Saturday 20 August 2016

'ಪದಾರ್ಥ ಚಿಂತಾಮಣಿ'ಗೆ ನನ್ನ ಪ್ರತಿಕ್ರಿಯೆ ಶಂಕರ ಭಟ್ ಬಾಲ್ಯ ರವರ ಪ್ರಶ್ನೆ: 'ಸ್ವಾತಂತ್ರ್ಯ'ಸಂಸ್ಕೃತ ಪದ.ಸಮಾನ ಅರ್ಥ ಕೊಡುವ ಶುದ್ಧ ಕನ್ನಡ ಪದ ಯಾವುದು? 'ಸ್ವಾತಂತ್ರ್ಯ' ಒಂದು ಭಾವಸ್ಥಿತಿಯ ಅರ್ಥದಲ್ಲಿ ಬಳಕೆಯಾಗಿರುವ ಪದ. ಹಾಗಾಗೀ ಇದಕ್ಕೆ ಸಮಾನಾರ್ಥಕವಾಗಿ ಭಾವಸ್ಥಿತಿಯೇ ಆಗಬೇಕಲ್ಲವೇ? ಹಾಗಾಗಿ,'ಬಿಡುಗಡೆ'ಯ ನಂತರದ ಭಾವಸ್ಥಿತಿ 'ಬಿಡುವು'. ಈ ಪದವನ್ನು ಸ್ವಾತಂತ್ರ್ಯಕ್ಕೆ ಸಮಾನಾರ್ಥಕ ಪದವಾಗಿ ಬಳಸಬಹುದೇ? ಎಂಬ ಅಭಿಪ್ರಾಯ ರೇವು ರವಿಯವರ ಪ್ರಶ್ನೆ: ಲೋಕಲ್ ಪದದ ಅರ್ಥ. ಸ್ಥಳೀಯ, ಹಾಗೂ ಕೆಲವರು ಲೋಕಲ್ ಅಂದರೆ ತುಂಬಾ ಕೆಳಮಟ್ಟ ಅಂತ ಭಾವಿಸುತ್ತಾರೆ. ದಯವಿಟ್ಟು ಇವುಗಳ ಭಿನ್ನತೆ ಹಾಗೂ, ಸರಿಯಾದ ಅರ್ಥ ತಿಳಿಸಿ. ನನ್ನ ಪ್ರತಿಕ್ರಿಯೆ 'ಭಾಷಾ ಸ್ವೀಕರಣ' ಯಾವುದೇ ಭಾಷೆಯ ಜಾಯಮಾನವಾಗಿರುತ್ತದೆ. ಇದಕ್ಕೆ, ಕನ್ನಡ ಭಾಷೆಯೂ ಹೊರತಲ್ಲ. 'ಭಾಷಾ ಸ್ವೀಕರಣ' ಎಂದರೆ, ಮತ್ತೊಂದು ಭಾಷೆಯಿಂದ, ಪದಗಳನ್ನು ಸ್ವೀಕರಿಸುವುದು. ಹೀಗೆ ಭಾಷಾ ಸ್ವೀಕರಣದ ಸಂದರ್ಭದಲ್ಲಿ, ಧ್ವನಿ ವ್ಯತ್ಯಾಸ', ಕೆಲವೊಮ್ಮೆ ಅರ್ಥ ವ್ಯತ್ಯಾಸ ಮಾಡಿಕೊಂಡು, ಈ ಭಾಷಾ ಸ್ವೀಕರಣ ಕಾರ್ಯ ಜರುಗುತ್ತದೆ. ಈ ರೀತಿ ಅರ್ಥ ವ್ಯತ್ಯಾಸ ಮಾಡಿಕೊಂಡು, ಆಂಗ್ಲ ಭಾಷೆಯಿಂದ ನಮ್ಮ ಕನ್ನಡ ಭಾಷೆಗೆ ಬಂದ ಪದ ಈ 'ಲೋಕಲ್' ಎನ್ನುವ ಪದ. 'Local' ಆಂಗ್ಲ ಭಾಷೆಯ ಪದವಾಗಿದ್ದು, 'ಸ್ಥಳೀಯ', 'ಸ್ಥಾನಿಕ' ಎಂಬ ಮೂಲಾರ್ಥವನ್ನೇ ಹೊಂದಿರುವ ಪದವಾಗಿದೆ. ಆದರೆ, ಭಾಷಾ ಸ್ವೀಕರಣದ ಸಂದರ್ಭದಲ್ಲಿ, 'ಸ್ಥಳೀಯ' ಎಂಬ ಮೂಲಾರ್ಥವನ್ನು ಕಳೆದುಕೊಂಡು,'ಕಳಪೆ' ಎನ್ನುವ 'ಹೀನಾರ್ಥ' ಹೊಂದಿ, ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿದೆ. ಇದಕ್ಕೆ ಕಾರಣ, 'ಲೋಕಲ್' ಪದವನ್ನು ಇಂಗ್ಲೀಷರು ಬಳಸುತ್ತಿದ್ದ ರೀತಿಗೂ, ಕನ್ನಡಿಗರು ಆ ಪದವನ್ನು ಅರ್ಥೈಸುಕೊಳ್ಳುವ ರೀತಿಗೂ ಸಾಹಚರ್ಯ ಒದಗಿದುದರಿಂದ ಎಂದು ಕಾರಣೀಕರಿಸಬಹುದು. ಇಂಗ್ಲೀಷರು, 'Local Peoples' ಎಂದು ಸ್ಥಳೀಯರನ್ನು ಸಂಬೋಧಿಸುತ್ತಿದ್ದುದು, ಅಂತೆಯೇ ಅವರು ಸ್ಥಳೀಯರನ್ನು ಕೀಳಾಗಿ ಕಾಣುತ್ತಿದ್ದ ರೀತಿಗೂ ಸಾಹಚರ್ಯ ಉಂಟಾದ ಕಾರಣ, 'ಲೋಕಲ್' ಪದವು 'ಹೀನಾರ್ಥ'ವನ್ನು ಪಡೆದುಕೊಂಡಿರಬಹುದು. ಇದೇ ರೀತಿಯಲ್ಲಿ 'Country Dogs', 'ಕಂತ್ರಿ ನಾಯಿ' ಯಾಗಿರುವ ಸಾಧ್ಯತೆಯನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಧನ್ಯವಾದಗಳು. ಕಿರಣ್ ಚಿತ್ರದುರ್ಗರವರ ಪ್ರಶ್ನೆ: ಕೇಡಿ (Known Depradator) ಎಂಬ ಪದ ಆಂಗ್ಲ ಭಾಷೆಯದ್ದಾದರೂ ಬೈಗುಳವಾಗಿ ಮಾನಗೇಡಿ ಎಂಬ ಪದ ಕನ್ನಡದ್ದಾಗಿದ್ದು ಹೇಗೆ? ಕೆಲವೆಡೆ ಸಾತ್ವಿಕ ಸಿಟ್ಟಿನಿಂದ ಬೈಯುವಾಗ 'ಸುಮಾನ' ಎಂಬ ಪದವನ್ನು ಬಳಸುವುದು ಕೇಳಿದ್ದೇನೆ , ಅದರರ್ಥ ತಿಳಿಸಿ. ನನ್ನ ಪ್ರತಿಕ್ರಿಯೆ: ನಾಮಪದ'ದಲ್ಲಿ ಪ್ರಧಾನವಾಗಿ ಎರಡು ಬಗೆ. ಅವುಗಳೆಂದರೆ, 'ಸಹಜ ನಾಮಪದಗಳು' ಹಾಗೂ 'ಸಾಧಿತ ನಾಮಪದಗಳು'. ಸಹಜವಾಗಿ ನಾಮಪ್ರಕೃತಿಯ ಸ್ವರೂಪದಲ್ಲಿ ರೂಪುಗೊಳ್ಳುವಂತಹುದೇ 'ಸಹಜ ನಾಮಪದಗಳು'.ರೂಢನಾಮ, ಅಂಕಿತನಾಮ, ಅನ್ವರ್ಥನಾಮಗಳು ಈ ಸಹಜನಾಮದ ಬಗೆಗಳು. 'ಪ್ರತ್ಯಯ'ವನ್ನು ಕೂಡಿಕೊಂಡು ಆಗುವಂತಹ ನಾಮಪದಗಳೇ ' ಸಾಧಿತ ನಾಮಪದಗಳು', ಪ್ರತ್ಯಯವನ್ನು ನಾಮ ಅಥವಾ ಸೇರಿಸಿಕೊಂಡು ಇಲ್ಲಿ ನಾಮಪದಗಳನ್ನು ಸಾಧಿಸಲಾಗುತ್ತದೆಯಾದ್ದರಿಂದ, ಈ ರೀತಿಯ ನಾಮಪದಗಳನ್ನು 'ಸಾಧಿತ ನಾಮಪದಗಳು' ಎನ್ನುವರು. ಈ ಸಾಧಿತ ನಾಮಪದಗಳಲ್ಲಿ ಎರಡು ಬಗೆ. ಅವುಗಳೆಂದರೆ,'ತದ್ಧಿತಾಂತ ನಾಮಪದಗಳು' ಹಾಗೂ 'ಕೃದಂತ ನಾಮಪದಗಳು'. ತದ್ಧಿತ ಪ್ರತ್ಯಯಗಳಾದ 'ಗಾರ', 'ಇಗ', 'ಅಡಿಗ', 'ವಂತ', 'ವಳ','ಆಳಿ' ಇತ್ಯಾದಿ ಪ್ರತ್ಯಯಗಳನ್ನು 'ನಾಮಪ್ರಕೃತಿ'ಯ ಮೇಲೆ ಹತ್ತಿಸಿ, ತದ್ಧತಾಂತ ನಾಮಪದಗಳನ್ನು ಮಾಡುವುದು ರೂಢಿ. ಇದು ಭಾಷೆಯು ವಿಕಸನವಾಗುತ್ತಿರುವುದರ ಧ್ಯೋತಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಪದವೇ, 'ಕೇಡಿಗ'. ಇಲ್ಲಿ 'ಕೇಡು' ಪ್ರಕೃತಿಗೆ 'ಇಗ' ಪ್ರತ್ಯಯವನ್ನು ಹತ್ತಿಸಿ, ತದ್ಧತಾಂತ ನಾಮಪದವನ್ನಾಗಿ ಮಾಡಲಾಗಿದೆ. 'ಕೇಡು' ಎಂದರೆ, ಎಂದರೆ, 'ಕೆಡುಕಿನ ಸ್ಥಿತಿ'ಯನ್ನು ಸೂಚಿಸುವ ಪದ. ಇದೊಂದು 'ಭಾವನಾಮ', ಕೇಡಿನ ಭಾವವನ್ನು ಹೊಂದಿದವನು 'ಕೇಡಿಗ'. ಅಂದರೆ, ಇದು ತದ್ಧಿತಾಂತ ಭಾವನಾಮ. ಭಾಷೆಯು ಕಾಲಾಂತರದಲ್ಲಿ ವ್ಯತ್ಯಾಸವಾಗುವುದು ವಿಧಿತವಾದ ಸಂಗತಿಯಾಗಿದೆ. ಭಾಷೆಯ ಧ್ವನಿ ವ್ಯತ್ಯಾಸವಾಗುವುದಕ್ಕೆ 'ಮಿತವ್ಯಯಾಸಕ್ತಿ'ಯು ಕಾರಣವಾಗಿರುತ್ತದೆ. ಅಂದರೆ, ರೂಢಿ ಪದಗಳು ತನ್ನ ವಿಸ್ತೃತ ರೂಪವನ್ನು ಕಳೆದುಕೊಂಡು, ಸಂಕ್ಷಿಪ್ತವಾಗುವುದು. ಉದಾಹರಣೆಗೆ, ನಾರಾಯಣ ನಾಣಿ, ಶ್ರೀನಿವಾಸ, ಶೀನಿ ಇತ್ಯಾದಿ. 'ಕೇಡಿಗ' ಪದವೂ ಕೂಡ, ಅಂತ್ಯದ 'ಗ' ಅಕ್ಷರವನ್ನು ಕಳೆದುಕೊಂಡು, 'ಕೇಡಿ' ಆಗಿರಬಹುದು. ಏನೇ ಧ್ವನಿ ಸ್ವರೂಪದಲ್ಲಿ ಬದಲಾದರೂ, ಅರ್ಥ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲ.'