗಳೇ?!..........
ತಾತ:- ಹೌದು!.....
ನಾನು:- ಮತ್ತೆ ಆ ಬೆಟ್ಟ?!...................
ನನ್ನ ಪ್ರಶ್ನೆಗಳು ಮುಕ್ತಾಯ ಹೊಂದುವಂತೆ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ಸಂಜೆಯಾಗಿತ್ತು. ಮನೆಗೆ ತೆರಳಿದರೂ ‘ದೂರದ ಬೆಟ್ಟ’ದ್ದೇ ಚಿಂತೆ. ಮನೆಗೆ ತೆರಳಿದ ಮೇಲೆ ಅಜ್ಜಿಯ ತಲೆ ತಿನ್ನಲು ಪ್ರಾರಂಭಿಸಿದ್ದೆ. ಅಜ್ಜಿ ‘ನಾರಾಯಣಗಿರಿ ದುರ್ಗದ ಕಥೆ’ ಹೇಳಲು ಆರಂಭಿಸಿದ್ದರು. ಅಜ್ಜಿಕತೆಯ ನೆನಪಿನಂಗಳದಿಂದ, ಈ ಕಥನವನ್ನು ಬಿಚ್ಚಿಡುತ್ತಿದ್ದೇನೆ.
ಅಜ್ಜಿಕಥೆ:- ಮಗೂ!.....ನಾರಾಯಣಗಿರಿದುರ್ಗ ಹಿಂದೆ, ರಾಮಾಯಣ ಕಾಲದಲ್ಲಿ ‘ಪರ್ಣಕುಟಿ’ಯಾಗಿದ್ದ ಜಾಗ. ಅಲ್ಲಿ ತ್ರೇತಾಯುಗದಲ್ಲಿ ಶ್ರೀ ರಾಮರು ಸೀತಾ, ಲಕ್ಷ್ಮಣ ಸಮೇತರಾಗಿ ಬಂದಿದ್ದರಂತೆ. ಇಲ್ಲಿಗೆ ಬಂದಾಗ, ಸೀತಾದೇವಿ ಇಲ್ಲಿಯ ಕೊಳದಲ್ಲಿ ಅರಿಶಿನವನ್ನು ಮೈಗೆ ಸವರಿಕೊಂಡು ಸ್ನಾನ ಮಾಡಿದಳಂತೆ!......ಹಾಗಾಗೀ ಅಲ್ಲಿಯ ತಿಳಿಗೊಳದ ನೀರು, ಹಳದಿಯಾಯಿತಂತೆ. ಈಗಲೂ ಅಲ್ಲಿಯ ನೀರು ಹಳದಿಯೇ ಆಗಿದೆ. ಇದನ್ನು ‘ಸೀತೆಕೊಳ’ ಎಂತಲೇ ಕರೆಯುವರು. ಹೀಗೆ ಇಲ್ಲಿ ವಾಸವಾಗಿದ್ದಾಗ, ಆಕೆ ಒಮ್ಮೆ ಮಾಸಿಕ ಋತುಸ್ರಾವದ ನಿಮಿತ್ತ, ರಾಮ, ಲಕ್ಷ್ಮಣರಿಂದ, ದೂರ ಕುಳಿತು ಊಟ ಮಾಡಿದಳಂತೆ, ಅವರು ಊಟ ಮಾಡಿದ್ದಕ್ಕೆ ಸಾಕ್ಷಿಯಾಗಿ, ಇಂದಿಗೂ ಅವರು ಊಟ ಮಾಡಿದ ಜಾಗದಲ್ಲಿ ಗೋಮೆಯ ಗುರುತುಗಳಿವೆಯಂತೆ. ಅಂದು ಅವರು ಊಟ ಮಾಡಿದ್ದು, ಪುಳಯೋಗರೆಯಂತೆ, ಈಗಲೂ ಆ ಸ್ಥಳದಲ್ಲಿ ಪುಳಿಯೋಗರೆಯ ವಾಸನೆ ಬರುತ್ತದೆಯಂತೆ. ಆಮೇಲೆ, ರಾವಣ ಇಲ್ಲಿಂದಲೇ ಸೀತಾಮಾತೆಯನ್ನು ಹೊತ್ತೊಯ್ದನಂತೆ. ಸೀತೆಯನ್ನು ಮುಟ್ಟಲಾಗದ ರಾವಣ, ಸೀತೆ ನಿಂತ ಬಂಡೆಯ ಭಾಗವನ್ನೇ ಹೆಕ್ಕಿ ಹೊತ್ತೊಯ್ದನಂತೆ!.......ಹಾಗಾಗೀ ಬೆಟ್ಟದಲ್ಲಿ ಕಂದಕವಾಗಿದೆ. ರಾವಣನ ಹೆಜ್ಜೆ ಗುರುತುಗಳೂ ಇವೆ. ಮತ್ತೆ ಈ ಸ್ಥಳಕ್ಕೆ ದ್ವಾಪರಯುಗದಲ್ಲಿ ಪಾಂಡವರೂ ಬಂದಿದ್ದರಂತೆ, ಅಲ್ಲಿ ನೀರಿಲ್ಲದ ಕಾರಣ, ಭೀಮ ತನ್ನ ಮಂಡಿ ತಿರುವಿ ನೀರನ್ನು ಬರಿಸಿದನಂತೆ.!......... ಅದ್ದರಿಂದ ಇದನ್ನು ‘ಭೀಮನ ದೊಣೆ’ ಎನ್ನುತ್ತಾರೆ, ಅಂತೆಯೇ ಅರ್ಜುನ ತನ್ನ ಬಾಣದ ತುದಿಯನ್ನು ಒತ್ತಿ, ‘ಸಿಹಿನೀರಿನ ಕೊಳ’ ಒಂದನ್ನು ಮಾಡಿದನಂತೆ!........... ಅದೇ ಅರ್ಜುನನ ದೊಣೆ!........... ಇದರ ಜೊತೆಗೆ, ಆನಂತರ ಬಂದ ಪಾಳೆಗಾರರು ಅಲ್ಲೇ ಇರುವ ಕಲ್ಲಿನ ಅರಮನೆಯಲ್ಲಿ ವಾಸವಾಗಿದ್ದರಂತೆ, ತಮ್ಮ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ, ಈ ಸೀತೆ ಕೊಳದಲ್ಲಿ ಶಿಕ್ಷೆ ವಿಧಿಸುತ್ತಿದ್ದರಂತೆ, ಏಕೆಂದರೆ, ಸೀತೆಯ ಕೊಳದ ಆಳ ತಿಳಿದವರು ಯಾರೂ ಇಲ್ಲವಂತೆ! ತಪ್ಪು ಮಾಡಿದವರನ್ನು ಈ ಸೀತೆಯ ಕೊಳಕ್ಕೆ ತಳ್ಳಿಬಿಡುತ್ತಿದ್ದರಂತೆ!....... ಅಲ್ಲಿ ಒಂದು ಸರಪಳಿಯನ್ನು ಬಿಡಲಾಗಿದ್ದು, ತಪ್ಪು ಮಾಡದವರು ಆ ಸರಪಳಿ ಸಹಾಯ ಸಿಕ್ಕಿ, ಮೇಲೆ ಬರುತ್ತಾರೆಂದು ಅವರು ನಂಬಿದ್ದರಂತೆ!................
ಇದಿಷ್ಟೂ ಅಜ್ಜಿ ಹೇಳುತ್ತಿದ್ದ ಬೆಟ್ಟದ ಕಥೆ. ಅತ್ಯಂತ ರೋಚಕವಾಗಿರುವ ಕಥೆಯನ್ನು ಅಮಿತಾಸಕ್ತಿಯಿಂದ ಕೇಳುತ್ತಿದ್ದ, ನನ್ನಲ್ಲಿ, ವೈಜ್ಞಾನಿಕ ವಿವೇಚನಾ ದೃಷ್ಟಿಕೋನವನ್ನು ಆ ಬಾಲ್ಯದ ಸಂದರ್ಭದಲ್ಲಿ ನಿರೀಕ್ಷಿಸಲಾಗದು. ಆದರೆ, ಬೆಟ್ಟ ಹತ್ತಿ ಇವನ್ನೆಲ್ಲಾ ನೋಡಬೇಕೆಂಬ ಮನದಾಸೆಗೆ ಕಿಚ್ಚು ಹಚ್ಚಿದುದಂತೂ ಸತ್ಯ.
ಆನಂತರ ಅಜ್ಜಿಗೆ ಬೆಟ್ಟಕ್ಕೆ ನಾನೂ ಹತ್ತಿ, ಇವನ್ನೆಲ್ಲಾ ನೋಡಬೇಕೆಂದೆ!............ಆದರೆ, ಅಜ್ಜಿ “ಬೆಟ್ಟ ಹತ್ತುವುದು ಅಷ್ಟು ಸುಲಭವಲ್ಲ, ಬೆಟ್ಟ ಹೇಗಿದೆ ಎಂದು ನಿನಗೆ ತಿಳಿದಿದೆಯೇ?! ದುರ್ಗಕ್ಕೆ ಮೆಟ್ಟುಲುಗಳಿಲ್ಲ!..... ವಾನರನಂತೆ ಹತ್ತಬೇಕು!............ಒಂದು ಕಡೆಯಂತೂ ಭಾರೀ ಇಕ್ಕಟ್ಟಿನ ಸ್ಥಳ. ಗೋಡೆಯಂತಿರುವ ಬಂಡೆಯನ್ನು ಹಿಡಿದು ಕಿರಿದಾದ ಜಾಗದಲ್ಲಿ ಹತ್ತಬೇಕು!............ಅಲ್ಲಿಂದ ಕೆಳಗೆ ನೋಡಿದರೆ, ಪ್ರಪಾತ!.................. ಬಿದ್ದರೆ, ಒಂದು ಮೂಳೆಯೂ ಉಳಿಯುವುದಿಲ್ಲ. ಈ ವಯಸ್ಸಿನಲ್ಲಿ ನಿನ್ನಿಂದ ಸಾಧ್ಯವೇ ಇಲ್ಲ!.................. “ ಎಂದು ಹೇಳುತ್ತಾ, ಅನಂತಲಕ್ಷ್ಮಿಯ ಕಥೆ ಹೇಳಿದರು. ಈ ಹಿಂದೆ, ನಮ್ಮ ಮನೆಯ ಸ್ನೇಹಿತರಾದ ಅನಂತ ಲಕ್ಷ್ಮೀಯವರು ಬಹಳ ಆಸೆಯಿಂದ ಬೆಟ್ಟ ಹತ್ತಿ, ಇಳಿಯುವುದರೊಳಗೆ ಸಂಪೂರ್ಣವಾಗಿ ಸುಸ್ತಾಗಿ ಹೋಗಿದ್ದರಂತೆ, ಅಲ್ಲಿಂದ ಕೆಳಗಿಳಿದು ಬಂದ ಮೇಲೆ, ಜ್ವರ ಹಿಡಿದು, ರಾತ್ರಿಯೆಲ್ಲಾ ಭಯದಿಂದ ಕನವರಿಸುತ್ತಿದ್ದರಂತೆ!........”ಇನ್ನು ನಿಮ್ಮ ಸಿಂಧುಘಟ್ಟದ ಕಡೆಗೆ ಅಪ್ಪಿ-ತಪ್ಪಿಯೂ ತಲೆಹಾಕಿ ಮಲಗುವುದೂ ಇಲ್ಲ ಎಂದು ಹೇಳಿದ್ದರಂತೆ!.......”, ಇದನ್ನು ಕೇಳದಾಕ್ಷಣ ಒಮ್ಮೆ ಭಯ ಮೂಡಿತಾದರೂ, ಕುತೂಹಲ ಕುಂದಿರಲಿಲ್ಲ. ಬೆಟ್ಟವೇರುವ ಆಸೆ ಕಮರಿರಲಿಲ್ಲ. ಪ್ರತಿ ಸಲವೂ ನಾನು ಬೆಟ್ಟ ಹತ್ತಬೇಕೆನ್ನುವುದು, ಹಿರಿಯರು ‘ಅನಂತಲಕ್ಷ್ಮಿಯ ಕಥೆ’ ಹೇಳಿ, ನನ್ನನ್ನು ತೆಪ್ಪಗಾಗಿಸುವುದು. ಹೀಗೆಯೇ ಮುಂದುವರೆದು, ವಾಸ್ತವವಾಗಿ ನಾನು ಬೆಟ್ಟವೇರಿದ್ದು, ನಾನು ಪದವಿ ಮಾಡುವ ಸಂದರ್ಭದಲ್ಲಿಯೇ!................ ಕೆಲವೊಮ್ಮೆ ಎಲ್ಲರೂ ನನ್ನನ್ನು ಬಿಟ್ಟು ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ, ‘ನಾನು ಏಕೆ ಇನ್ನೂ ಚಿಕ್ಕವನಾಗಿದ್ದೇನೆ!..........ಬೇಗ ಬೇಗ ದೊಡ್ಡವನಾಗಬಾರದಿತ್ತೇ?!...... ಎನಿಸಿರುವುದೂ ಉಂಟು. ಆದರೆ, ಈಗ ಯಾಕಾದರೂ ದೊಡ್ಡವರಾದೆವೋ?!......... ಚಿಕ್ಕ ಮಕ್ಕಳಾಗಿಯೇ ಇರಬಾರದಿತ್ತೇ?!............... ಎಂದು ಒಮ್ಮೊಮ್ಮೆ ಅನಿಸುತ್ತದೆ. ಅಜ್ಜಿಯ ಕತೆ ಏನೇ ಇರಲಿ, ದುರ್ಗದ ಸ್ವರೂಪವನ್ನು ಕುರಿತ ಅಜ್ಜಿಯ ವಿವರಣೆ ಅಕ್ಷರಶಃ ಸತ್ಯ ಸಂಗತಿಯೇ ಆಗಿತ್ತು. ದುರ್ಗದ ಹಾದಿ, ನಿಜವಾಗಿಯೂ ದುರ್ಗಮವೇ!...... ಈಗಾಗಲೇ ನಾನು ಈ ದುರ್ಗವನ್ನು 10 ಭಾರಿ ಏರಿದ್ದೇನೆ. ಅಬ್ಬಬ್ಬಾ! ನಿಜವಾಗಿಯೂ ಆ ಅನುಭವ ರುದ್ರ ರಮಣೀಯ!........ ನಾವು ದುರ್ಗವನ್ನು ಏರಲು ಈ ಹಿಂದೆ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದೆವು. ಗದ್ದೆಯ ಬದುಗಳ ಮೇಲೆ ನಡೆದು ಸಾಗಿ, ಸಾಲು-ಸಾಲು ಬೆಟ್ಟಗಳ ನಡುವೆ ನಡೆದು ಸಾಗುತ್ತಿದ್ದಾಗ ಉಂಟಾಗುವ ಅನುಭವಕ್ಕೆ ಬೇರಾವೂ ಸಾಟಿಯಾಗಲಾರವು. ಹೀಗೆ ಸಾಗುತ್ತಿದ್ದಾಗ, ನಮಗೆ ಸಿಗುವ ಒಂದೊಂದೇ ದೃಶ್ಯಾವಳಿಗಳು ನಯನ ಮನೋಹರ. ಸಿಂಧುಘಟ್ಟದಿಂದ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಮೊದಲು ನಮಗೆ ‘ಸಂಧ್ಯಾವಂದನೆ ಮಂಟಪ’ ಸಿಗುತ್ತದೆ. ಈ ಸಂಧ್ಯಾವಂದನೆ ಮಂಟಪದಲ್ಲಿ ಪ್ರಾತಃಕಾಲ ಹಾಗೂ ಸಂಜೆಯ ಸಮಯಗಳಲ್ಲಿ ಬ್ರಾಹ್ಮಣರು ‘ಸಂಧ್ಯಾವಂದನೆ’ ಮಾಡುತ್ತಿದ್ದರೆಂದು ತಾತ ಹೇಳುತ್ತಿದ್ದರು. ವಿಶಾಲವಾದ ಅರಳಿಗಿಡದ ಅಡಿಯಲ್ಲಿ ಸೋಪಾನಗಳಿಂದ ಕೂಡಿರುವ ಮಂಟಪ ನಿಜವಾಗಿಯೂ ಇಂದು ಅಕ್ಷರ ಸಹ ತಿಪ್ಪೆಯಾಗಿದೆ. ಅಲ್ಲಿಂದ ಮುಂದೆ ಸಾಗಿದರೆ, ‘ಗ್ರಾಮದೇವತೆ ಲಕ್ಷ್ಮೀದೇವಮ್ಮನ ಗುಡಿ’, ಅಲ್ಲಿ ಈ ಗುಡಿಯ ಮುಂದೆ, ‘ಉತ್ಸವ ಮಂಟಪ’ ಈ ಉತ್ಸವ ಮಂಟಪದ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ, ಅದರಿಂದ ಮೂರ್ತಿಯನ್ನು ಮೆರವಣಿಗೆ ರಥಕ್ಕೆ ಏರಿಸುತ್ತಿದ್ದರು. ಇಂದಿಗೂ ಈ ಸಂಸ್ಕೃತಿ ರೂಢಿಯಲ್ಲಿದೆ. ಅಂತೆಯೇ, ಅದರ ಮುಂದೆಯೇ, ‘ಓಕಳಿ ಮಂಟಪ’ ಈ ಮಂಟಪದಲ್ಲಿ, ಓಕಳಿಯಾಡಲು ಬಣ್ಣದ ನೀರನ್ನು ತುಂಬಿ, ಗ್ರಾಮದೇವತೆಯ ಹಬ್ಬದಲ್ಲಿ ಎರಚಾಡುತ್ತಿದ್ದರಂತೆ. ಈಗಲೂ ಅದೇ ರೂಢಿಯಲ್ಲಿದೆ. ಅದರ ಮುಂದೆ ಇರುವುದೇ ‘ಉಯ್ಯಾಲೆ ಮಂಟಪ’. ಲಕ್ಷ್ಮೀದೇವಿಯನ್ನು ಈ ಮಂಟಪದಲ್ಲಿ ತೂಗಲು ವ್ಯವಸ್ಥೆ ಮಾಡಲಾಗಿದೆ. ಈ ಸಾಂಸ್ಕೃತಿಕ ಪದರಗಳನ್ನು ದಾಟಿ ಮುಂದೆ ಹೋದರೆ, ನಿಮಗೆ ಆಗಲೇ ಹೇಳಿದ್ದೆನಲ್ಲಾ! ಆ ‘ತಿರುಮಲ ದೇವರ ಕಟ್ಟೆ’ ಅದು ಸಿಗುತ್ತದೆ. ಅಲ್ಲಿಂದ ಮುಂದೆ ಸ್ವಲ್ಪವೇ ದೂರದಲ್ಲಿ ಮಹದೇಶ್ವರ ದೇವಸ್ಥಾನವಿದೆ.
ಮಹದೇಶ್ವರ ದೇವಾಲಯದ ಪಕ್ಕದಲ್ಲಿಯೇ , ಮಾದೇಶ್ವರನ ಕಟ್ಟೆ ಇದೆ. ಅಲ್ಲಿಯ ನೀರಲ್ಲಿ ಆಡಿ, ಪಕ್ಕದಲ್ಲಿಯೇ ಇರುವ ಮತ್ತೊಂದು ಕುತೂಹಲದ ಗಿಂಡಿಯ ಬಗೆಗೆ ನಿಮಗೆ ಹೇಳಲೇಬೇಕು. ಅಲ್ಲಿದೆ ‘ಸುರಂಗ’. ಈ ‘ಸುರಂಗ’ದ ಬಗೆಗೆ ನಮ್ಮೂರಿನ ನಮ್ಮಮ್ಮನ ಮೇಷ್ಟ್ರು ಭಗವಾನ್ ಮೇಷ್ಟ್ರರು ಬಣ್ಣಿಸಿ ಹೇಳಿದ್ದರು. ಏಕೆಂದರೆ, ಆ ಕಗ್ಗತ್ತಿಲಿನ ಸುರಂಗದಲ್ಲಿ, ಹೆಜ್ಜೆ ಹಾಕಿ ಬಹುದೂರ ಕ್ರಮಿಸಿದ ವೀರ ಪುರುಷರೆಂದರೆ ಅವರೇ!. ಸುರಂಗದ ಮಧ್ಯಭಾಗಕ್ಕೆ ಹೋಗುತ್ತಿದ್ದಂತೆ ಉಸಿರುಗಟ್ಟುವ ಅನುಭವ ಉಂಟಾಗಿ ಹೊರ ಬಂದಿದ್ದರಂತೆ!............ ಇಂತಹ ಸಾಹಸ ಪ್ರವೃತ್ತಿ ಯುವಕಾವಸ್ಥೆಯಲ್ಲಿದ್ದ ನಮಗೂ ಆಗಿದುದು ಸಹಜವೇ!.......... ಆದರೆ, ನಮಗೆ ಹತ್ತು, ಇಪ್ಪತ್ತು ಹೆಜ್ಜೆ ಹಾಕುವುದೂ ಕಷ್ಟವಾಗಿತ್ತು. ಅಷ್ಟು ಭಯಾನಕ ಆ ಗುಹೆ. ಕಗ್ಗತ್ತಲು, ಹಾವು, ಚೇಳುಗಳು ಎಲ್ಲಿರುವುವೋ ಎಂಬ ಗಾಬರಿ!.......... ಈ ಗಾಬರಿಗೆ ಹೊಂದಿಕೊಂಡಂತೆ, ಬಾವಲಿಗಳ ಹಾರಾಟ!.......ಚೀರಾಟ!......... ಅಬ್ಬಾ!.... ಇಷ್ಟೆಲ್ಲಾ ನಿಗೂಢತೆ ಹೊಂದಿದ ಈ ಗುಹೆ ತಲುಪುವುದಾದರೂ ಎಲ್ಲಿಗೆ, ಎಂದರೆ, ಊರಿಂದ ನೇರವಾಗಿ, ನಾರಾಯಣಗಿರಿ ದುರ್ಗದ ನಡುಭಾಗಕ್ಕೆ!.............ಎನ್ನುತ್ತಾರೆ ಕೆಲವರು. ಏಕಶಿಲಾ ಬೆಟ್ಟವಾದ ನಾರಾಯಣಗಿರಿ ದುರ್ಗದ ನಡುಭಾಗದಲ್ಲಿ ಗುಹೆಯ ದ್ವಾರವೊಂದು ಕಾಣ ಸಿಗುವುದು!.......... ಈ ಮಾತಿಗೆ ಇಂಬು ನೀಡುತ್ತದೆ. ದುರ್ಗ ಏರಿದಾಗ, ಅಲ್ಲಿಂದಲೂ ಗುಹೆಯೊಳಗೆ ನಾಲ್ಕೆಜ್ಜೆ ಹಾಕಿ, ‘ಸಿಂಧುಘಟ್ಟದ ದೇವರು ಹಿಂದುಮುಂದಾಗಿ ಬಂದಂತೆ’ ಮರಳಿದುದೂ ಉಂಟು. ಕೆಲವರು ಈ ಸುರಂಗ ಮೇಲುಕೋಟೆ, ಶ್ರೀರಂಗಪಟ್ಟಣ, ಚಾಮುಂಡಿಬೆಟ್ಟವನ್ನು ಸೇರುತ್ತದೆ ಎಂತಲೂ ಹೇಳುತ್ತಾರೆ. ಅದು ಒಳನುಗ್ಗಿ ಸತ್ಯ ಶೋಧನೆಯಾದಲ್ಲಿ ಮಾತ್ರ ಒಪ್ಪಬಹುದಾದ ಮಾತು. ಹಾಗಾಗಿರುವ ಸಾಧ್ಯತೆ ಕಡಿಮೆ. ಈ ಸುರಂಗ ರಚಿಸುವ ಅವಶ್ಯಕತೆ ಏನಿತ್ತು?!............. ಎಂಬ ಪ್ರಶ್ನೆಗೆ ಮಾತ್ರ ಉತ್ತರ ದೊರಕಿದುದು, ತಾತನ ಮೂಲಕವೇ!.......... ಅಂದು ತಾತ ಹೇಳಿದ ಗತ ಇತಿಹಾಸದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಂದು ತಾತ ಹೇಳಿದ ಮಾತು ಹೀಗಿತ್ತು. “ಹೇಳಿ-ಕೇಳಿ ಸಿಂಧುಘಟ್ಟ ಒಂದು ಪುಟ್ಟ ಪಾಳೆಯಪಟ್ಟು, ದೊಡ್ಡ ಪಾಳೆಯಪಟ್ಟಿನಿಂದ ಏನಾದರೂ ಅಪಾಯ ಒದಗಿದರೆ ಎಂಬ ಮುಂಜಾಗ್ರತೆಯಿಂದ, ಈ ಸುರಂಗವನ್ನು ನಮ್ಮ ಪಾಳೆಯಗಾರರು ನಿರ್ಮಿಸಿಕೊಂಡಿದ್ದರಂತೆ. ನಮಗಿಂತ ಪ್ರಬಲ ಪಾಳೆಗಾರರು ದಾಳಿ ಮಾಡುವ ಸೂಚನೆ ಬಂದಾಗ, ಇಲ್ಲಿಯ ಜನರು ತಮ್ಮ ಮನೆಯಲ್ಲಿಯೇ ‘ಹಗೇವು’ (ಮಾಳಿಗೆ ಮನೆ) ತೆಗೆದು, ಅಲ್ಲಿ ತಮ್ಮ ಧವಸ, ಧಾನ್ಯ, ಧನ, ಕನಕಗಳನ್ನು ಹುಗಿದಿಟ್ಟು, ಅದರ ಮೇಲೆ ತಿಪ್ಪೆ ಸಾರಿಸಿ, ರಂಗವಲ್ಲಿ ಹಾಕಿ, ಈ ಸುರಂಗ ಮಾರ್ಗ ಮುಖೇಣ ಬೆಟ್ಟದ ಮೇಲೆ ತೆರಳುತ್ತಿದ್ದರಂತೆ!....................... ಇಲ್ಲಿಗೆ ದಾಳಿ ಮಾಡಿದ ಅವರಿಗೆ ಏನೂ ಸಿಗುತ್ತಿರಲಿಲ್ಲ. ಊರ ಮಂದಿ ಬೆಟ್ಟ ಸೇರಿರುವುದು ಅಕಸ್ಮಾತ್ ತಿಳಿದರೂ, ನಮ್ಮ ಜನರ ಹತ್ತಿರ ಮತ್ತೊಂದು ಪ್ರಬಲ ಅಸ್ತ್ರವಿತ್ತಂತೆ. ಏಕಶಿಲಾ ಬೆಟ್ಟವಾದ್ದರಿಂದ, ಇಳಿಜಾರಿನ ಲಕ್ಷಣವನ್ನು ಹೊಂದಿದೆ. ಬೆಟ್ಟಕ್ಕೆ ದಾಳಿ ಮಾಡಲು ವಿರೋಧಿಗಳು ಹತ್ತಿದ್ದರೆ, ಅವರು ಮೇಲಿನಿಂದ ಎಣ್ಣೆ ಸುರಿಯುತ್ತಿದ್ದರಂತೆ!.......... ಆಗ ಶತ್ರುಗಳಿಗೆ ಸೋಲಾಗುತ್ತಿತ್ತಂತೆ!......ಅದಕ್ಕೆ ಮಗೂ ನಮ್ಮ ಸಿಂಧುಘಟ್ಟದ ಕೆಲವು ಭಾಗಗಳಲ್ಲಿ ನಿಧಿ ಸಿಗುವ ಸಾಧ್ಯತೆ ಇದೆ ಎನ್ನುವುದು......!” ಎಂದು ಹೇಳುತ್ತಿದ್ದರು. “ಕಾಗೆ ಬಂಗಾರ ಹೆಚ್ಚಾಗಿ ದೊರಕುವ ಸಿಂಧುಘಟ್ಟದಲ್ಲಿ ನಿಧಿ ಸಿಗುವುದು ನಿಶ್ಚಿತ” ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ತಾತನ, ಅಲ್ಲಿಯ ಸ್ಥಳೀಯರ ವಿವರಣೆ ಅದೇನೆ ಇರಲಿ. ನನಗೆ ನಿಧಿಯಾಗಿ ಸಿಕ್ಕಿದುದು ‘ದುರ್ಗ’ವಷ್ಟೇ!........ ಗತ ಇತಿಹಾಸದಲ್ಲಿ ಲಭ್ಯವಾದ ನಿಧಿಯದು. ದುರ್ಗದಲ್ಲಿ ಅವರು ರೂಪಿಸಿಕೊಂಡಿರುವ ‘ಏಳು ಸುತ್ತಿನ ಕೋಟೆ’ಯ ಚಕ್ರವ್ಯೂಹವನ್ನಂತೂ ಭೇಧಿಸುವುದು ಸ್ವಲ್ಪ ಕಷ್ಟವೇ!..... 10 ಭಾರೀ ಬೆಟ್ಟ ಹತ್ತಿರುವ ನನಗೆ ಈಗಲೂ ಗೊಂದಲವಾಗುತ್ತದೆ. ಬೆಟ್ಟವನ್ನು ಹತ್ತವಾಗ ನಮಗೆ ಏಳು ಕಮಾನು ಆಕೃತಿಯ ದ್ವಾರಗಳು ಸಿಗುತ್ತವೆ. ಈ ದ್ವಾರಗಳನ್ನು ಅವರು ಹೇಗೆ ನಿರ್ಮಿಸಿರುವರೆಂದರೆ, ಅದು ‘ಚಕ್ರವ್ಯೂಹ’ವೇ ಸರಿ. ದ್ವಾರದಿಂದ ದ್ವಾರಕ್ಕೆ ಬೆಟ್ಟವನ್ನು ಹತ್ತಿ, ಮೇಲೇರುತ್ತಿದ್ದಂತೆ, ನಮಗೆ ದೊರಕುವುದು ಬೃಹತ್ ಬಂಡೆಗೋಡೆಗಳ ಸ್ವಾಗತ!........................... ನೇರ ನಿಲುವಿನಲ್ಲಿ ಗಗನಚುಂಬಿಯಾದ ಬಂಡೆಗೋಡೆಗಳನ್ನು ಕಂಡ ನಮಗೆ ಬೆಟ್ಟ ಹತ್ತುವ ಹಾದಿ ಪ್ರತಿ ದ್ವಾರದಲ್ಲಿಯೂ ಬಂದ್ ಆಯಿತೆಂದೇ ಭಾಸವಾಗುತ್ತದೆ. ಆದರೆ, ಅದೇ ಗೋಡೆ ಹಿಡಿದು ಕಿರಿದಾದ ಜಾಗದಲ್ಲಿ ಕೆಳಗಿನ ಪ್ರಪಾತವನ್ನು ನೋಡದಂತೆ ಮುನ್ನಡೆದರೆ, ಮತ್ತೊಂದು ದಾರಿ ತೆರೆದು ಕೊಳ್ಳುತ್ತದೆ. ನಿಜ ಅದನ್ನು ದಾಟಿ ಮೇಲೇರುವುದು ಕಲ್ಲಿನ ಸಮುದ್ರದಲ್ಲಿ ಈಜಿ಼ ಗೆದ್ದಂತೆ!.......................ಅದಕ್ಕಾಗಿಯೇ ಆ ಸ್ಥಳವನ್ನು ‘ರಾಯಸಮುದ್ರ’ವೆಂದು ಕರೆದಿರಬೇಕು. ರಾಯನ ಸಮುದ್ರದ ದುರ್ಗ ಏರುವುದು ಸುಲಭದ ತೊತ್ತಲ್ಲ!.................. ಅಯ್ಯೋ!.......... ಇದೇನು? ‘ಮುದಿಬೆಟ್ಟ’ ಬಿಟ್ಟು ದುರ್ಗಕ್ಕೆ ಹೋದೆನಲ್ಲ?!........................... ದುರ್ಗವೇ ಹಾಗೇ!.........ನಮ್ಮೆಲ್ಲರ ಗಮನವನ್ನು ಸೆಳಯುವ ತಾಣ!..................
