Sunday 23 November 2014

ವಿಜ್ಞಾನ ಗೀತೆ
ವಿಜ್ಞಾನದ ನವ ದೇಗುಲದಲ್ಲಿ ಜ್ಞಾನವು ಬೆಳಗಲಿ
ಅಜ್ಞಾನಾಂಧಕಾರವನ್ನು ತೊಡೆದೂ ಬೆಳಗಿಸಲಿ।।ಪಲ್ಲವಿ।।

ನವನವ ಪ್ರಶ್ನೆಯ ಸಾಲು ಸಾಲು ಮನದಲಿ ಮೂಡಲಿ
ಪ್ರಗತಿಯ ಪಥದಲಿ ಸಾಗುವ ಜ್ಞಾನ ಉತ್ತರವಾಗಲಿ
ಪ್ರಕೃತಿಯ ಮಡಿಲಲಿ ಅಡಗಿದೆ ಸತ್ಯವು ಅರಳುತ ಸಾಗಲಿ ।।೨।।
ನಿತ್ಯ ಕುತೂಹಲ ಭಾವಕಿರಣವು ಸತ್ಯವ ಅರಳಿಸಲಿ ।।ವಿಜ್ಙಾನ।।

ಮೂಢ ಭಾವವಾ ದೂಡುವ ಮನವು ನಮ್ಮದಾಗಲಿ
ಗಾಢಜ್ಞಾನವಾ ನೀಡುವ ಶಕ್ತಿ ವಿಜ್ಞಾನವಾಗಲಿ
ವಾಸ್ತವ ಜ್ಞಾನದ ಅರಿವೂ ನಮ್ಮ ಮನದಲಿ ಮೂಡಲಿ ।।೨।।
ಪ್ರಯೋಗ, ಸಂಶೋಧನೆಗಳೆ ಆಧಾರವಾಗಲಿ ।।ವಿಜ್ಞಾನ।।

ಕಾರಣ-ಪರಿಣಾಮ ಚಿಂತನೆ ಜ್ಞಾನವು ಬೆಳಗಲಿ
ನಿತ್ಯವಿವೇಚನೆ, ತಥ್ಯ ವಿಮರ್ಶೆ ನಡೆಯುತ ಸಾಗಲಿ
ಪರಿವರ್ತನೆಯ ಮೂಲಪ್ರೇರಕ ಜ್ಞಾನವು ಜನ್ಮಿಸಲಿ ।।೨।।
ವಿಜ್ಞಾನದ ಈ ಶುಭದಿನದಂದು ಪ್ರಗತಿಯು ಮೂಡಲಿ ।।ವಿಜ್ಞಾನ।।


Monday 17 November 2014

ಗಾಂಧೀ ನಮನ (ಗೀತೆ)

('ಶ್ರಾವಣ ಮಾಸಕೆ ಶ್ರವಣವೆ ಸಾರಿತು' ದೇಶಭಕ್ತಿ ಗೀತೆಯ ಧಾಟಿಯಲ್ಲಿ .........)

ಭಾರತ ಮಾತೆಯ ಕೀರ್ತಿಯ ಧ್ವಜವಾ ಹಾರಿಸಿದಾ ಮಹಾತ್ಮನೇ।
ನಮನವು ನಿನಗೆ ಸ್ವತಂತ್ರ್ಯನೀಡಿದ ಓ ಗಾಂಧೀ ತಾತನೇ ।।ಪ।।

ದಾಸ್ಯದ ಅಂಧಕಾರದಲ್ಲಿ 
ಮುಳುಗಿದ ದೇಶವ ಬೆಳಗಿದೆ ।
ಸ್ವತಂತ್ರ್ಯ ಜ್ಯೋತಿಯ ಕಿಚ್ಚನು ಹಚ್ಚಿ ।।೨।।
ದೇಶದ ಬೆಳಕು ನೀನಾದೆ ।।ಭಾರತ।।

ಸತ್ಯ ಅಹಿಂಸೆಯೆ ನಿನ್ನ ಪಾಠವು
ದೇಶದ ಪ್ರಗತಿಯ ನೋಟವು।
ದೇಶಕೆ ತ್ಯಾಗವ ಮಾಡಲು ಬೇಕು ।।೨।।
ಗಾಂಧೀ ಕರೆಯು ಸ್ಪಷ್ಟವು ।।ಭಾರತ।।

ಜಾತಿ ಭೇದದ ಸಂಕೋಲೆಯಲಿ 
ಬಂಧಿತ ತನುಮನಗಳಾ ।।೨।।
ಪವಿತ್ರಗೊಳಿಸಲಿ ಗಾಂಧಿ ಮಂತ್ರವು ।।೨।।
ಗಾಂಧೀ ಕನಸು ನನಸಾಗಲಿ ।। ಭಾರತ।।