ಕೆಡುಕಿನ ಭಾವ (ಮನೋಭಾವ) ಸ್ಥಿತಿಯನ್ನು ಹೊಂದಿರುವವನೇ, 'ಕೇಡಿಗ' ಅಥವಾ 'ಕೇಡಿ' ಎಂಬುದು ಅಭಿಪ್ರಾಯವಷ್ಟೆ. ಶ್ರೀಧರ್ ನಾಯಕ್ ರವರ ಪ್ರಶ್ನೆ: ಪ್ರಭೆ,ಪ್ರಭ,ಪ್ರಭಾ-ಇವುಗಳಲ್ಲಿ ಶುದ್ಧರೂಪ ಯಾವುದು? ನನ್ನ ಪ್ರತಿಕ್ರಿಯೆ: ಸಂಸ್ಕೃತ ವ್ಯಾಕರಣ ಕ್ರಮವನ್ನು ಅವಲೋಕಿಸಿದಾಗ, ಲಿಂಗ ರಚನೆಯ ನಿಯಮದನ್ಚಯ, ಸ್ತ್ರೀಲಿಂಗ ವಾಚಕ ಪದಗಳು ದೀರ್ಘಾಂತ್ಯವಾಗಿ ಬಳಕೆಯಾಗುವುದು ರೂಢಿ. ಉದಾಹರಣೆಗೆ ಗಂಗಾ, ತುಂಗಾ, ಲಕ್ಷ್ಮೀ, ಸರಸ್ವತೀ, ಗೌರೀ ಹೀಗೆ ದೀರ್ಘಾಂತ್ಯವಾಗುತ್ತವೆ. ಕನ್ನಡಕ್ಕೆ ಬರುವ ಸಂದರ್ಭದಲ್ಲಿ ತತ್ಸಮವಾಗಿ ಯಥಾಸ್ವರೂಪದಲ್ಲಿ, ಇಲ್ಲವೇ, ತದ್ಭವವಾಗಿ, ಸ್ವರೂಪ ಬದಲಾವಣೆಯೊಂದಿಗೆ ಬರುವುದು ರೂಢಿ. ತತ್ಸಮ-ತದ್ಭವ ರಚನೆಯ ನಿಯಮದನ್ವಯ 'ಸ್ತ್ರೀಲಿಂಗ' ಪದಗಳು ಕನ್ನಡಕ್ಕೆ ಬರುವಾಗ ಪದಾಂತ್ಯ ದೀರ್ಘವನ್ನು ಕಳೆದುಕೊಳ್ಳುತ್ತವೆ. ಈ ಕ್ರಿಯೆಯನ್ನು 'ಹ್ರಸ್ವೀಕರಣ' ಎನ್ನುವರು. ಇದೇ ಕ್ರಮದಲ್ಲಿಯೇ ಸಾಂಸ್ಕ್ರತಿಕ ಮೂಲ ಸ್ತ್ರೀಲಿಂಗ ಪದ 'ಪ್ರಭಾ', ಕನ್ನಡಕ್ಕೆ ಬರುವ ಸಂದರ್ಭದಲ್ಲಿ ಪದಾಂತ್ಯ ಹ್ರಸ್ವೀಕರಣಕ್ಕೆ ಒಳಗಾಗಿ, 'ಪ್ರಭ' ಆಗಿರುತ್ತದೆ. ಸ್ವರೂಪ ಬದಲಾದರೂ ಅರ್ಥದಲ್ಲಿ ಯಾವುದೇ ವ್ಯತ್ಯಾಸವಾಗದ ಕಾರಣ, ಎರಡೂ ರೂಪದಲ್ಲಿಯೂ ಬಳಸಬಹುದಾಗಿದೆ ಎಂಬುದು ಈ ಹೊತ್ತಿನ ಅಭಿಪ್ರಾಯ. ಅರ್ಥ ವ್ಯತ್ಯಾಸವಾಗುವ ಸಂದರ್ಭದಲ್ಲಿ ಖಂಡಿತಾ ನಿಷಿದ್ಧ. ಏಕೆಂದರೆ, ಹ್ರಸ್ವೀಕರಣ ನಾವು ಮಾಡಿಕೊಂಡ ಬದಲಾವಣೆ. ಮೂಲ ಸ್ವರೂಪವನ್ನು ಬದಲಾಯಿಸಲು ಅದು ನಮ್ಮ ಭಾಷೆಯ ಪದವಲ್ಲ. ಸಂಸ್ಕೃತದ ಮೂಲ ಸ್ವರೂಪವನ್ನು ಬದಲಿಸಲು ನಾವು ಸ್ವತಂತ್ರ್ಯರಲ್ಲ. ಧನ್ಯವಾದಗಳು. ರೇವು ರವಿಯವರ ಪ್ರಶ್ನೆ: 'ಆದರೆ' ಅನ್ನೋ ಪದದ ಅರ್ಥ? ನನ್ನ ಪ್ರತಿಕ್ರಿಯೆ: 'ಆದರೆ' ಕನ್ನಡ ಭಾಷಿಕ ವ್ಯಾಕರಣದ ನೆಲೆಯಲ್ಲಿ ಇದೊಂದು 'ಅವ್ಯಯ'. 'ಅವ್ಯಯ' ಗಳೆಂದರೆ, ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನೆ, ಪ್ರತ್ಯಯಗಳಿಂದ ರೂಪಬೇಧವನ್ನು ಹೊಂದದೆ, ಏಕರೂಪವಾಗಿರುವ ಶಬ್ಧಗಳು. ಸಂಸ್ಕೃತದಲ್ಲಿ ಶಬ್ಧಗಳನ್ನು ನಾಮಪದ, ಕ್ರಿಯಾಪದ, ಅವ್ಯಯಗಳೆಂದು ಮೂರುವರ್ಗಗಳಲ್ಲಿ ವಿಭಾಗಿಸಲಾಗುತ್ತದೆ. ಕನ್ನಡದಲ್ಲಿಯೂ ಈ ವರ್ಗೀಕರಣ ಉಂಟೆಬುದು ಹಲವರ ಆಂಬೋಣ. ಸಹಜವಾಗಿ 'ಅವ್ಯಯಗಳು' ಯಾವ ಭಾಷೆಯಲ್ಲಿ ಬಳಕೆಯಾಗುತ್ತದೆಯೋ, ಅದೇ ಭಾಷೆಯ ಸ್ವಂತ ಪದಗಳಾಗಿರುತ್ತವೆ. ಇಂತಹ ಅವ್ಯಯ ಪದಗಳು ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿದ್ದರೆ, ಅವು ಕನ್ನಡ ಭಾಷೆಯ ಪದಗಳೇ ಆಗಿರುತ್ತವೆ. 