ಇರಲಿ. ನಾವು ಎಲ್ಲಿದ್ದೆವು?!.......‘ಮುದಿಬೆಟ್ಟ’ದಲ್ಲಿಯಲ್ಲವೇ?!.............. ಈಗಾಗಲೇ ನಿಮಗೆ ‘ಮುದಿಬೆಟ್ಟ’ದ ಪರಿಚಯವಾಗಿದೆ ಆದರೆ, ‘ಮುದಿಬೆಟ್ಟ’ವು ಇನ್ನೂ ಹಲವಾರು ವೈವಿಧ್ಯತೆಗಳ ಆಗರವಾಗಿ ರೋಚಕ ಇತಿಹಾಸವನ್ನು ತೆರೆದಿಡುತ್ತದೆ. ‘ಮುದಿಬೆಟ್ಟ’ದಲ್ಲಿರುವ ‘ಹಾವಿನಮಾಳ’ ಭಯಂಕರ ವಿಷ ಸರ್ಪಗಳು ಇರುವ ತಾಣ. ಪಾಳೆಪಟ್ಟಿನಲ್ಲಿ ತಪ್ಪು ಮಾಡುವವರಿಗೆ ಶಿಕ್ಷೆ ನೀಡುವ ತಾಣವಾಗಿತ್ತಂತೆ ಈ ‘ಹಾವಿನ ಮಾಳ’. ‘ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಇಲ್ಲಿ, ತಪ್ಪು ಮಾಡಿದವರನ್ನು ಕೈ ಕಾಲು ಕಟ್ಟಿ, ಇಲ್ಲಿ ಬಿಸಾಡಲಾಗುತ್ತಿತ್ತೆಂದು ಪ್ರತೀತಿ. ನಾವು ಒಮ್ಮೆ ಹೋದಾಗ ಕರಿನಾಗರವೊಂದು ಬುಸುಗುಟ್ಟುತ್ತಾ ಹೆಡೆ ಎತ್ತಿ ಉಸಿರು ಬಿಟ್ಟದ್ದೂ ಉಂಟು. ಆ ಕರಿನಾಗರವನ್ನು ನೋಡಿ ನಾವು ಓಟ ಕಿತ್ತಿದ್ದೂ ಉಂಟು. ಈ ಶಿಕ್ಷೆಯ ಕತೆ ‘ಸೀತೆಯ ಕೊಳ’ಕ್ಕೂ ಅಂಟಿಕೊಂಡಿದೆ. ದುರ್ಗದ ‘ಒಕ್ಕರಸಿ ಕಲ್ಲಿಗೂ’ ಅಂಟಿಕೊಂಡಿದೆ. ದುರ್ಗದ ತುತ್ತ ತುದಿಯಲ್ಲಿರುವ ಈ ಜಾಗಕ್ಕೆ ನೀವು ಹೋಗಲು ಎದೆಗಾರಿಕೆ ಬೇಕು. ಅಲ್ಲಿಂದ ನಿಂತು ನೋಡಿದರೆ, ನಿಜ ಅದು ‘ಸಾವಿನ ದುರ್ಗ’ ಎನ್ನುವುದರಲ್ಲಿ ಸಂದೇಹವೇ ಇರುವುದಿಲ್ಲ. ಅಲ್ಲಿಂದ ಅತ್ತ ನೋಡಿದರೆ, ಮೇಲುಕೋಟೆ ಬೆಟ್ಟ, ಇತ್ತ ನೋಡಿದರೆ, ಶ್ರವಣ ಬೆಳಗೊಳ, ಕೃಷ್ಣರಾಜಪೇಟೆಯ ವಿರಾಟ್ ದರ್ಶನ, ಸುತ್ತಲಿನ ಹಳ್ಳಿಗಳು, ಎಲ್ಲವೂ ಕಾಣ ಸಿಗುತ್ತದೆ. ಅಷ್ಟು ಎತ್ತರದಲ್ಲಿದೆ ನಮ್ಮೂರ ‘ದುರ್ಗ’. ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಕರ್ನಾಟಕದ ‘ಏಕಶಿಲಾ ಬೆಟ್ಟ’ದ ಶ್ರೇಣಿಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತದೆ ನಮ್ಮೂರ ದುರ್ಗ. ‘ನೈಸ್’ ಶಿಲೆಯಿಂದ ರೂಪುಗೊಂಡಿರುವ ಈ ದುರ್ಗ ಒಂದೇ ಶಿಲೆಯಿಂದ ರೂಪಿತವಾಗಿರುವುದು ನಿಜಕ್ಕೂ ಪ್ರಕೃತಿಯ ವಿಸ್ಮಯವೇ ಸರಿ. ಅಯ್ಯೋ!........ಮತ್ತೆ ದುರ್ಗಕ್ಕೆ ತೆರೆಳಿದೆನೇ?!........ಇರಲಿ ಏನೂ ಮಾಡಲಾಗುವುದಿಲ್ಲ. ನನ್ನ ಗಮನವೆಲ್ಲವೂ ದು’ರ್ಗಮನ’ದೆಡೆಯೇ!........................................................
ಸರಿ ಎಲ್ಲಿದ್ದೆವು ಅದೇ ಮುದಿ ಬೆಟ್ಟದಲ್ಲಿಯಲ್ಲಿವೇ?!................ ಬನ್ನಿ! ಅಲ್ಲಿಯ ವಿಶೇಷವನ್ನು ನೋಡಿಕೊಂಡು ‘ದುರ್ಗ’ದತ್ತ ಸಾಗೋಣ. ಅಲ್ಲಿಯೇ ‘ಮುದಿಬೆಟ್ಟ’ದ ಮೇಲೇರಿದರೆ, ಮಧ್ಯದಲ್ಲಿ ಕಾಣಸಿಗುವುದೇ, ‘ಫಕೀರನ ತೆಕ್ಕೆ’. ಮುಸ್ಲಿಂ ಫ಼ಕೀರನೊಬ್ಬ 16 ನೇ ಶತಮಾನದ ಸಂದರ್ಭದಲ್ಲಿ ಇಲ್ಲಿ ವಾಸವಾಗಿದ್ದನೆಂಬುದು ಪ್ರತೀತಿ. ಈ ಫ಼ಕೀರನು ಇಲ್ಲಿ ವಾಸವಾಗಿದ್ದನು ಎಂಬುದಕ್ಕೆ, ಸಿಂಧುಘಟ್ಟ ಗ್ರಾಮದಲ್ಲಿರುವ ವಿಜಯನಗರ ಕಾಲದ ಮಸೀದಿಯೊಂದರಲ್ಲಿ ಶಾಸನಾಧಾರ ದೊರಕುತ್ತದೆ. ಆತ ಇಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮನೆ ಮಾಡಿಕೊಂಡಿದ್ದನೆಂಬುದಕ್ಕೆ, ಬೃಹತ್ ಬಂಡೆಗೆ ಹೊಂದಿಕೊಂಡಂತೆ, ಆತ ಮಾಡಿಕೊಂಡಿರುವ ಮೂಲಭೂತ ಸೌಕರ್ಯ ವ್ಯವಸ್ಥೆಯೇ ಸಾಕ್ಷಿಯಾಗಿದೆ. ಬೆಟ್ಟದ ಮಧ್ಯದಲ್ಲಿ ಪುಟ್ಟ ಮನೆ, ಕಾರಂಜಿ, ಕಲ್ಲು, ಇಟ್ಟಿಗೆಯ ಗೋಡೆಗಳು ಎಲ್ಲವು ಕಾಣ ಸಿಗುತ್ತವೆ. ನಮ್ಮ ತಾಯಿಯವರು, ನಮ್ಮ ಚಿಕ್ಕಮ್ಮಂದಿರು, ನಮ್ಮ ಸೋದರ ಮಾವಂದಿರು ಕಂಡಂತೆ, ಅಲ್ಲಿ ಕಲ್ಲಿನ ಜಾಡಿಗಳು, ಬೀಸುವ ಕಲ್ಲು, ಕುಟ್ಟೋ ಒನಕೆ, ಕೆಲವು ಮಣ್ಣಿನ ಪದಾರ್ಥಗಳು ಇದ್ದವಂತೆ. ಆದರೆ, ನಾವು ನೋಡುವ ಹೊತ್ತಿಗೆ ಅವನ್ನೆಲ್ಲಾ ಯಾರೋ ದೋಚಿದ್ದಾರೆ. ಇತಿಹಾಸವು ಕಮರಿ ಹೋಗುವುದು ಹೀಗೆಯೇ!................................. ಅಲ್ಲಿಂದ ಮುಂದೆ ಸಾಗಿದರೆ, ನಮಗೆ ಸಿಗುವುದು ‘ಸಂಕ್ರಾತಿ ಮಂಟಪ’.
‘ಸಂಕ್ರಾಂತಿ ಮಂಟಪ’ ನಿಜವಾಗಿಯೂ ರವಿಯ ಕಿರಣದ ಚಿಲುಮೆಗಳು ಎಳೆ ಎಳೆಯಾಗಿ ಬಿದ್ದಾಗ, ಹೊನ್ನ ಹಾಸಿಗೆಯ ನಡೆಮುಡಿ ಹಾಸುವ ತಾಣ!....................... ಅಲ್ಲಿಯ ವಿಶೇಷವನ್ನು ತಾತ ನನಗಾಗಲೇ ಹೇಳಿದ್ದರು. ಸಂಕ್ರಾಂತಿಯಂದು ‘ಮೊಲ’ವೊಂದನ್ನು ಹಿಡಿದು, ಅದರ ಕಿವಿಗೆ ಚಿನ್ನದೋಲೆಯನ್ನು ತೊಡಿಸಿ, ಬಿಡುವ ಅಪೂರ್ವ ಸಂಸ್ಕೃತಿಯ ಮೆರಗು ಬೆಳಗಿದ್ದ ಸ್ಥಳವದಂತೆ!................ ಎಂತಹ ವಿಶಿಷ್ಠ ಸಂಸ್ಕೃತಿಯದು!........................ಅಲ್ಲಿ ಸಂಸ್ಕೃತಿಯ ಈ ಸೊಬಗನ್ನು ಮೆಲುಕು ಹಾಕಿ, ಮುನ್ನಡೆಯುತ್ತಾ ಸಾಗಿದರೆ, ನಮಗೆ ದೊರೆಯುವುದು ಜಿ಼ಗ್ ಜಾ಼ಕ್ ರೂಪದಲ್ಲಿರುವ ಬೆಟ್ಟಗಳು. ನಿರ್ಜನ ಪ್ರದೇಶ. ಅಲ್ಲಿ ನಮ್ಮೊಂದಿಗೆ ಮಾತನಾಡುವುದು ನಮ್ಮ ಧ್ವನಿಯೇ!............... ಒಮ್ಮೆ ಹೋ! ಎಂದು ಕೂಗಿದರೆ, ಹೋ!............ ಎಂದು ನಮ್ಮನ್ನು ಮಾತನಾಡಿಸುತ್ತಿತ್ತು. ಆಶ್ಚರ್ಯವಾಯಿತೇ?!........................ ಅಲ್ಲಿ ಗುಯ್ ಗುಟ್ಟುವುದು ನಮ್ಮ ಪ್ರತಿಧ್ವನಿ!. ಒಮ್ಮೆ ಹೇಳಿದರೆ, ಏಳು ಭಾರಿ ಅಪ್ಪಳಿಸುವ ಆ ಧ್ವನಿಯನ್ನು ನಮ್ಮ ಒಂದು ಕೂಗು ಸೃಜಿಸುತ್ತಿತ್ತು. ಈ ಅದ್ಭುತ ಅನುಭವದೊಂದಿಗೆ ಮುಂದೆ ಸಾಗಿದಾಗ, ನಮ್ಮನ್ನು ಪ್ರಕೃತಿಯೇ ಸಂತೈಸುತ್ತದೆ. ಅಲ್ಲಿ ಒಂದು ತೊರೆ ಹರಿಯುತ್ತದೆ. ಅಬ್ಬಬ್ಬಾ!. ತಿಳಿನೀರಿನ ತೊರೆ!......... ಪ್ರಕೃತಿಯ ಮುಂದೆ, ಮಾನವ ಏನೇನೂ ಅಲ್ಲ!.............ಎಂಬುದನ್ನು ಕೂಗಿ ಹೇಳುತ್ತಿತ್ತು ಆ ತೊರೆಯ ತೆರೆ!....... ಬಿರುಬಿಸಿಲ ನಡುವೆ ಪ್ರಕೃತಿಯೇ ಸೃಷ್ಟಿಸಿದ್ದ, ಹವಾನಿಯಂತ್ರಕ ತಾಣವದು. ತೊರೆಯ ತಣ್ಣನೆಯ ನೀರು, ನಮ್ಮ ತನುಮನಗಳನ್ನು ಸಂತೈಸಿತ್ತು. ಅಲ್ಲಿಂದ ಸ್ವಲ್ಪ ಮುಂದೆಯೇ ‘ದುರ್ಗ’. ದುರ್ಗದ ದುರ್ಗಮ ಹಾದಿ ನಮಗೆ, ಸುಗಮವೆನಿಸಿದ್ದು, ನಮ್ಮ ಉತ್ಸಾಹದಿಂದಲೇ!........... ಕರ್ಪೂರ ಬೆಳಗಿ, ದುರ್ಗವೇರಲು ಆರಂಭಿಸಿದೆವು. ನಾವೇ ಹತ್ತುವುದು ಹೈರಾಣ, ನಮ್ಮೊಂದಿಗೆ ನಮ್ಮ ಬುತ್ತಿಗಳು ಬೇರೆ!........................ ನಾವು ಅಕ್ಷರಶಃ ಮಂಗಗಳಾಗಿದ್ದೆವು. ಹೌದು. ‘ಮರ್ಕಟಾಸನ’ ಕಲಿಯದೇ ಹತ್ತುವುದು ಅಸಾಧ್ಯವಾದ ಮಾತು. ಬೆಟ್ಟ ಹತ್ತುತ್ತಲೇ ಇದ್ದೆವು!............................ ಶಿಖರ ಸಿಗುತ್ತಲೇ ಇಲ್ಲ!.............................. ಈ ಸಂದರ್ಭದಲ್ಲಿ ನನ್ನ ಹಲವು ಬಾರಿಯ ದುರ್ಗಮನದಲ್ಲಿ ಒಮ್ಮೆ ನನ್ನ ಸ್ನೇಹಿತ ಮಿಯಾಸಾಬ್ ಕೆಳಗೆ ಜಾರಿದ ಪ್ರಸಂಗವೂ ನೆನಪಿಗೆ ಬಂದಿತು. ಸದ್ಯ ಆತನ ಅದೃಷ್ಟ ಚೆನ್ನಾಗಿತ್ತು. ಆತನಿಗೆ ಏನೂ ತೊಂದರೆಯಾಗಿರಲಿಲ್ಲ. ಕೆಲವೊಮ್ಮೆ ಎಲ್ಲಾ ಅಂಶಗಳೂ ಎಲ್ಲಾ ಸಂದರ್ಭದಲ್ಲಿಯೂ ಒಳ್ಳಿತನುಭವಗಳನ್ನು ಕೊಡಲಾರವು ಎಂಬುದಕ್ಕೆ, ಈ ದುರ್ಗದ ಹುಲ್ಲುಹಾಸೇ ಸಾಕ್ಷಿ. ಇಲ್ಲಿ ಕಲ್ಲು ಬಂಡೆಗಳ ಮಧ್ಯದಲ್ಲಿ ಬೆಳೆದಿರುವ ಹುಲ್ಲುಹಾಸುಗಳು ‘ಜಾರು ಹಾಸಿಗೆಗಳು’. ಅಪ್ಪಿತಪ್ಪಿಯೂ ಅದರ ಮೇಲೆ ಕಾಲಿಡಲಾಗದು. ಇದರೊಟ್ಟಿಗೆ ತೊರೆಯ ನೀರು ಬೇರೆ!............ ಹಾಗಾಗೀ ಈ ಬೆಟ್ಟವನ್ನು ಏರುವುದು ಬೇಸಿಗೆಯಲ್ಲಿಯೇ ಒಳಿತೆನ್ನುವುದು ನನ್ನ ಭಾವನೆ. ಚಳಿ, ಮಳೆಗಾಲದಲ್ಲಿ ತೊರೆನೀರು ಹರಿಯುವುದರಿಂದ ಬಹಳ ಕಷ್ಟ. ಬೆಟ್ಟದ ಮೇಲೇರುವಾಗ, ಅಜ್ಜಿಕತೆಯ ‘ಭೀಮನದೊಣೆ’, ‘ಧರ್ಮರಾಯನ ದೊಣೆ’ ರಾಮ, ‘ಲಕ್ಷಣ ಸೀತೆಯರು ಊಟ ಮಾಡಿದ ಸ್ಥಳ’ ‘ಸೀತೆಕೊಳ’, ಎಲ್ಲವನ್ನೂ ಕಂಡೆವು. ಅಂತೂ ಇಂತು ಕೊನೆಯ ಬಾಗಿಲು ಕಂಡಿತು. ಬೆಟ್ಟದ ಮೇಲಿನ ಕಂಬದ ಬಸವಣ್ಣ ನಮಗೆ ಸ್ವಾಗತ ಮಾಡಲು ನಿಂತಂತೆ ಕಾಣಿಸುತ್ತಿತ್ತು. ಅಲ್ಲಿಂದ ಹೋದವರೆ, ಕೈವಲ್ಯೇಶ್ವರನ ಸನ್ನಿಧಿಗೆ ತೆರಳಿದೆವು. ಇದೇನು?!....................... ನಾರಾಯಣಗಿರಿದುರ್ಗದಲ್ಲಿ ಕೈವಲ್ಯೇಶ್ವರ ಎಲ್ಲಿಂದ ಬಂದ ಎಂದು ಆಶ್ಚರ್ಯ ಪಡುತ್ತಿರುವಿರಾ?!............... ಹೌದು ಈಗ ಅಲ್ಲಿರುವುದು ಕೈವಲ್ಯೇಶ್ವರ ಲಿಂಗವೇ!..................., ಮೊದಲು ನಾರಾಯಣನ ವೈಕುಂಠವಾಗಿದ್ದ, ಈಗ ಶಿವನ ಕೈಲಾಸವಾಗಿದೆ. ಮೇಲುಕೋಟೆಯ ಚೆಲುವನಾರಾಯಣ ಮೊದಲು ಇಲ್ಲೇ ಇದ್ದಿತೆಂದು, ರಾಮಾನುಜರ ಕಾಲದಲ್ಲಿ ಅದು ಇಲ್ಲಿಂದ ಮೇಲುಕೋಟೆಗೆ ಸ್ಥಳಾಂತರ ಹೊಂದಿತೆಂದೂ ಹೇಳುತ್ತಾರೆ. ಇದಕ್ಕೆ ಪೂರಕವಾಗಿ, ಗರುಡಗಂಬದ ಮೇಲೆ ನಂದಿಯನ್ನು ಕೂರಿಸಿರುವುದು, ದೇವಾಲಯದ ಗರ್ಭ ಗುಡಿಯ ದ್ವಾರದಲ್ಲಿ ಬೃಹತ್ ದ್ವಾರಪಾಲಕರ ಪ್ರತಿಮೆ ಇರುವುದು ಎಲ್ಲವೂ ಪುಷ್ಟಿ ನೀಡುತ್ತದೆ. ಇದರ ಹಿಂದೆ, ಶೈವ – ವೈಷ್ಣವ ಸಂಘರ್ಷ ಇದ್ದಿರಬಹುದೆಂಬ ಶಂಕೆಯೂ ಒಮ್ಮೆ ನನಗೆ ಮೂಡಿತ್ತು. ಇದೆಲ್ಲವೂ ನಮಗೆ ತಿಳಿಯಬೇಕಾದಲ್ಲಿ, ಇತಿಹಾಸದ ಆಲೋಡನೆಯಾಗಲೇಬೇಕು.
ದ್ವಾರವಿಲ್ಲದ, ವಿದ್ಯುತ್ ಇಲ್ಲದ ಕತ್ತಲೆಯ ಗವಿಯಲ್ಲಿ ಅಡಗಿ ಕುಳಿತಿದ್ದಾನೆ ಈ ‘ಕೈಲಾಸೇಶ್ವರ’ ಇಲ್ಲಿಯೂ ಬಾವಲಿಗಳ ಬವಣೆ ಇದ್ದೇ ಇರುತ್ತದೆ. ಒಮ್ಮೆ ನಾಗರಾಜನ ದರ್ಶನವಾದ ಸಂದರ್ಭವೂ ಒದಗಿ ಬಂದಿರುವುದೂ ಉಂಟು. ಈ ದೇವಾಲಯದ ಪೌಳಿಯಲ್ಲಿ ಮಾತ್ರ ನಮ್ಮ ಯುವಪೀಳಿಗೆಯ ‘ಪ್ರೇಮಕೆತ್ತನೆ’ಗಳನ್ನು ಬಿಟ್ಟರೆ, ಮತ್ತೇನು ಕಾಣ ಬರುವುದಿಲ್ಲ. ಅಲ್ಲಿಂದ ಈಚೆ ಬದಿಯಲ್ಲಿ ಸ್ವಲ್ಪವೇ ಇಳಿದರೆ, ‘ಅರ್ಜುನನ ದೊಣೆ’ ಅಲ್ಲಿ ಸ್ನಾನ ಮಾಡಿ, ನೀರು ಹೊತ್ತು, ತಂದು ಅಭಿಷೇಕಪ್ರಿಯನಿಗೆ ಅಭಿಷೇಕ ಮಾಡಿದೆವು. ನಮಸ್ಕರಿಸಿದೆವು. ಈ ಶಿವನಿಗೆ ಮೈಸೂರಿನ ಮಹಾರಾಜರೂ ಕೂಡಾ ಬಂದು ಅರ್ಚಿಸುತ್ತಿದ್ದರಂತೆ, ಅದಕ್ಕಾಗಿಯೇ ಪುಟ್ಟ ಹೆಲೆಕಾಪ್ಟರ್ ಏರಿ ಬರುತ್ತಿದ್ದ, ಮಹಾರಾಜರು, ದೇವಸ್ಥಾನಕ್ಕೆ ಮೂರು ಸುತ್ತು ಹಾಕಿ, ನಂತರ ಬೆಟ್ಟದಲ್ಲಿ ಇಳಿದು, ಇಲ್ಲಿಯ ಸೊಬಗನ್ನು ವೀಕ್ಷಿಸಿ ತೆರಳುತ್ತಿದ್ದರೆಂಬುದು, ಸ್ಥಳೀಯರ ಆಂಬೋಣ. ಅದು ಹೇಗೇ ಇರಲಿ!...... ನಮಗೆ ಇದರ ಸೌಂದರ್ಯ ಆಸ್ವಾದಿಸುವತ್ತ ಗಮನ. ಇದಕ್ಕಾಗಿ ನಾವು ಉಪಕ್ರಮಿಸಿದ್ದೂ ಆಗಿತ್ತು. ಆನಂತರ, ಅಲ್ಲಿಯೇ ಇದ್ದ, ಅಜ್ಜಿ ಹೇಳುತ್ತಿದ್ದ ‘ಮದ್ದಿನ ಮನೆ’ಯನ್ನು ನೋಡಿದೆವು. ಆದರೆ, ‘ಮದ್ದಿನ ಮನೆ’ಯಲ್ಲಿ ಮದ್ದಿನ ವಾಸನೆ ಇರಲಿಲ್ಲ. ಅಲ್ಲಿಂದ ಸ್ವಲ್ಪವೇ ಕೆಳಗಿಳಿದೆವು. ಕೆಳಗೆ ನೋಡಿದರೆ, ಅಬ್ಬಬ್ಬಾ!.....................ನೆರಳು ಬೆಳಕಿನಾಟ!....................... ಪ್ರಕೃತಿಯ ಸೌಂದರ್ಯದ ಮುಂದೆ ನಿಬ್ಬೆರಗಾಗಿ ನಿಲ್ಲುವುದಷ್ಟೆ ನಮ್ಮ ಕೆಲಸವಾಯಿತು. ಅಲ್ಲಿಯೇ ಇದ್ದ ‘ದೇವಕಣಗಲೆ’ ಮರ ನಮಗೆ ಇಳಿಜಾರಿನಲ್ಲಿ ಉಯ್ಯಾಲೆ ತೂಗಿಕೊಳ್ಳುವ ರೋಚಕ ಅನುಭವವನ್ನು ಒದಗಿಸಿತು. ನಮ್ಮೊಂದಿಗೆ ಮರ್ಕಟಗಳು ನಾವು ತಂದಿದ್ದ, ಉಪಹಾರ-ಫಲಹಾರಗಳನ್ನು ಹಂಚಿಕೊಂಡವು. ಅಲ್ಲಿಯೇ ಇದ್ದ ಪುಳ್ಳೆಗಳನ್ನು ಬಳಸಿ, ಬಿಸಿ-ಬಿಸಿ ಕಾಫಿ಼ ತಯಾರಿಸಿದ್ದು, ಮರೆಯಾಲಾಗದ ಅನುಭವ. ನಮ್ಮೊಂದಿಗಿದ್ದ, ನಮ್ಮ ಪಾಪಣ್ಣ ಮಾವರವರ ದೆಸೆಯಿಂದ ಮತ್ತೊಂದು ಪುಣ್ಯದ ಕೆಲಸವನ್ನು ನಾವು ಮಾಡಿದೆವು. ಅರ್ಜುನನ ದೊಣೆಯನ್ನು ಶುದ್ಧಗೊಳಿಸಿದೆವು. ‘ಶ್ರಮಯೇವ ಜಯತೇ' ಎಂಬ ಉದ್ಗಾರ ತೆಗೆಯುವಷ್ಟರೊಳಗೆ ನಮ್ಮ ಭಾನು ಪಶ್ಚಿಮದೆಡೆಗೆ ಸಾಗುತ್ತಿದ್ದ. ಭಾರದ ಮನದಿಂದ, ದುರ್ಗವನ್ನು ಇಳಿಯಲು ಹೊರಟಾಗ ನಮ್ಮ ದೇಹ ಸಂಪೂರ್ಣವಾಗಿ ಹಗುರವಾಗಿತ್ತು. ಏನದು ಪವನನ ಗತಿ!....... ಅಬ್ಬಬ್ಬಾ! ಎತ್ತರದ ಪ್ರದೇಶವಾದ್ದರಿಂದ, ನಾವು ನಮ್ಮ ತೂಕವನ್ನು ಕಳೆದುಕೊಂಡ ಅನುಭವವಾಗುತ್ತದೆ. ಕಾಲಿಕೊಡ ಹಿಡಿದಿದ್ದರಂತೂ ನಮ್ಮನ್ನು ಹೊತ್ತೇ ಸಾಗುತ್ತದೆ ಆ ಗಾಳಿಯ ತೀವ್ರತೆ!............................ಈ ದುರ್ಗವನ್ನು ಹತ್ತುವುದಕ್ಕಿಂತ ಇಳಿಯುವುದು ಹೆಚ್ಚು ಅಪಾಯಕಾರಿ!...............ಸ್ವಲ್ಪವೇ ವಾಲಿರುವ ‘ಜಾರುಬಂಡೆ’ಯನ್ನೇ ಹೋಲುತ್ತದೆ. ಕುಳಿತು ಜಾರಿದರೆ, ಬಹುಬೇಗ ಕೆಳಗಲ್ಲ, ಮೇಲಕ್ಕೆ ತಲುಪಬಹುದು!....................... ಹಾಗಿದೆ. ನಮ್ಮೊಂದಿಗೆ ಉಲ್ಲಾಸದಿಂದ ಬಂದ ನಮ್ಮೂರಿನ ಮಗಳು ‘ಸೀತೆಯ ಗಂಡನ’ ಪರಿಸ್ಥಿತಿಯನ್ನು ನೋಡಿ, ನನಗೆ ‘ಅನಂತಲಕ್ಷ್ಮಿ’ಯ ಕತೆ ನೆನಪಾಯಿತು. ಹಾಗೋ, ಹೀಗೋ ಅಂತೂ ಅವರನ್ನು ಇಳಿಸಿಬಿಟ್ಟೆವು. ಅವರೂ ಕೂಡಾ, ಅನಂತು ಹೇಳಿದಂತೆ, “ಇನ್ನು ಈ ಜನ್ಮದಲ್ಲಿ ಈ ಬೆಟ್ಟವೇನು, ಸಿಂಧುಘಟ್ಟದ ಕಡೆಗೆ ತಲೆ ಹಾಕಿ ಮಲಗಿಕೊಳ್ಳುವುದಿಲ್ಲ” ಎಂದು ಹೇಳಿಯೂ ಆಗಿತ್ತು. ಅಂತೂ ಇಂತೂ ದುರ್ಗಮನದಿಂದ ನಿರ್ಗಮನವಾಗಿತ್ತು. ನಮ್ಮ ಕಾಲುಗಳು ಪದ ಹೇಳುತ್ತಿದ್ದವು. ಮುಸ್ಸಂಜೆಯಲ್ಲಿ ಕೆಂಪಾಗಿ ಆಗಸದಲ್ಲಿ ವಿಜೃಂಭಿಸುತ್ತಿದ್ದ ರವಿಮಾಮನು ಮರೆಯಾಗುವುದರೊಳಗೆ ಮನೆ ಸೇರಿದ್ದೆವು. ಉಲ್ಲಾಸದಿಂದ ತೆರಳಿದ್ದ ನಾವುಗಳು ಬೆಟ್ಟ ಹತ್ತಿ ಇಳಿಯುವುದರೊಳಗೆ ಆಯಾಸಗೊಂಡಿದ್ದೆವು. ತಲೆಗೆ ದಿಂಬು ಸಿಕ್ಕಿದ್ದೇ ತಡ ನಿದ್ರಾದೇವಿ ಕಣ್ಣರೆಪ್ಪೆ ಮುಚ್ಚಿಸಿದ್ದಳು. ಅದ್ಯಾವಾಗ ಮಲಗಿದೆವೋ?!............. ಆಗಲೇ ಬೆಳಕು ಹರಿದಿತ್ತು. ಮತ್ತೆ ಮನೆಯ ಜಗುಲಿಯ ಮೇಲೆ ಬಂದು ನಿಂತಾಗ, ದುರ್ಗ ನನ್ನನ್ನು ಕೈಬೀಸಿ ಕರೆದಿತ್ತು.
ನಮ್ಮೂರಿನ ಬಗ್ಗೆ ಹೇಳಿರುವುದು ಮುಗಿಯಿತೆಂದುಕೊಂಡಿರೇನು?!....... ಇಲ್ಲ ಇನ್ನೂ ಇದೆ. ನಮ್ಮ ಊರ ಸುತ್ತಲೂ ಕೋಟೆ ಇದೆ. ಪೂರ್ವಭಾಗದಲ್ಲಿ ‘ದಿಡ್ಡಿಬಾಗಿಲು’ ಇದೆ. ಇದು ಸಿಂಧುಘಟ್ಟದ ಕೋಟೆಬಾಗಿಲಂತೆ. ಬೆಳಿಗ್ಗೆ 6 ಗಂಟೆಗೆ ತೆರೆಯುತ್ತಿದ್ದ, ಈ ‘ದಿಡ್ಡಿಬಾಗಿಲು’ ರಾತ್ರಿ 8 ಗಂಟೆಗೆ ಹಾಕುತ್ತಿತ್ತಂತೆ!..........ಈ ಬಾಗಿಲು ಇದ್ದಿದ್ದನ್ನು ನಮ್ಮ ಅಜ್ಜಿ, ತಾತ ನೋಡಿದ್ದರಂತೆ. ಈಗಲೂ ಅದರ ಅವಶೇಷವಿದೆ. ಆದರೆ, ಈಗ ಬಾಗಿಲು, ಕೀಲಿ ಎರಡೂ ಮಾಯವಾಗಿವೆ. ಅಲ್ಲೇ ಊರ ಬಾಗಿಲು ಪಕ್ಕದಲ್ಲಿಯೇ ಊರ ತಲೆಕಾಯೋ ದೈವ ‘ವೀರಾಂಜನೇಯ ನೆಲೆಸಿದ್ದಾನೆ. ಅದರ ಮುಂದಯೇ ಗಣೇಶನ ಪುಟ್ಟ ಗುಡಿಯಿತ್ತು. ಈಗ ಅದು ಬೃಹತ್ ಗೋಪುರವನ್ನು ಹೊಂದಿ, ಪುನರುತ್ಥಾನ ಕಂಡಿದೆ. ಈ ದಿಡ್ಡಿಬಾಗಿಲಿನ ಆಚೆಗಿರುವುದು ‘ಹೊರಕೇರಿ’, ಒಳಗಿರುವುದು ‘ಒಳಕೇರಿ’, ಹೊರಕೇರಿಯು ವಿಸ್ತಾರವಾದ ಕೆರೆಗೆ ಅಂಟಿಕೊಂಡಿದೆ. ಕೆರೆಯಲ್ಲಿ ಬೃಹತ್ ಆದ, ‘ಗಾಣ ಅರೆಯುವ ಕಲ್ಲು’ ಇದರಿಂದ ಎಣ್ಣೆ ಅರೆಯುತ್ತಿದ್ದರಂತೆ, ಅಂತೆಯೇ ಕೆರೆಯಲ್ಲಿ ಇರುವ ಎರಡು ದೊಡ್ಡ ದೊಡ್ಡ ‘ಕೆರೆಬಾವಿಗಳು’, ಈ ಕೆರೆ ಬಾವಿಯಲ್ಲಿ ಮಡಿ ನೀರು ತರುವುದೆಂದರೆ, ನಮಗೆ ಖುಷಿ!.............. ಕೆರೆಯ ನೀರಿನಲ್ಲಿ ನಡೆದು, ಕೆರೆಯ ಮಧ್ಯದಲ್ಲಿರುವ ಆ ಬಾವಿಯಲ್ಲಿರುವ ಬ್ರಹತ್ ರಾಟೆಗೆ ಹಗ್ಗಕಟ್ಟಿ ನೀರೆಳೆಯುವುದೆಂದರೆ, ಅಮಿತಾನಂದ!....................ಅಂತೆಯೇ ಕೆರೆಯ ಕೆಸರಿನಲ್ಲಿ ಓಲಾಡುವ ಕೆಂದಾವರೆಗಳು. ಬೆಳ್ಳಕ್ಕಿ, ಬಾತುಕೋಳಿಗಳ ದಂಡು!............ಆಹಾ! ಅದನ್ನು ಒಮ್ಮೆ ಅನುಭವಿಸಿಯೇ ನೋಡಬೇಕು!..............

ಪ್ರಕೃತಿಯ ಸೊಬಗಿಗೆ ಕಲೆಯ ಮೆರಗು
ಹೊಯ್ಸಳರ ಮೂರನೇ ಬಲ್ಲಾಳನ ಕಾಲದ ಲಕ್ಷ್ಮೀನಾರಾಯಣ, ಸಂಗಮೇಶ್ವರ ದೇವಾಲಯ ಹಾಗೂ ವಿಜಯನಗರ ಕಾಲದ ಮಸೀದಿಗಳು ಈ ರಮಣೀಯ ಪ್ರಕೃತಿಯ ಸೊಬಗಿಗೆ ಕಲೆಯ ಮೆರಗನ್ನು ಮೂಡಿಸಿವೆ. ಹೌದು! ಇಲ್ಲಿನ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಸಂಗಮೇಶ್ವರ ದೇವಾಲಯ ಮೂಲ ಹೊಯ್ಸಳ ಶೈಲಿಯ ದೇವಾಲಯಗಳಾಗಿದ್ದು, ನಕ್ಷತ್ರಾಕೃತಿಯಲ್ಲಿ ಬುನಾದಿಯ ಮೇಲೆ ರೂಪಿತವಾಗಿವೆ. ಒಳಗಿನ ನವರಂಗಗಳು, ಗರ್ಭಗುಡಿ ದ್ವಾರದ ಕೆತ್ತನೆಗಳು ಅತಿ ಸೂಕ್ಷ್ಮ ಕೆತ್ತನೆಗಳಾಗಿವೆ!........ಇಲ್ಲಿ ದೇವಾಲಯಗಳಲ್ಲಿರುವ ನವರಂಗದ ಕೆತ್ತನೆಗಳು ಒಂದರಂತೆ ಮತ್ತೊಂದಿಲ್ಲ. ಮೂಲ ಶೈಲಿಯ ದೇವಸ್ಥಾನಗಳಾದ್ದರಿಂದ, ಇಲ್ಲಿ ಪ್ರಾಪಂಚಿಕ ವಿಷಯಾಧಾರಿತ ಕೆತ್ತನೆಗೆ ಅವಕಾಶವಿಲ್ಲ. ಹಾಗಾಗೀ ಬೇಲೂರು, ಹಳೇಬೀಡಿನ ಶಿಲಾಬಾಲಿಕೆಯರು ಇಲ್ಲಿ ಒಡಮೂಡಿಲ್ಲ. ಬದಲಿಗೆ ದೇವಾನುದೇವತೆಗಳ ವಿಗ್ರಹಗಳನ್ನು ಕುಸುರಿ ಕೆತ್ತನೆಯೊಂದಿಗೆ ಅಮೋಘವಾಗಿ ಒಡಮೂಡಿದೆ. ಲಕ್ಷ್ಮೀನಾರಾಯಣ ದೇವಾಲಯ ‘ಏಕಕೂಟಾಚಲ’ವಾಗಿದ್ದು, ಸಂಗಮೇಶ್ವರ ದೇವಾಲಯ ‘ದ್ವಿಕೂಟಾಚಲ’ವಾಗಿದೆ. ಅರ್ಥಾತ್ ‘ಏಕಕೂಟಾಚಲ’ದಲ್ಲಿ ಒಂದು ಗರ್ಭಗುಡಿ, ಒಂದು ಮೂಲವಿಗ್ರಹ ಹೀಗಿದ್ದರೆ, ‘ದ್ವಿಕೂಟಾಚಲ’ದಲ್ಲಿ ಎರಡು ಗರ್ಭಗುಡಿ ಎರಡು ಮೂಲವಿಗ್ರಹಗಳು ಹೀಗಿರುತ್ತವೆ. ಇಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ‘ಸಂಗಮೇಶ್ವರ’ ಹಾಗೂ ‘ಜಂಗಮೇಶ್ವರ’ ಎಂಬ ಎರಡು ಶಿವಲಿಂಗಗಳಿದ್ದು, ಎರಡು ನಂದಿ, ಎರಡು ಗಣಪತಿ ಹೀಗೆ ವಿಗ್ರಹಗಳು ಇವೆ. ಇಲ್ಲಿ ಸೂರ್ಯ ನಾರಾಯಣ, ನವಗ್ರಹದೇವತೆ, ಪಾರ್ವತಿದೇವಿ, ಆದಿತ್ಯಾದಿ ನವಗ್ರಹದೇವತೆಗಳು ಇರುವುದು ವಿಶೇಷ. ಇಲ್ಲಿಯ ‘ಗಣೇಶ’ ಸಂಗೀತ ಗಣಪತಿಯಾಗಿದ್ದಾನೆ. ಕೈ ಬೆರಳುಗಳಲ್ಲಿ ವಿಗ್ರಹವನ್ನು ಚುಂಬಿಸಿದರೆ, ನಿನಾದ ಹೊರಹೊಮ್ಮುವುದು ವಿಶೇಷ. ಒಟ್ಟು ಈ ಊರಿನಲ್ಲಿ ಪಂಚಲಿಂಗಗಳನ್ನು ದರ್ಶಿಸಬಹುದು. ಈ ಸಂಗಮೇಶ್ವರ ದೇವಾಲಯದ ಸಂಗಮೇಶ್ವರ, ಜಂಗಮೇಶ್ವರ ಶಿವಲಿಂಗಗಳು, ನಮ್ಮ ಮನೆಯ ಹಿಂಬಂದಿಯಲ್ಲೇ ಇರುವ ಮತ್ತೊಂದು ಶಿವಲಿಂಗದ ದೇವಾಲಯ, ತೋಟದ ಹಾದಿಯಲ್ಲಿರುವ ಪೊದೆಯೊಳಗೆ ಅಡಗಿಕೊಂಡಿರುವ ಮತ್ತೊಂದು ಶಿವ ದೇವಾಲಯ, ಚಂದಮಾಮನ ಬೆಟ್ಟದ ‘ಚಂದ್ರಮೌಳೇಶ್ವರ’ ಮತ್ತು ದುರ್ಗದ ‘ಕೈವಲ್ಯೇಶ್ವರ’. ತಲಕಾಡಿನ ಪಂಚಲಿಂಗ ದರ್ಶನ ಸಿಂಧುಘಟ್ಟದಲ್ಲೂ ಸಾಧ್ಯ. ಲಕ್ಷ್ಮೀ ನಾರಾಯಣನದೂ ವೈಶಿಷ್ಠ್ಯವೇ!.......... ಬೃಹತ್ ಗರುಡಗಂಬ!. ..................... ತೊಡೆಯ ಮೇಲೆಯೇ ‘ಶ್ರೀ ಮಹಾಲಕ್ಷ್ಮೀ ಅಮ್ಮನವರನ್ನು ಕುಳ್ಳಿರಿಸಿ ಕೊಂಡಿರುವ ನಾರಾಯಣ’ ಸುಂದರವಾದ ಉತ್ಸವಮೂರ್ತಿ, ಗರುಡ, ರಾಮಾನುಜರ ವಿಗ್ರಹ ಎಲ್ಲವೂ ಕಲಾ ವೈಶಿಷ್ಠ್ಯಗಳೇ ಆಗಿವೆ. ಲಕ್ಷ್ಮೀ ನಾರಾಯಣ ಸ್ವಾಮಿಗೆ ರಥೋತ್ಸವ ಜರುಗುವುದು ವಿಶೇಷ. ಮಹಾನವಮಿಯ ಸಂದರ್ಭದಲ್ಲಿ. ಉತ್ಸವ ಮಾಡಿಸಿಕೊಳ್ಳುವ ಲಕ್ಷ್ಮೀ ನಾರಾಯಣನ ಉತ್ಸವ ಮೂರ್ತಿ. ಹಂಪಿಯ ದಸರೆಯ ಸಂಸ್ಕೃತಿಯಂತೆ, ಊರಲ್ಲಿರುವ ‘ಮಹಾನವಮಿ ಮಂಟಪ’ಕ್ಕೆ ಹೋಗಿ, ಬನ್ನಿಮರದ ಕೊಂಬೆಯನ್ನು ಕಡಿದು ಬರುವುದು ಪ್ರತೀತಿ. ಇದಲ್ಲದೇ ಸಿಂಧುಘಟ್ಟ ಒಂದು ಅಗ್ರಹಾರವಾಗಿತ್ತಂತೆ. ಅಂದರೆ, ಬ್ರಾಹ್ಮಣರಿಗೆ ದಾನ, ದತ್ತಿಯಾಗಿ ಬಂದ ಊರು. ಹಾಗಾಗೀ. ಇಲ್ಲಿ ವಿಷ್ಣು ಪಂಚಾಯತನ ರೀತ್ಯ, ಊರ ಮಧ್ಯದಲ್ಲಿ ಶ್ರೀ ವಿಷ್ಣು, ಆಗ್ನೇಯದಲ್ಲಿ ಗಣೇಶ, ಈಶಾನ್ಯದಲ್ಲಿ ಈಶ್ವರ, ವಾಯುವ್ಯ ಭಾಗದಲ್ಲಿ ಅಂಬಿಕೆ (ಇದು ಈಗ ತಗ್ಗಿ ತಾಳಮ್ಮ ಎಂದೇ ಪ್ರಖ್ಯಾತಿ ಪಡೆದಿದೆ), ಇರುವುದನ್ನು ಕಾಣಬಹುದು. ಆದರೆ, ನೈರುತ್ಯದಲ್ಲಿ ಸೂರ್ಯನಾರಾಯಣನಿಲ್ಲ. ಪ್ರಾಯಶಃ ಯಾವಾಗಲೋ ನೈರುತ್ಯದಲ್ಲಿದ್ದ, ಸೂರ್ಯ ನಾರಾಯಣನು ಸಂಗಮೇಶ್ವರ ದೇವಾಲಯವನ್ನು ಸೇರಿರಬಹುದು!................................ ಈ ಲಕ್ಷ್ಮೀ ನಾರಾಯಣ ದೇವಾಲಯ ಹಾಗೂ ಸಂಗಮೇಶ್ವರ ದೇವಾಲಯಗಳು ಪ್ರಸ್ತುತ ಜೀರ್ಣೋದ್ಧಾರಗೊಂಡಿವೆ. ಸಂಗಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ ಕೀರ್ತಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಈ ದೇವಾಲಯಗಳ ವಿಶೇಷವೆಂದರೆ, ಈ ದೇವಾಲಯಗಳ ತೊಲೆಯ ಮೇಲೆ ಶಾಸನ ಕೆತ್ತಿರುವುದಾಗಿದೆ. ನನ್ನ ಸಂಶೋಧನೆಯ ಮನವನ್ನು ತಣಿಸಿದ ಕೀರ್ತಿ ಈ ದೇವಾಲಯಗಳಿಗೇ ಸಲ್ಲಬೇಕು. ಏಕೆಂದರೆ, ಈ ಊರಿನ ಒಂದು ಮೂಲೆಯಲ್ಲಿ, ಒಂದು ‘ಗಜಲಕ್ಷ್ಮೀ ದೇವಿ'ಯ ಚಿತ್ರವಿರುವ’ ಕಡುಕಪ್ಪು ಕಲ್ಲಿದೆ. ಈ ಕಲ್ಲನ್ನು ಕುರಿತಂತೆ, ನಾನೀಗಾಗಲೇ ಪರಿಚಯಿಸಿದ ಸಾಹಿತಿ, ಸಂಶೋಧಕರಾದ ತೈಲೂರು ವೆಂಕಟಕೃಷ್ಣರು ಸಾಕಷ್ಟು ಆಸಕ್ತಿ ಹೊಂದಿ, ನಾಲ್ಕಾರು ಬಾರಿ ಸಿಂಧುಘಟ್ಟಕ್ಕೆ ಬಂದು ನೋಡಿ ಹೋಗಿದ್ದರಂತೆ, ಆದರೆ, ಅವರು ಪೂರ್ಣ ನೆಲೆಯಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲವಂತೆ. ನಾನು ಬಿ.ಇಡಿ ಯಲ್ಲಿ ‘ಸಿಂಧುಘಟ್ಟದ ಸುವರ್ಣ ಇತಿಹಾಸ’ ಯೋಜನೆಯ ಕೈಗೆತ್ತುಕೊಂಡಾಗ, ನಾನು ಈ ಕರಿಕಲ್ಲಿನ ಅಸ್ಥಿತ್ವಕ್ಕೆ ವಿಶ್ಲೇಷಣೆ ಬರೆದಿದ್ದೆ. ಇದಕ್ಕೆ ಆಧಾರವಾಗಿದ್ದು, ಈ ದೇವಾಲಯಗಳ ಶಾಸನಗಳೇ!. ಎಫಿಗ್ರಫಿ ಆಫ಼್ ಕರ್ನಾಟಿಕದಲ್ಲಿ ‘ಸಿಂಧುಘಟ್ಟದ ಶಾಸನಗಳ’ಬಗ್ಗೆ ಓದಿದಾಗ, ಈ ದೇವಾಲಯಗಳಲ್ಲಿರುವ ಶಾಸನಗಳು ಸಂಪೂರ್ಣವಾಗಿ, ದೇವಾಲಯಕ್ಕೆ ಸೇರಿದ ಜಮೀನಿನ ಕರಾರು ಶಾಸನಗಳಾಗಿದ್ದವೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಬರುವ ‘ಆನೆಸೇಸೆ’, ‘ಕಟಕಸೇಸೆ’ ಎಂಬ ತೆರಿಗೆಗಳ ಪ್ರಸ್ತಾಪವನ್ನು ಕಂಡ ನಾನು, ಈ ಅಂಶಕ್ಕೂ ‘ಕರಿಕಲ್ಲಿ’ಗೂ ತಾಳೆ ಹಾಕಿ ವಿಶ್ಲೇಷಣೆ ಬರೆದಿದ್ದೆ. ‘ಆನೆಸೇಸೆ’, ‘ಕಟಕಸೇಸೆ’ಗಳು ತೆರಿಗೆಗಳಾಗಿದ್ದು, ಅದನ್ನು ಜನರ ಮೇಲೆ ವಿಧಿಸಲಾಗುತ್ತಿತ್ತು. ಆನೆ, ಕುದುರೆ, ಮುಂತಾದ ಪಡೆಗಳನ್ನು ಹೊಂದಿದ್ದ, ಪಾಳೆಪಟ್ಟು, ಅದರ ನಿರ್ವಹಣೆಗೆ ಈ ತೆರಿಗೆಯನ್ನು ವಿಧಿಸುತ್ತಿತ್ತು. ‘ಆನೆಸೇಸೆ’ಯನ್ನು ವಿಧಿಸುತ್ತೆಂದರೆ, ಇಲ್ಲಿ ಈ ಪಾಳೆಯ ಪಟ್ಟಿನಲ್ಲಿ ಗಜಪಡೆ ಇದ್ದಿತೆಂಬ ತೀರ್ಮಾನಕ್ಕೆ ಬಂದೆ. ಈ ‘ಗಜಲಕ್ಷ್ಮೀದೇವಿ'ಯನ್ನು ಹೊಂದಿರುವ ಈ ಕಲ್ಲು ಊರ ಕೋಟೆಯ ಒಂದು ಮೂಲೆಯಲ್ಲಿದ್ದು, ಇವು ಆನೆ, ಕುದುರೆ ಕಟ್ಟುವ ಲಾಯವಾಗಿರಬೇಕೆಂಬ ವಿಶ್ಲೇಷಣೆ ಬರೆದಿದ್ದೆ. ಇದನ್ನು ನೋಡಿದ, ಶ್ರೀಯುತರು ನನಗೆ ಶಹಬ್ಹಾಸ್ ಗಿರಿಕೊಟ್ಟು, ನನ್ನ ಯೋಜನೆಗೆ ಮುನ್ನುಡಿಯನ್ನೂ ಬರೆದುಕೊಟ್ಟಿದ್ದರು. ಹೀಗೆ ಇತಿಹಾಸಕ್ಕೆ ನೆಲೆಯಾಗಿಯೂ ನಮ್ಮೂರು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇಲ್ಲಿರುವ ಮತ್ತೊಂದು ಇತಿಹಾಸದ ಹೆಜ್ಜೆ ಗುರುತೆಂದರೆ, ವಿಜಯನಗರ ಕಾಲದ ಮಸೀದಿ. ಅತ್ಯಂತ ಕಲಾತ್ಮಕವಾಗಿ, ರೂಪಿಸಿರುವ ಈ ಮಸೀದಿಯಲ್ಲಿಯೂ ಶಾಸನಗಳು ದೊರೆಯುತ್ತವೆ. ಪ್ರಾರ್ಥನೆ ಮಾಡಲು ಇರುವ ಸ್ಥಳ ‘ಕಮಲ್ ಮಹಲ್’ನ್ನು ಹೋಲುವುದು ವಿಶೇಷ.
ಇಷ್ಟೆಲ್ಲಾ ಕಲೆಯ ಸಿರಿ, ಪ್ರಕೃತಿಯ ಸೊಬಗು, ಮಾನವ ಸಂಸ್ಕೃತಿಯ ಮೆರಗು, ಇತಿಹಾಸದ ಬೆರಗು ಹೊಂದಿರುವ ನನ್ನಜ್ಜಿ ಊರು ಎಲ್ಲಿದೆ ಗೊತ್ತೇ?!...................................... ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಿಂದ ಈಶಾನ್ಯಕ್ಕೆ 8 ಕಿಲೋ ಮೀಟರ್ ದೂರದಲ್ಲಿ!......................................... ಇಂತಹ ಊರಿನಲ್ಲಿ ಸದಾ ನೆಲೆಸಿರುತ್ತದೆ ನನ್ನ ಮನ. ಅದೇ ಈ ಹೊತ್ತಿನ ‘ದು’ರ್ಗಮನ’. ಧನ್ಯವಾದಗಳು.