'ಆದರೆ', 'ಚೆನ್ನಾಗಿ', 'ನೆಟ್ಟನೆ', 'ಮೆಲ್ಲಗೆ', 'ಕೂಡಲೆ', 'ಬೇಕು', 'ಬೇಡ' ಇತ್ಯಾದಿ ಪದಗಳು ಅವ್ಯಯಕ್ಕೆ ಉದಾಹರಣೆಗಳು. ಇಂತಹ ಪದಗಳಿಗೆ ಯಾವುದೇ ರೀತಿಯ ವಿಭಕ್ತಿ, ಆಖ್ಯಾತ ಇತ್ಯಾದಿ ಪ್ರತ್ಯಯಗಳನ್ನು ಹತ್ತಿಸಲಾಗದು. ಅಂತೆಯೇ ಲಿಂಗ, ವಚನಗಳ ನೆಲೆಯಲ್ಲಿ ಇವುಗಳ ಸ್ವರೂಪವೂ ಬದಲಾಗದು. 'ಆದರೆ', ಸಂಯೋಜಕಾವ್ಯಯವಾಗಿದ್ದು, ಎರಡು ವಾಕ್ಯಗಳನ್ನು ಸಂಯೋಜಿಸುವ ಸಂದರ್ಭದಲ್ಲಿ, ಬಳಸುವ 'ಅವ್ಯಯ' ಪದವಾಗಿದೆ. ಕಾರಣ ನೀಡುವ ಅರ್ಥದಲ್ಲಿ, ಪರ್ಯಾಯ ಆಲೋಚನೆಯ ಅರ್ಥದಲ್ಲಿ, ಒಂದು ವಾಕ್ಯಕ್ಕೆ ಅರ್ಥ ವಿವರಣೆ ನೀಡುವ ಸಂದರ್ಭದಲ್ಲಿ ಈ ಪದವು ಬಳಕೆಯಾಗುತ್ತದೆ. ಉದಾಹರಣೆಗೆ, ನಾನು ಬಿಜಾಪುರಕ್ಕೆ ಹೋಗಿದ್ದೆ, ಆದರೆ ಗೋಲಗುಮ್ಮಟವನ್ನು ನೋಡಲು ಮರೆತೆ. ಇಲ್ಲಿ ಕಾರಣಿಕ ಸಂಬಂಧವನ್ನು ಸೂಚಿಸುವ ಸಂಬಂಧ ಸೂಚಕಾವ್ಯಯವಾಗಿ 'ಆದರೆ' ಬಳಕೆಯಾಗಿರುವುದನ್ನು ಕಾಣಬಹುದು. ಬಿಜಾಪುರಕ್ಕೆ ಹೋಗಿದ್ದರೂ, ಗೋಲಗುಮ್ಮಟವನ್ನು ನೋಡಲಿಲ್ಲ ಏಕೆಂದರೆ, ಇಲ್ಲಿ ಮರೆವೇ ಅದಕ್ಕೆ ಕಾರಣವಾಗಿದೆ. ಈ ಕಾರಣದ ವಿವರಣೆಯನ್ನು ಜೋಡಿಸಲು 'ಆದರೆ' ಬಳಕೆಯಾಗಿರುವುದನ್ನು ಕಾಣಬಹುದು. ರೇವು ರವಿಯವರ ಪ್ರಶ್ನೆ: ಕೆಲಸಗಾರ, ಕಾರ್ಮಿಕ, ಕೂಲಿಗಾರ, ಉದ್ಯೋಗಿ ,ಉದ್ಯಮಿ ಇವುಗಳ ಅರ್ಥ ಹಾಗೂ,ವ್ಯತ್ಯಾಸಗಳನ್ನು ಉದಾಹರಣೆ ಸಹಿತ ತಿಳಿಸಿರಿ. ನನ್ನ ಪ್ರತಿಕ್ರಿಯೆ: ಪದಗಳ ಅರ್ಥ ಹಾಗೂ ವ್ಯತ್ಯಾಸಗಳು ಪದ ಬಳಕೆಯ ಸನ್ನಿವೇಶವನ್ನು ಆಧರಿಸಿ, ನಿರ್ಧಾರಿತ ವಾಗುತ್ತವೆ. ಇಲ್ಲಿ 'ಕಾರ್ಮಿಕ' ಪದದ ಹಿನ್ನೆಲೆಯನ್ನು ಗಮನಿಸುವುದಾದಲ್ಲಿ, 'ಕರ್ಮ' ಅರ್ಥಾತ್ 'ಕೆಲಸ' ವನ್ನು ಮಾಡುವವನು ಯಾರೋ ಅವನು 'ಕಾರ್ಮಿಕ' ಸಂಸ್ಕೃತ ನೆಲೆಯಿಂದ ಒಡಮೂಡಿರುವ ಈ ಪದವು ಸಹಜವಾಗಿ ಶಿಷ್ಟ ನೆಲೆಯಲ್ಲಿ ಬಳಕೆಯಾಗಲು ರೂಢಿಯಾಗಿರಬಹುದು. ಹಾಗಾಗೀ, ಈ ಪದವನ್ನು ಶಿಷ್ಟ ನೆಲೆಯಲ್ಲಿ ಬಳಸುತ್ತಾ ಬಂದಿದ್ದೇವೆ. ಇದು 'ಕೆಲಸಗಾರ'ನಿಗೆ ಸಮಾನಾರ್ಥವನ್ನು ಹೊಂದಿದ್ದರೂ, ಅರ್ಥ ಸಂಕುಚನ ಹಾಗೂ ಶಬ್ದ ಸಾದೃಶ್ಯದ ಕಾರಣ, ಕಾಲ ಕ್ರಮೇಣ 'ಕೈಗಾರಿಕೆ'ಯ ಕ್ಷೇತ್ರಕ್ಕೆ ಧಾವಿಸಿ, ಕಾರ್ಮಿಕನಿಗೂ ಕಾರಖಾನೆಗೂ ಸಂಬಂಧ ಪಡೆದುಕೊಂಡು, ಕಾರ್ಮಿಕ ನೆಂದರೆ, 'ಕಾರಖಾನೆಯಲ್ಲಿ ಕೆಲಸಮಾಡುವವನು' ಎಂಬ ಸಂಕುಚಿತಾರ್ಥವನ್ನು ಪಡೆದಿರಬಹುದು. ಇನ್ನು 'ಕೆಲಗಾರ' ಪದವು ಕನ್ನಡದ ಪದವೇ ಆಗಿದ್ದು, ಸರಳವಾಗಿ 'ಕೆಲಸ ಮಾಡುವವನು' ಎಂಬ ಅರ್ಥ ಪಡೆದಿದೆ. ಅಂತೆಯೇ, ಈ ಪದವು ತದ್ಧಿತಾಂತ ನಾಮಪದವಾಗಿದ್ದು, 'ಗಾರ' ಎಂಬ 'ತದ್ಧಿತ' ಪ್ರತ್ಯಯ 'ಕೆಲಸ' ಎಂಬ ನಾಮಪ್ರಕೃತಿಯ ಮೇಲೆ ಹತ್ತಿ ರೂಪುಗೊಂಡಿರುವ ಪದವಾಗಿದೆ. ಈ ಪದದ ಮತ್ತೊಂದು ವಿಶೇಷವೆಂದರೆ, 'ಕೆಲಸಗಾರ' ಎಂಬ ಪದವು ವಿಶೇಷಣವಾಗಿ ಬಳಕೆಗೊಳ್ಳುವುದು. "ಆತ ಕೆಲಸಗಾರ" ಅಂದರೆ, 'ಉತ್ತಮವಾಗಿ ಕೆಲಸ ಮಾಡುವವನು' ಎಂಬ ಧ್ವನ್ಯರ್ಥವನ್ನು ಹೊಂದಿರುವುದು. ಅಂತೆಯೇ, 'ಕೂಲಿಗಾರ' ಇದೂ ಕೂಡಾ ತದ್ಧಿತಾಂತ ನಾಮಪದವಾಗಿದ್ದು, 'ತದ್ಧಿತ' ಪ್ರತ್ಯಯವಾದ 'ಗಾರ'ವು 'ಕೂಲಿ' ನಾಮ ಪ್ರಕೃತಿಯ ಮೇಲೆ ಹತ್ತಿ, ರೂಪುಗೊಂಡ ಪದವಾಗಿದೆ, 'ಕೂಲಿ' ಎಂಬ ಪದವು 'ಅರ್ಥಶಾಸ್ತ್ರ' ವಿಷಯದ ನೆಲೆಯಲ್ಲಿ ಅರ್ಥ ಪಡೆದುಕೊಳ್ಳುವ ಪದವಾಗಿದ್ದು, 'ಕೂಲಿ' ಕೆಲಸ ಮಾಡಿದುದಕ್ಕೆ, ಪಡೆಯುವ ಪ್ರತಿಫಲವಾಗಿದೆ. ಅಂದರೆ, 'ಕೂಲಿಗಾರ'ನನ್ನು ಪ್ರತಿಫಲಾಪೇಕ್ಷೆಯುಳ್ಳ ಕೆಲಸಗಾರನೆಂದು ಅರ್ಥೈಸಬಹುದು. ಆದರೆ, 'ಕೆಲಸಗಾರ'ನನ್ನು ಪ್ರತಿಫಲಾಪೇಕ್ಷೆ ಇಟ್ಟುಕೊಂಡೋ ಅಥವಾ ಇಲ್ಲದೆಯೋ ಕೆಲಸ ಮಾಡುವವನೆಂದು ಅರ್ಥೈಸಲಾಗದು. ಆತ 'ಕೆಲಸಗಾರ'ನಷ್ಟೆ. ಬೇಕಾದಲ್ಲಿ ಈ ಹಿಂದೆ ತಿಳಿಸಿದಂತೆ, ಸಾಂದರ್ಭಿಕವಾಗಿ ವಿಶೇಷಣವಾಗಿ ಈ ಪದವನ್ನು ಬಳಸಬಹುದಾಗಿದೆ. ಇನ್ನು'ಉದ್ಯೋಗ', ಈ ಪದವೂ ಕೂಡಾ ಸಂಸ್ಕೃತ ಭಾಷೆಯ ನೆಲೆಯಿಂದ ಬಂದಿರುವ ಪದವಾಗಿದ್ದು, ಇದು ನಾಮಪದದ ಅರ್ಥದಲ್ಲಿ, 'ಹೊಂದಿಕೆ', 'ಸೇರ್ಪಡೆ' ಅರ್ಥವನ್ನು ಪಡೆಯುತ್ತದೆ. ಅಂದರೆ, 'ಉದ್ಯೋಗ' ಎಂದರೆ, 'ಕೆಲಸಕ್ಕೆ ಹೊಂದಿಕೊಂಡ ಸ್ಥಿತಿ' (ನಿರ್ಧಿಷ್ಟ ಉದ್ಯಮಕ್ಕೆ ಹೊಂದಿಕೊಂಡ ಸ್ಥಿತಿ)ಯನ್ನು ಸೂಚಿಸುತ್ತದೆ. ಹಾಗಾಗಿ ಈ ಪದವು 'ಭಾವನಾಮ'ದ ಅರ್ಧವನ್ನು ಪಡೆಯುತ್ತದೆ. 'ಉದ್ಯೋಗ'ಕ್ಕೆ ಹೊಂದಿಕೊಂಡಂತೆ, ಕೆಲಸಗಾರನನ್ನು 'ಉದ್ಯೋಗಿ' ಎಂದು ಕರೆಯಲಾಗಿದೆ. ಕನ್ನಡದ ತತ್ಸಮ-ತತ್ಭವ ರೂಪುಗೊಳ್ಳುವ ನೆಲೆಯಲ್ಲಿ, ರೂಪುಗೊಂಡ ಪದ 'ಉಜ್ಜುಗ'ದ ಸ್ಮರಣೆ ಈ ಸಂದರ್ಭದಲ್ಲಿ 'ಉದ್ಯೋಗ'ಕ್ಕಿರುವ ಮತ್ತೊಂದು ಪದವನ್ನು ನೆನಪಿಸುವಲ್ಲಿ ಸಹಕಾರಿಯಾಗುತ್ತದೆಂದು ಪರಿಭಾವಿಸುತ್ತೇನೆ. ಅಂತಿಮವಾಗಿ, 'ಉದ್ಯಮಿ' ಪದದ ಅರ್ಥ ವಿವರಣೆಯನ್ನು ನೀಡುವುದಕ್ಕೂ ಮುನ್ನ, ಇಲ್ಲಿ 'ಉದ್ಯಮ' ಪದೆದ ಅರ್ಥ ಬಹಳ ಪ್ರಮುಖವಾಗಿದೆ. 'ಉದ್ಯಮ' ಎಂದರೆ, ಕೈಗಾರಿಕೆ ಎಂಬ ಅರ್ಥವನ್ನು ನೀಡುತ್ತದೆ. 'ಉದ್ಯಮ'ವನ್ನು ರೂಪಿಸಿದವನು, ಯಾವನೋ ಅವನು/ಅವಳು 'ಉದ್ಯಮಿ. ಹಾಗಾಗೀ 'ಉದ್ಯಮಿ' ಪದವು ಉದ್ಯಮದ ಮಾಲೀಕತ್ವವನ್ನು ಸೂಚಿಸುತ್ತದೆ. ಹಾಗೆಯೇ 'ಲಾಭ'ದ ಪ್ರತಿಫಲಾಪೇಕ್ಷೆಯುಳ್ಳವನೆಂಬುದೂ ಅರ್ಥೈಸುವಿಕೆಗೆ ಒಳಗಾಗುತ್ತದೆ (ಕೂಲಿಗಾರ ಪದದಂತೆ). ಸಮಾಜೋ - ಅರ್ಥ ಶಾಸ್ತ್ರೀಯ ನೆಲೆಗಟ್ಟಿನಲ್ಲಿ, ಈ ಪದಗಳನ್ನು ಅರ್ಥೈಸಿಕೊಳ್ಳುವುದಾದರೆ, ಕೂಲಿ, ಉದ್ಯಮಿ ಎರಡೂ ಪದಗಳು ವ್ಯಕ್ತಿಯ ಸಾಮಜಿಕ ಸ್ಥಾನಮಾನವನ್ನು ಧ್ವನಿಸುತ್ತವೆ (ಕೂಲಿ - ಸಾಮಾಜಿಕವಾಗಿ ಕೆಳಸ್ತರದ ಕೆಲಸಗಾರ,ಉದ್ಯಮಿ -ಸಾಮಾಜಿಕವಾಗಿ ಮೇಲುಸ್ತರದ ಕೆಲಸಗಾರ) - ಉದ್ಯಮಿ ಕೆಲಸ ನೀಡುವವನಾದರೆ, ಕಾರ್ಮಿಕ ಉದ್ಯಮದಲ್ಲಿ ಕೆಲಸ ಮಾಡಿ, ಕೂಲಿ ಪಡೆಯುವ 'ಕೂಲಿಗಾರ' ನಾಗಬಹುದು. ಹೀಗೆ, ಅರ್ಥ ನೀಡುವ ಸನ್ನಿವೇಶ ಆಧರಿಸಿ, ಅರ್ಥ ವ್ಯತ್ಯಾಸ ಆಗುತ್ತದೆಯಾಗಿ, ಅರ್ಥ-ವ್ಯತ್ಯಾಸಗಳನ್ನು ನೀಡುವಾಗ ಅರ್ಥೈಸುವ ಸನ್ನಿವೇಶ - ಸಂದರ್ಭಗಳನ್ನು ಗಮನಿಸುವುದು ಸೂಕ್ತವೆನ್ನುವುದು ನನ್ನ ಅನಿಸಿಕೆಯಷ್ಟೆ. ನನ್ನ ಅರಿವೆಗೆ ಅನುಗುಣವಾಗಿ ಈ ಪದಗಳ ಅರ್ಥ ನೀಡಲು ಪ್ರಯತ್ನಿಸಿದ್ದೇನೆ. ಪದ ನಿಷ್ಪತ್ತಿ ಕುರಿತ, ಸಂಶೋಧನೆಗಳು ಈ ಸಾಮಾನ್ಯ ಚಿಂತನೆಯನ್ನು ಮೀರಿ, ಸ್ಪಷ್ಟ ನಿರ್ದಿಷ್ಟ ಅರ್ಥವನ್ನು ನೀಡಬಲ್ಲವು. ಧನ್ಯವಾದಗಳು.
ಪದಾರ್ಥ ಚಿಂತಾಮಣಿಗೆ ನನ್ನ ಪ್ರತಿಕ್ರಿಯೆ ರೇವು ರವಿಯವರ ಪ್ರಶ್ನೆ: ಸಂಘ ಸಂಸ್ಥೆ, ತಂಡ, ಗುಂಪು ಈ ಪದಗಳ ನಡುವಣ ವ್ಯತ್ಯಾಸವೇನು? ನನ್ನ ಪ್ರತಿಕ್ರಿಯೆ 'ಭಾಷೆ'ಯ ಮೂಲ ನಿಗೂಢವಾದ ಸಂಗತಿಯಾಗಿದ್ದು, ಅದರ ವಿಕಾಸ ಮಾತ್ರ ನಮಗೆ ಅನುಭವವೇದ್ಯವಾಗುವ ಸಂಗತಿಯಾಗಿದೆ. ಆದರೆ, ಬದಲಾವಣೆ ನಮ್ಮ ಅನುಭವಕ್ಕೆ ಬರುವ ಸಂಗತಿಯಾಗಿದ್ದರೂ, ಬದಲಾವಣೆ ಹೊಂದಿದ ಬಗೆಯನ್ನು ಕೆಲವೊಮ್ಮ ತಾರ್ಕಿಕ ಊಹೆಯ (ಪ್ರಾಕ್ಕಲ್ಪನೆ) ನೆಲೆಯಲ್ಲಿ ಗುರುತಿಸಬೇಕಾಗುತ್ತದೆ. ಅಂತಹುದೇ ಪ್ರಯತ್ನವನ್ನು ಈ ಸಂಘ, ಸಂಸ್ಥೆ, ತಂಡ, ಗುಂಪು ಈ ಪದಗಳ ಮೂಲ ಗುರುತಿಸಲು ಹಾಗೂ ಅವುಗಳ ನಡುವಿನ ವ್ಯತ್ಯಾಸ ತಿಳಿಯಲು ಮಾಡಬಹುದಷ್ಟೆ. 'ಸಂಘ', ಪ್ರಾಕೃತ ಮೂಲದ ಪದವಾಗಿರಬಹುದು. ಏಕೆಂದರೆ, 'ಸಂಘ' ಪದದ ಬಳಕೆ ಹೆಚ್ಚಾಗಿ ಬಳಕೆಯಲ್ಲಿ ಬರುವುದು 'ಬೌದ್ಧ ಸಾಹಿತ್ಯ'‍ದ ಜೊತೆ ಜೊತೆಯಲ್ಲಿಯೇ ಆಗಿದೆ. "ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ" , ಇದು ಇದಕ್ಕೆ ಪೂರಕವಾಗಿ ಬಳಕೆಯಾಗುವ ಪದವಾದ 'ಸಂಘಾರಾಮ'ವನ್ನು ಇಲ್ಲಿ ಉಲ್ಲೇಖಿಸಬಹುದು. ಇದರೊಟ್ಟಿಗೆ 'ಸಂಘಂ ಸಾಹಿತ್ಯ'ವನ್ನೂ ನೆನೆಯಬಹುದು. ನನ್ನ ಜ್ಞಾನಕ್ಕೆ ನಿಲುಕಿದ ಮಟ್ಟಿಗೆ 'ಸಂಘಂ' ಪದವನ್ನು ಸಂಸ್ಕೃತ ಮೂಲದಲ್ಲಿ ಗುರುತಿಸಲಾಗದು. ಆದರೆ, ಸಂಸ್ಕೃತದ ಅಪಭ್ರಂಶ ರೂಪವಾದ 'ಹಿಂದಿ' ಭಾಷೆಯಲ್ಲಿ, ಈ ಪದದ ಬಳಕೆಯನ್ನು ಕಾಣುತ್ತೇವೆ. ಬಹುಶಃ ಈ ಸಂಕ್ರಮಣ ಸಮಯದಲ್ಲಿಯೇ ಸಂಸ್ಕೃತದ ಅಪಭ್ರಂಶ ರೂಪಗಳು ಚಿಗುರೊಡೆದಿರಬಹುದು. ಇಲ್ಲಿ 'ಸಂಘ' ಎಂದರೆ, 'ಸಮೂದಾಯ', 'ದಳ','ಸಮಾಜ'(ಇಲ್ಲಿ ಬೌದ್ಧ ಸಮಾಜ) ಎಂಬ ಅರ್ಥವನ್ನು ಪಡೆದುಕೊಂಡಿತ್ತು. ಆದರೆ, ಕಾಲಾ ನಂತರದಲ್ಲಿ 'ಸಂಘ', ಸಮೂದಾಯವೆಂಬ ವಿಶಾಲ ಅರ್ಥದಿಂದ, ಅರ್ಥ ಸಂಕುಚನ ಹೊಂದಿ, ಒಂದು ಸಣ್ಣ ಗುಂಪಿಗೆ ಬಳಸುವುದು ರೂಢಿಯಾಯಿತು.'ಸಂಘ'ವನ್ನು, 'ಸಮೂದಾಯ'ದ ಒಳಗೇ ಇರುವ; ಸಮಾನ ಧ್ಯೇಯಗಳನ್ನು ಹೊಂದಿರುವ ಒಂದು ಚಿಕ್ಕ ಗುಂಪು ಎಂದು ಅರ್ಥೈಸಬಹುದು. ಉದಾಹರಣೆಗೆ, ಸ್ತ್ರೀ ಶಕ್ತಿ ಸಂಘಗಳು, ಯುವಕ ಸಂಘಗಳು ಇತ್ಯಾದಿ. ಆದರೆ, ವಾಸ್ತವವಾಗಿ ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ'ದ ಮೂಲ ರೂಪವೇ ಬೇರೆ. ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ' ಪದದಲ್ಲಿ, ಮಹಾಪ್ರಾಣಾಕ್ಷರ, 'ಘ' ಮೂಲದಲ್ಲಿ ಇರುವುದಿಲ್ಲ. ಬದಲಿಗೆ, 'ಸಂಗ' ಈ ರೀತಿಯಲ್ಲಿ ಇರುತ್ತದೆ. ಇಲ್ಲಿ 'ಗ' ಅಲ್ಪಪ್ರಾಣ' ವಾಗಿರುವುದನ್ನು ಗಮನಿಸಬಹುದು. ಇಲ್ಲಿ 'ಸಂಗ' ಎಂದರೆ, 'ಸೇರುವುದು' ಎಂಬ ಅರ್ಥವನ್ನು ಪಡೆದಿದೆ. ಯಾವುದಾದರೂ ಏಕೋದ್ದೇಶದಿಂದ 'ಸಮೂದಾಯ'ದ ಮಂದಿ ಒಂದೆಡೆ ಸೇರುತ್ತಿದ್ದಿರಬಹುದು. ಆದರೆ, ಅದೇ ಸಂದರ್ಭದಲ್ಲಿ ಒದಗಿ ಬಂದ, 'ಸಂಘ' ಪದವು, 'ಸಂಗ' ಪದವನ್ನು ಅತಿಕ್ರಮಿಸಿರಬಹುದು. ಇಲ್ಲಿ 'ಸೇರುವಿಕೆ'ಗೂ 'ಸಂಘಕ್ಕೂ ಅರ್ಥ ಸಾದೃಶ್ಯ ಒದಗಿ, ಬಹುಶಃ 'ಸಂಘ' ವು ಔಪಚಾರಿಕ ನೆಲೆಯುಳ್ಳ ಪದವಾಗಿ ಪರಿವರ್ತಿತವಾಗಿರಬಹುದು. ಇದರೊಟ್ಟಿಗೆ, 'ಸಂಗ' ಪದ ಕ್ರಮೇಣ ಹೀನಾರ್ಥ ಪಡೆದು, 'ನಪುಂಸಕ' ಎಂದು ಬಳಕೆಯಾಗಿದ್ದರಿಂದ, 'ಸಂಘ' ಪದವೇ ಔಪಚಾರಿಕ ನೆಲೆಯಲ್ಲಿ ಉಳಿದುಕೊಂಡಿರಬಹುದು. 'ಸಂಘ' ಪದ ಪ್ರಸ್ತುತ 'ಏಕೋದ್ದೇಶ ಹೊಂದಿರುವ ಚಿಕ್ಕ ಸಮೂದಾಯದ ಒಂದು ಗುಂಪಾಗಿರುತ್ತದೆ. ಇದೇ ಮುಂದೆ, 'ಸಂಘಟನೆ'ಯಾಗಿ ಪರಿವರ್ತಿತವಾಗಿರಬಹುದು. ಇಲ್ಲಿ 'ಸಂಘಟನೆ' 'ಏಕೋದ್ದೇಶ' ಉಳ್ಳವರನ್ನು ಒಂದೆಡೆಗೆ 'ಘಟಿಸು'ವುದಾಗಿದೆ. ಇದಿಷ್ಟೂ 'ಸಂಘ' ಪದದ ವಿಕಸನದ ವಿಶ್ಲೇಷಣೆಯಾದರೆ, ಇನ್ನು 'ಸಂಸ್ಥಾ' ಪದದ ವಿಶ್ಲೇಷಣೆಯನ್ನು ಹೀಗೆ ಗುರುತಿಸಬಹುದು. 'ಸಂಸ್ಥಾ' ಇದು ಪ್ರತಿಶತ ಸಂಸ್ಕೃತ ಪದವೇ ಆಗಿದೆ. 'ಸಂಸ್ಥಾ' ಸ್ತ್ರೀ ಲಿಂಗವಾಚಿ ನಾಮಪದವಾಗಿದ್ದು, 'ಸಂಘ', 'ಸಭೆ'ಗ, ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವ ಪದೆವೇ ಆಗಿದೆ. ಆದರೆ, ನಂತರ 'ಸಂಸ್ಥಾ' ಪದ 'ಸಂಘ'ದ ಕಾರ್ಯ ನಿರ್ವಹಿಸುವ ಆಡಳಿತಾತ್ಮಕ ನಿರ್ವಹಣಾ ವ್ಯವಸ್ಥೆಯಾಗಿ, ಅರ್ಥ ಬಳಕೆಗೆ ಬಂದಿರಬಹುದು. ಸಂಸ್ಕೃತದ 'ಸಂಸ್ಥಾ', ಕನ್ನಡಕ್ಕೆ ಬರುವ ಸಂದರ್ಭದಲ್ಲಿ, ದೀರ್ಘ 'ಆ' ಕಾರ ಕಳೆದುಕೊಂಡು, 'ಸಂಸ್ಥೆ' ಆಗಿರುವುದು ಭಾಷಾ ವ್ಯತ್ಯಾಸ ನಿಯಮರೀತ್ಯ ಸತ್ಯ. ಹಾಗಾಗೀ ಸಂಘಟನೆಯೊಂದರೆ, ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಅಧಿಕೃತ ಮಾಧ್ಯಮವೇ 'ಸಂಸ್ಥೆ'.'