Thursday, 11 January 2018

ವಿವೇಕ’ ಶಿಕ್ಷಣ “ಏಳಿ!.............ಎದ್ದೇಳಿ!................ಗುರಿ ಮುಟ್ಟುವ ತನಕ ನಿಲ್ಲದಿರಿ!.............” ಎಂಬ ನುಡಿಝೇಂಕಾರದ ಮಾರ್ದನಿಯು, ನರನಾಡಿಗಳನ್ನೆಲ್ಲಾ ಹುರಿಗೊಳಿಸಿ, ಮಹೋನ್ನತಿ ಸಾಧಿಸುವ ಪರಮ ಮಂತ್ರವೇ ಆಗಿದೆ. ಇಂತಹ ದನಿಯ ಸೆಲೆ ಇರುವುದು ‘ವಿವೇಕ ಪ್ರಜ್ಞೆ’ಯಲ್ಲಿ. ವಿವೇಕಪೂರ್ಣತೆ, ಬಯಸುವುದು ಎಚ್ಚರದ ಮನವನ್ನು!......... ಬರಿ ಎಚ್ಚರದಿಂದಿದಷ್ಟೇ ಸಾಲದು!............ಸರಿ ದಾರಿಯಲ್ಲಿ ಸಾಗುವ ವಿವೇಚನೆ ಅತಿ ಅವಶ್ಯಕವಾದುದು. ಹಾಗಾದರೆ, ಸರಿ ದಾರಿ ಯಾವುದು ಎಂಬ ಪ್ರಶ್ನೆ ನಮ್ಮ, ನಿಮ್ಮೆಲ್ಲರನ್ನು ಕಾಣುತ್ತದೆ!... ಹೌದು ಸರಿ ದಾರಿಯೆಂದರೆ ಯಾವುದು?............ಅವರರವರ ಕಾರ್ಯೋದ್ದೇಶಗಳಿಗೆ ಅನುಗುಣವಾಗಿ ಆರಿಸಿಕೊಂಡ ಮಾರ್ಗಗಳು ಸರಿಯೇ ಎನಿಸುತ್ತವೆ. ಒಬ್ಬರಿಗೆ ಸರಿ ಎನಿಸಿದ ಮಾರ್ಗ, ಮತ್ತೊಬ್ಬರಿಗೆ ತಪ್ಪಾಗಿ ಕಾಣುತ್ತದೆ. ಸನ್ನಿವೇಶಾತ್ಮಕವಾಗಿ ‘ಸರಿ’ ಹಾಗೂ ‘ತಪ್ಪು’ಗಳು ನಿರ್ಧಾರಿತವಾಗುತ್ತದೆ. ದೃಷ್ಟಿಕೋನ ಬದಲಾದಂತೆ, ಸರಿ-ತಪ್ಪುಗಳು ಬದಲಾಗುತ್ತಾ ಸಾಗಿದಲ್ಲಿ, ‘ಸರಿ’ ಅಥವಾ ‘ತಪ್ಪು’ ಇವುಗಳ ಚೌಕಟ್ಟು ನಿರ್ಮಾಣ ಹೇಗೆ ಸಾಧ್ಯ? ಎಂಬ ದ್ವಂದ್ವಕ್ಕೆ ಪರಿಹಾರ ಹುಡುಕುತ್ತಾ ಸಾಗಿದಂತೆ, ನಮಗೆ ಉತ್ತರ ದೊರೆಯುವುದು ವಿವೇಕರ ಶಿಕ್ಷಣದಲ್ಲಿ. ವಿವೇಕರು ಪ್ರತಿಪಾದಿಸಿದ ‘ಮಾನವ ನಿರ್ಮಾಣ ಶಿಕ್ಷಣ’ ಕ್ರಮದಲ್ಲಿ. ಹೀಗೆ ‘ಸರಿ’, ‘ತಪ್ಪು’ಗಳ ಸರಿಕ್ರಮದ ವಿವೇಚನೆಯೇ ‘ವಿವೇಕ’, ಅದು ಮಾನವ ನಿರ್ಮಾಣದತ್ತ ಮುಖ ಮಾಡಿರಬೇಕು ಎನ್ನುವ ಮಹೋನ್ನತ ಧ್ಯೇಯ ವಿವೇಕರ ಚಿಂತನೆಗಳಲ್ಲಿ ಗೋಚರವಾಗುತ್ತದೆ. ದೇಶದ ಉನ್ನತಿಕೆ ಉಂಟಾಗಲು, ಇಂದು ವಿವೇಕರ ಧ್ಯೇಯವಾಕ್ಯವನ್ನು ಆಧಾರವಾಗಿ ಇಟ್ಟುಕೊಂಡು ನಡೆಯುವ ಅಗತ್ಯತೆ ಇದೆ. ಆಲಸ್ಯದಿಂದ ಯಾವುದೇ ಕಾರ್ಯ ಸಾಗುವುದಿಲ್ಲ, ಪ್ರಗತಿಯ ದರ್ಶನವೂ ಆಗಲಾರದು. ಪ್ರಗತಿಪರತೆಯು ಸಾಧ್ಯವಾಗಬೇಕಾದರೆ, ಅವಶ್ಯಕವಾಗಿರುವುದು ನಮ್ಮಲ್ಲಿರುವ ನಿರಂತರ ಕಾರ್ಯ ತತ್ಪರತೆಯ ‘ಯುವ ಲಕ್ಷಣ’ವನ್ನು ಮೈಗೂಡಿಸಿಕೊಂಡಿರುವುದು, ಯಾವುದೇ ಕಾರ್ಯವನ್ನು ಮಾಡುತ್ತಾ ಇದ್ದಲ್ಲಿ, ಕಾರ್ಯಕ್ಕೆ ತಕ್ಕ ಫಲ ದೊರೆತೇ ದೊರೆಯುತ್ತದೆ. ಹಾಗಾಗೀ ನಾವು ನವ ಹುರುಪಿನೊಂದಿಗೆ ಕಾರ್ಯ ನಿರ್ವಹಿಸುತ್ತಲೇ ಸಾಗಬೇಕು. ಈ ಕಾರ್ಯ ಪ್ರಗತಿಪರತೆಯತ್ತ ಸಾಗುವಂತೆ ನೋಡಿಕೊಳ್ಳುವ ನಿಶ್ಚಿತ ಪ್ರಜ್ಞೆ ನಮ್ಮಲ್ಲಿರಬೇಕು. ಈ ನಿಶ್ಚಿತ ಪ್ರಜ್ಞೆಯನ್ನು ವಿವೇಚನೆ, ವಿವೇಕ ನಮಗೆ ನೀಡುತ್ತದೆ. ಇಂತಹ ‘ವಿವೇಕ ಪ್ರಜ್ಞೆ’ಯನ್ನು ನೀಡುವ ಶಿಕ್ಷಣ ನಮ್ಮ ವ್ಯವಸ್ಥೆಯಲ್ಲಿ ಜಾರಿ ಬರುವುದು ಇಂದಿನ ಅಗತ್ಯವಾಗಿದೆ. ನವ ಹುಮ್ಮಸ್ಸು ಪ್ರವಾಹೋಪಾದಿಯಲ್ಲಿ ಯುವ ಚೇತನಗಳಲ್ಲಿ ಪ್ರಕಟವಾಗುತ್ತಿರುತ್ತದೆ. ನೀರಿನ ಪ್ರವಾಹದ ರಭಸ, ವಿನಾಶವನ್ನೂ ಮಾಡಬಲ್ಲದು. ಆ ನೀರಿನ ರಭಸಕ್ಕೆ ಸರಿಯಾಗಿ ಅಣೆಕಟ್ಟೆಯನ್ನು ಕಟ್ಟಿ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಲ್ಲಿ ಅದೇ ನೀರಿನ ಪ್ರವಾಹದಿಂದ ವಿದ್ಯುಚ್ಛಕ್ತಿಯನ್ನು ತಯಾರಿಸಿ, ಯುಕ್ತ ರೀತಿಯಲ್ಲಿ ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಅಂತೆಯೇ, ರಭಸದಿಂದ ಪ್ರವಹಿಸುವ ಯುವಶಕ್ತಿಯ ನೀರನ್ನು ತಡೆಯುವುದು ಬಲುಕಷ್ಟ. ಇಂತಹ ಪ್ರವಾಹವನ್ನು ತಡೆದು ಅದನ್ನು ಸರಿಶಕ್ತಿಯಾಗಿ ಬಳಸುವುದು ಸುಲಭ ಸಾಧ್ಯವೇನಲ್ಲ. ಯುವ ಶಕ್ತಿಯ ರಭಸಕ್ಕೆ, ಸತ್-ಚಿಂತನೆಯೆಂಬ ಅಣೆಕಟ್ಟನ್ನು ನಿರ್ಮಿಸಿ, ನೀತಿ ಹಾದಿಯ ಮೂಲಕ ಸದ್ವಿಚಾರಗಳ ನೀರು ಹಾಯಿಸಿ, ಉತ್ತಮ ಮಾನವ ಸಮಾಜವೆಂಬ ಬೆಳೆಯನ್ನು ತೆಗೆಯಬೇಕಾದುದು ‘ಮಾನವ ನಿರ್ಮಾಣ ಶಿಕ್ಷಣ’ದ ಗುರಿಯಾಗಬೇಕು. ಉದ್ಯೋಗ ಸೃಷ್ಟಿಯಿಂದ ಉತ್ಪಾದನೆ, ಉತ್ಪಾದನೆಯಿಂದ ಉನ್ನತಿಕೆ ಈ ಉನ್ನತಿಕೆಯಿಂದ ಮಾನವ ಪ್ರಗತಿ ಇಂದಿನ ಧ್ಯೇಯವಾಗಬೇಕು. ಪ್ರಗತಿಯ ಗಂಟೆ ಮುಂದೋಡುತ್ತಾ ಸಾಗಬೇಕು. ‘ಯುವಶಕ್ತಿ’ ಇಂದು ಪ್ರಗತಿಯ ಭ್ರಮೆಯಲ್ಲಿದೆ. ಇದಕ್ಕೆ ಕಾರಣ, ನಾವು ಗಡಿಯಾರದಲ್ಲಿನ ಲೋಲಕದ ರೀತ್ಯ ನಿಂತಲ್ಲೇ ಅತ್ತಲಿತ್ತ ಚಲಿಸುತ್ತಿರುವುದು. ಗಡಿಯಾರದ ಮುಳ್ಳುಗಳಂತೆ ಮುಂದೆ ಮುಂದೆ ನಾವು ಚಲಿಸುತ್ತಲೇ ಇಲ್ಲ. ಗಡಿಯಾರದ ಮುಳ್ಳುಗಳು ಮುಂದೆ ಚಲಿಸಿದಲ್ಲಿ ಮಾತ್ರ ದಿನ ಗತಿಸಿ, ಹೊಸದಿನ, ಹೊಂಬೆಳಕು ಒಡ ಮೂಡುವುದು. ಈ ಹಿನ್ನೆಲೆಯಲ್ಲಿ ಶಿಕ್ಷಣವು ವಿವೇಚನೆಯನ್ನು ಬೆಳೆಸುವತ್ತ ಮನ್ನಡಿ ಇಡುವುದು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ರಮವನ್ನು ಪುನರ್ರಚಿಸುವುದು ಅಪೇಕ್ಷಣೀಯ. ಪರಿವರ್ತಿತ ಶಿಕ್ಷಣದಲ್ಲಿ ಯುವಶಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದು ಅಪೇಕ್ಷಣೀಯ. ಯುವಶಕ್ತಿಯೆಂದರೆ, ಕೇವಲ ಯುವಕರು ಮಾತ್ರವಲ್ಲ, ಪ್ರಗತಿಪರ ಚಿಂತನೆಯ ಎಲ್ಲಾ ‘ಜಾಗೃತ ಯುವ ಮನಗಳು’. “ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು” ಎಂಬ ವಿವೇಕ ವಾಣಿಯು ದೇಹ, ಮನಸ್ಸುಗಳ ಸ್ವಸ್ಥತೆಯನ್ನು ಸಾರುತ್ತದೆ. ಮನೋ ಸ್ವಸ್ಥತೆ, ಪ್ರಗತಿಪರತೆಯ ಧ್ಯೋತಕವಾಗಿರುತ್ತದೆ. ಮನೋಸ್ವಸ್ಥತೆಯನ್ನು ದಿಗ್ಧರ್ಶಿಸುವುದು ವಿವೇಚನಾಪೂರ್ಣ ವರ್ತನೆ. ದುಡುಕಿನ ನಿರ್ಧಾರ, ವಿವೇಚನಾಶೂನ್ಯ ನಿರ್ಣಯಗಳು ಪ್ರಗತಿಪರತೆಯನ್ನು ವಿಗತಿಯತ್ತ ಕೊಂಡೊಯ್ಯಬಲ್ಲವು. ಹಾಗಾಗೀ ಪ್ರಸನ್ನ ಮನಸ್ಕಸ್ಥಿತಿಯನ್ನು ಸೃಷ್ಟಿಸುವುದು ಶಿಕ್ಷಣದ ಅಗತ್ಯ ಎನಿಸಿದೆ. ಸ್ವಸ್ಥ ಮನಕ್ಕೆ ಧ್ಯಾನ ಏಕಾಗ್ರತೆ, ಮಾನವೀಯತೆಗಳ ತರಬೇತಿ, ಸ್ವಸ್ಥದೇಹಕ್ಕೆ ಯುಕ್ತ ‘ಯೋಗ ಶಿಕ್ಷಣ’ ಅಗತ್ಯವಾದುದು. ಮನುಕುಲದ ಪ್ರಗತಿಗೆ ಯುವಜನತೆ ಕಾರ್ಯೋನ್ಮುಖವಾಗುವುದು ಅತ್ಯಗತ್ಯ. ಯುವಜನತೆ ಪ್ರಗತಿಪರತೆಯತ್ತ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ, ‘ವಿವೇಕ ಶಿಕ್ಷಣ’ ಇಂದಿನ ಅಗತ್ಯತೆಯಾಗಿದೆ.

Sunday, 3 September 2017

‘’ಗುರು’ತ್ವ ಅನ್ನದಾನಂ ಮಹಾದಾನಂ ವಿದ್ಯಾದಾನಂ ಅಥಃಪರಃ| ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯೆಯಾ|| ಕ್ಷಣಿಕ ಹಸಿವನ್ನು ನೀಗಿಸುವ ಅನ್ನದಾನ ಮಹಾದಾನವಾದರೆ, ಜೀವನಕ್ಕೆ ಅಗತ್ಯವಾದ ಜ್ಞಾನಾಮೃತದ ಧಾರೆ ಎರೆಯುವ ವಿದ್ಯಾದಾನವು ಅದಕ್ಕಿಂತಲೂ ಮಿಗಿಲಾದುದು. ಇಂತಹ ಜ್ಞಾನದಕ್ಕಿಯ ಭಿಕ್ಷೆ ನೀಡುವವನು ‘ಗುರು’. ಈತ ನಿಜವಾಗಿಯೂ ದೇವಶ್ರೇಷ್ಠನು. ಅದಕ್ಕಾಗಿಯೇ ಗುರುವನ್ನು ಋಗ್ವೇದದಲ್ಲಿ “ಗುರುಬ್ರಹ್ಮ, ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ” ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ದೈವತ್ವಕ್ಕೇರಿಸಿ, ಕೊಂಡಾಡುತ್ತಾರೆ. ಹೌದು ಅರಿವನ್ನು ಸಮಾಜದ ಪೀಳಿಗೆಗಳಲ್ಲಿ ಸೃಷ್ಟಿ ಮಾಡುವುದರಿಂದ ಆತನು ಬ್ರಹ್ಮನೇ ಸರಿ, ಆ ಅರಿವಿನ ಸಹಾಯದಿಂದ ಸಮಾಜ, ದೇಶವನ್ನು ಮುನ್ನಡೆಸುತ್ತಾನೆಯಾದ್ದರಿಂದ ಆತ ವಿಷ್ಣುವೇ ಸರಿ, ದುರ್ಮಾರ್ಗಗಳನ್ನು ತೊಡೆದು ಸನ್ಮಾರ್ಗವನ್ನು ಪ್ರತಿಷ್ಠಾಪಿಸುತ್ತಾನೆಯಾದ್ದರಿಂದ ಆತ ಶಿವನೇ ಸರಿ. ಹೀಗೆ ಸೃಷ್ಟಿ, ಸ್ಥಿತಿ, ಲಯಗಳ ಕಾರಣಕರ್ತನಾಗಿ ಗುರು ಪಾತ್ರ ನಿರ್ವಹಿಸುತ್ತಾನೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಆತ ದೇವನಿಗಿಂತಲೂ ಶ್ರೇಷ್ಟ. ಗುರು ಗೋವಿಂದರಲ್ಲಿ ಯಾರು ಶ್ರೇಷ್ಠ?. ಗೋವಿಂದನನ್ನು ತೋರಿದ ಗುರುವೇ ಉತೃಷ್ಟ ಎಂಬ ಕಬೀರರ ಮಾತು ಇದಕ್ಕೆ ಅಕ್ಷರಶಃ ಸತ್ಯ ಸಾಕ್ಷಿಯಾಗಿದೆ. ಆದರೆ ಇಂದೇನಾಗುತ್ತಿದೆ? ಸೇವೆಯ ನೆಲೆ ಹೊಂದಿದ್ದ, ‘ಬೋಧನಾ ವೃತ್ತಿ’ ಇಂದು ವ್ಯಾಪಾರೀಕರಣಗೊಳ್ಳುತ್ತಿರುವುದು ನಿಜವಾಗಿಯೂ ಖೇಧನೀಯ. ‘ಗುರು’ವೆಂದರೆ, ಇದ್ದ ಘನತೆ ಮರೆಯಾಗುತ್ತಿದೆ. ವೃತ್ತಿಗೌರವವಂತೂ ಬಹುತೇಕರಲ್ಲಿ ಮರೆಯಾಗುತ್ತಿರುವುದು ಅನುಭವವೇದ್ಯವಾಗುತ್ತಿರುವ ಸಂಗತಿ. ವೃತ್ತಿಕ್ಷೇತ್ರಕ್ಕೆ ಬರುತ್ತಿರುವವರೂ ಸರ್ಕಾರಿ ಉದ್ಯೋಗ ನಿಮಿತ್ತವೋ?!....ಯಾವುದೋ ಒತ್ತಡಕ್ಕೋ?!.......... ಆಗುತ್ತಿರುವುದು ಪ್ರಸ್ತುತದ ಸಂಗತಿಯಾಗಿದೆ. ಇನ್ನೂ ವಿಷಾಧನೀಯ ಸಂಗತಿಯೆಂದರೆ, “ ಎಲ್ಲೂ ಸಲ್ಲದವ ಶಿಕ್ಷಕ ವೃತ್ತಿ’ಯಲ್ಲಿ ಸಲ್ಲುವ” ಎನ್ನುವ ಭಾವವನ್ನು ಈ ಪವಿತ್ರ ಕ್ಷೇತ್ರದಲ್ಲಿ ನಿರೀಕ್ಷಿಸಿರಲಿಲ್ಲ. ಆದರೆ, ಇಂದು ಈ ಉಕ್ತಿ ಸ್ವೀಕಾರಾರ್ಹವಾಗದಿದ್ದರೂ, ವಾಸ್ತವ ಅದೇ ಆಗಿದೆ. ಇ.ಎ.ಪೈರಸ್ ಒಂದು ಕಡೆ ಹೇಳುತ್ತಾನೆ, “ ನಮ್ಮ ದೇಶದ ಶಿಕ್ಷಕರು ಮೂರನೆಯ ವರ್ಗದವರಾದರೆ, ನಮ್ಮ ದೇಶವೂ ಮೂರನೆಯ ವರ್ಗವಾಗುತ್ತದೆ”, ಹೌದು ಆತನ ಮಾತು ಅಕ್ಷರಶಃ ಸತ್ಯ. ಒಬ್ಬ ವೈದ್ಯನ ಕರ್ತವ್ಯಲೋಪ, ಒಂದು ಜೀವವನ್ನು ಬಲಿ ತೆಗೆದುಕೊಳ್ಳಬಲ್ಲದು. ಅಂತೆಯೇ ಒಬ್ಬ ಅಭಿಯಂತರನ ಕರ್ತವ್ಯ ಲೋಪ ಒಂದು ಕಟ್ಟಡವನ್ನು ಬೀಳಿಸಬಲ್ಲದು. ಆದರೆ, ಒಬ್ಬ ಶಿಕ್ಷಕನು ತನ್ನ ಕರ್ತವ್ಯವನ್ನು ಮರೆತದ್ದೇ ಆದರೆ, ಅದು ದೇಶದ ಬುನಾದಿಯನ್ನೇ, ಸಮಾಜದ ನೆಲೆಯನ್ನೇ ಅಲುಗಾಡಿಸಬಲ್ಲದು .ಇದಕ್ಕೆಲ್ಲಾ ಯಾಂತ್ರಿಕ ಬದುಕಿನ ಬಳುವಳಿಯಾದ ‘ಬದ್ಧತೆ’ಯ ಕೊರತೆಯೇ ಕಾರಣವಾಗಿದೆ. ಭವಿಷ್ಯದ ಸಮಾಜ, ದೇಶದ ಕಟ್ಟಡಕ್ಕೆ, ಬುನಾದಿಯೇ ಭದ್ರವಾಗಿರದಿದ್ದಲ್ಲಿ ಭವಿಷ್ಯದ ಕನಸಿನ ಕೋಟೆ ಭದ್ರವಾಗಿ ನನಸಾಗುವುದಾದರೂ ಹೇಗೆ?!................................ ಮೌಲ್ಯ, ಬದ್ಧತೆ, ನೈತಿಕತೆಯ ನೆಲೆಯಲ್ಲಿ, ಅರಿವಿನ ಸೃಜನೆಯಾಗಬೇಕಾದುದು ನಿಹಿತವಾದುದಲ್ಲವೇ?!......ಹೀಗಾಗೀ ಮುಂದಿನ ಪೀಳಿಗೆಯ ಭದ್ರನೆಲೆಗೆ ಶಿಕ್ಷಕರಿಗೆ ನೀಡುವ ಸೇವಾ ಪೂರ್ವ ತರಬೇತಿ ಕಾರ್ಯಕ್ರಮವು ಗುಣಮಟ್ಟವನ್ನು ಆಧರಿಸಿರುವುದು ಅಪೇಕ್ಷಣೀಯ. ಆದರೆ, ಇಂದಿನ ಸೇವಾಪೂರ್ವ ತರಬೇತಿಯ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಹಣಕೊಟ್ಟು ಯಶಸ್ವೀ ತರಬೇತಿಯ ಪ್ರಮಾಣಪತ್ರ ಪಡೆಯುವ ಭಾವೀ ‘ಶಿಕ್ಷ’ಕ (‘ಶಿಕ್ಷಾ’ರ್ಹ) ರಿಂದ ಭದ್ರ ಭವಿಷ್ಯದ ನಿರೀಕ್ಷೆ ಸಾಧ್ಯವೇ?!......... ತರಬೇತಿ ಸಂಸ್ಥೆಗಳಾದರೋ, ಹಣ ಮಾಡುವ ಕೇಂದ್ರಗಳಾಗಿ ಪರಿವರ್ತಿತವಾಗುತ್ತಿರುವುದು ನಿಜವಾಗಿಯೂ ಖೇಧನೀಯ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ, ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ದಿಟ್ಟ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಹಿಂಜರಿದರೆ, ಭವಿಷ್ಯ ಅಯೋಮಯವಾಗುವುದಂತೂ ನಿಶ್ಚಿತ. ಈ ಕಾರ್ಯ ಸುಲಭ ಸಾಧ್ಯವೇನಲ್ಲ. ಇಂತಹ ತರಬೇತಿ ಕೇಂದ್ರಗಳಿಗೆ ಬೆಂಬಲಾಸ್ತ್ರವಾಗಿ,ನಿಂತಿರುವ ರಾಜಕಾರಣವನ್ನು ಮೆಟ್ಟಿನಿಲ್ಲುವುದು ಅವಶ್ಯಕವಾಗಬಹುದು. ಆದರೆ, ಭವ್ಯ ದೇಶದ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಇದು ಅಗತ್ಯವಾದುದು. ಈಗಾಗಲೇ ಈ ಅವ್ಯವಸ್ಥಿತ ತರಬೇತಿಯಿಂದ ಮುಂದಾಗಬಹುದಾದ ಸಮಸ್ಯೆಯನ್ನೂ ತಡೆಗಟ್ಟಬೇಕಿದೆ. ಅದಕ್ಕಾಗಿ, ಶಿಕ್ಷಕರ ಆಯ್ಕೆಯ ಪ್ರಕ್ರಿಯೆ ಹೆಚ್ಚು ಸುಧಾರಿಸಬೇಕು. ಗುಣಾತ್ಮಕ ನೆಲೆಗಟ್ಟಿನಲ್ಲಿ, ವೃತ್ತಿಪರ ಖಾಳಜಿ ಉಳ್ಳವರ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಷಯ ಜ್ಞಾನವಷ್ಟೇ, ಶಿಕ್ಷಕರ ಆಯ್ಕೆಗೆ ಮಾನದಂಡವಾಗದೇ, ಸೃಜನಾತ್ಮಕತೆ, ರಚನಾತ್ಮಕತೆ, ಮೌಲಿಕತೆ ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿತ್ವ ಸಂಬಂಧೀ ಅಂಶಗಳ ನೆಲೆಯನ್ನು ಮಾನದಂಡವಾಗಿರಿಸಿಕೊಂಡು, ಬದ್ಧ ಶಿಕ್ಷಕರನ್ನು ಆರಿಸಿದಲ್ಲಿ ಭವಿಷ್ಯ ಉಜ್ವಲವಾಗಬಲ್ಲದು. ಈ ಸಂದರ್ಭದಲ್ಲಿ ಕೊಠಾರಿ ಶಿಕ್ಷಣ ಆಯೋಗದ ನುಡಿಮುತ್ತು ನೆನಪಿಗೆ ಬರುತ್ತಿದೆ. “ಭವ್ಯ ಭಾರತದ ಭವಿಷ್ಯ ತರಗತಿಯ ಕೋಣೆಗಳಲ್ಲಿ ನಿರ್ಮಾಣವಾಗುತ್ತಿದೆ”. ಎಂಬ ಮಾತು ನಿಜವಾಗಿಯೂ ಸರ್ವರಿಗೂ ಎಚ್ಚರಿಕೆಯ ಗಂಟೆ. ಈ ಹಿನ್ನೆಲೆಯಲ್ಲಿ ‘ಗುರು’ತ್ವದ ಪಟ್ಟಕ್ಕೇರುವ ಮುನ್ನ ಅಥವಾ ಆ ಪಟ್ಟಕ್ಕೆ ಏರಿಸುವ ಮುನ್ನ ಆಲೋಚಿಸುವುದು ಅವಶ್ಯಕ. ‘ಗುರು’ತ್ವದ ಪವಿತ್ರ ಪಟ್ಟ ಏರುವ ಮುನ್ನ, ‘ಗುರು’ತ್ವದ ವ್ರತಗಳಾದ ಶ್ರದ್ಧೆ, ಭಕ್ತಿ, ಸೇವೆ, ನಿಷ್ಟೆ ಇತ್ಯಾದಿಗಳಿಗೆ ಬದ್ಧರಾಗಿರುವುದು ಅನಿವಾರ್ಯ ಎಂಬುದನ್ನು ಮರೆಯದಿರಿ. ‘ಗುರು’ತ್ವದ ಪಟ್ಟಕ್ಕೇರುವುದು ಸಾಧನೆಯ ಹಾದಿಯಿಂದ ಮಾತ್ರವೇ ಪರಂತು, ಜೀವನ ನಿರ್ವಹಣೆ ಮಾತ್ರಕ್ಕಾಗಿ, ಶಿಕ್ಷಕ ವೃತ್ತಿಯನ್ನು ಬಳಸಿಕೊಳ್ಳುವುದರಿಂದಲ್ಲ. ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ, ಈ ಲೇಖನ ಪ್ರಸ್ತುತವೆಂದು ಭಾವಿಸುತ್ತಾ, ಶಿಕ್ಷಕರ ದಿನಾಚರಣೆಗಾಗಿಯೇ 2013ರಲ್ಲಿ ಸ್ವರಚಿಸಿ, ಸ್ವಯಂ ರಾಗ ಸಂಯೋಜಿಸಿ, ನನ್ನ ‘ಅಕ್ಕರೆ’ ಬ್ಲಾಗರ್ ನಲ್ಲಿ ಪ್ರಕಟಿಸಿದ ಹಾಗೂ ಮೈಸೂರಿನ ಸೇಂಟ್ ಮಥಾಯಿಸ್ ಶಾಲೆಯ ಮಕ್ಕಳಿಂದ ಆಕಾಶವಾಣಿಯಲ್ಲಿ ಹಾಡಲ್ಪಟ್ಟ ‘ಗುರು ನಮನ’ ಗೀತೆಯೊಂದಿಗೆ ಈ ‘ಗುರು’ತ್ವ ಲೇಖನಕ್ಕೆ ಸದ್ಯ ವಿರಾಮ ಇಡುತ್ತಿದ್ದೇನೆ. ಗುರುನಮನ ಜ್ಞಾನವೇ ಜಗದಲ್ಲಿ ಶ್ರೇಷ್ಠತಮ ಜ್ಞಾನ ನೀಡೋ ಗುರುವೇ ಸರ್ವೋತ್ತಮ ಮೌಢ್ಯಾಂಧಕಾರವೆಂಬೋ ಅಜ್ಞಾನತಮ ತೊಡೆಯುವ ಗುರುವೇ ಜ್ಯೋತಿರ್ಗಮ|| ಜ್ಞಾನ|| ಅನುಭವಗಳ ಸವಿಯು ಹೃದಯಂಗಮ ಅದ ನೀಡೋ ಗುರು ಮಂದಿರವೇ ಜ್ಞಾನಸಂಗಮ ದಿವ್ಯ ಭವ್ಯ ಚೇತನಗಳ ಸೃಷ್ಟ ಉಗಮ ಕಾರಣಿಕ ಗುರುವೇ ಪುರುಷೋತ್ತಮ ||ಜ್ಞಾನ|| ಕಲಿಕೆಯ ಹಾದಿಯು ಬಲು ಕಠಿಣತಮ ಮಾರ್ಗಕಾರ ಗುರುವಿರಲು ಹಾದಿ ಸುಗಮ ವಿದ್ಯಾದಾನ ಶ್ರೇಷ್ಠದಾನ ಉತ್ತಮೋತ್ತಮ ಅದ ನೀಡೋ ಶಿಕ್ಷಕನಿಗೆ ದೀರ್ಘ ಪ್ರಣಾಮ ||ಜ್ಞಾನ|| ಜೈ ಜೈ ಗುರುದೇವ