ಸಂಘ'ಗಳು 'ಸಂಸ್ಥ'ಯನ್ನು ಹೊಂದಿರಬೇಕೆಂಬ ನಿಯಮವೇನಿಲ್ಲ. 'ಸಂಘ'ಗಳು, ಉದ್ದೇಶ ಸಾಧನೆಗೆ 'ಸಂಸ್ಥೆ'ಗಳನ್ನು ಸಂಸ್ಥಾಪಿಸಿಕೊಳ್ಳಬಹುದು. ಉದಾಹರಣೆಗೆ, ವಿದ್ಯಾಸಂಸ್ಥೆಗಳು. 'ಸಂಸ್ಥೆ'ಗಳು ನಿರ್ದಿಷ್ಟ 'ಉದ್ದೇಶ' ಹಾಗೂ 'ಉದ್ಯೋಗ'ಕ್ಕೆ ಸಂಬಂಧಿಸಿರುತ್ತವೆ.ಇನ್ನು 'ತಂಡ' ಪದದ ವಿಶ್ಲೇಷಣೆಗೆ ಉಪಕ್ರಮಿಸೋಣ. 'ತಂಡ'' ಇದು ಪಕ್ಷವೆಂಬ ಅರ್ಥವನ್ನು ಕೊಡುತ್ತಿದ್ದು, 'ಅಭಿಪ್ರಾಯ ಭಿನ್ನತ'ಯ ನೆಲೆಗಟ್ಟಿನಲ್ಲಿ ರೂಪುಗೊಂಡ ಪದವಾಗಿದೆ. 'ಏಕಾಭಿಪ್ರಾಯ ಉಳ್ಳವರ ಗುಂಪು', ತಂಡವಾಗಿ, ಭಿನ್ನಾಭಿಪ್ರಾಯ ಉಳ್ಳವರಿಂದ ಬೇರೆಯಾಗಿ ನಿಲ್ಲುತ್ತಾರೆ. ಕಾಲ ಕ್ರಮೇಣ ಈ ಪದವು ಅರ್ಥ ಸಂಕುಚನಕ್ಕೆ ಒಳಗಾಗಿ, ಪರ-ವಿರೋಧದ ಗುಂಪಿನ ಸ್ಪರ್ಧೆಗಳಲ್ಲಿ, ನೆಲೆಕಂಡು, ಕ್ರೀಡೆ, ಸ್ಪರ್ಧೆ ಇತ್ಯಾದಿಗಳಲ್ಲಿ ಪರಸ್ಪರ ವಿರುದ್ಧ ತಂಡಗಳೆಂಬ, ಅರ್ಥ ಸಂಕುಚನಕ್ಕೆ ಒಳಗಾಗಿರಬಹುದು. ಅಂತೆಯೇ, 'ಗುಂಪು' ಪದದ ಮೂಲ ನೆಲೆಯ ವಿಶ್ಲೇಷಣೆ ಇಲ್ಲಿದೆ. ಇದು 'ಗುಂಫ಼ನಾ' ಎಂಬ ಸಂಸ್ಕೃತದ ಪದಮೂಲದಿಂದ ಬಂದಂತಹ ಪದವಾಗಿದ್ದು, 'ಗುಂಫ಼ನಾ' ಎಂದರೆ, 'ಕೂಡಿಸಿ ಪೋಣಿಸುವುದು' ಎಂಬರ್ಥವನ್ನು ಪಡೆದಿದೆ. ಈ ಪದದ ಅರ್ಥವೂ 'ಸೇರಿಸುವಿಕೆ'ಯ ಕ್ರಿಯೆಗೆ ಸಂಬಂಧಿಸಿದೆ. ಆದರೆ, 'ಗುಂಪು' ಅರ್ಥಾತ್ 'ಸೇರಿಸುವುದು' ಉದ್ದೇಶ ಪೂರ್ವಕವಾಗಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು!....... ಉದಾಹರಣೆಗೆ, 'ಆಟದ ಗುಂಪುಗಳು', ಕ್ರೀಡೆಯನ್ನಾಡುವ ಉದ್ದೇಶದಿಂದ ಸೇರುವ ಗುಂಪುಗಳು. ಕೆಲವೊಮ್ಮೆ ಮುನ್ನಾ ಉದ್ದೇಶ ರಹಿತವಾಗಿಯೂ 'ಗುಂಪು' ಸೇರಬಹುದು. ಉದಾಹರಣೆಗೆ, 'ಅಪಘಾತ' ಸಂಭವಿಸಿದಾಗ, ಸೇರುವ 'ಜನಜಂಗುಳಿ', ಈ ರೀತಿಯ ಗುಂಪು ಏಕೋದ್ದೇಶ ಇಟ್ಟುಕೊಂಡು, ವ್ಯವಸ್ಥಿತವಾಗಿ ರೂಪುಗೊಂಡಂತಹ ಗುಂಪುಗಳಲ್ಲ. ಸಂದರ್ಭ, ಸನ್ನಿವೇಶಗಳಿಂದ ಪ್ರೇರಿತವಾಗಿ ರೂಪುಗೊಳ್ಳುವ 'ತಾತ್ಕಾಲಿಕ ಗುಂಪುಗಳು'. ಹಾಗಾಗೀ 'ಗುಂಪು'ಗಳಿಗೆ, ಅಧಿಕೃತ 'ಸಂಸ್ಥಾ' ನೆಲೆಯಿರುವುದಿಲ್ಲ. 'ಸಂಘ'ಗಳು 'ಏಕೋದ್ದೇಶ'ವನ್ನು ಆಧರಿಸಿದ್ದರೆ, 'ಸಂಸ್ಥ'ಗಳು ಉದ್ದೇಶ ಸಾಧನೆಗೆ 'ಮಾಧ್ಯಮ' ಎನ್ನಬಹುದು. 'ತಂಡ'ವು 'ಏಕಾಭಿಪ್ರಾಯ'ವನ್ನು ಆಧರಿಸಿ ರೂಪುಗೊಳ್ಳುವ 'ಸಮೂಹ' ಎನಿಸಿದರೆ, 'ಗುಂಪು', 'ಆಸಕ್ತಿ', ಸನ್ನಿವೇಶ'ವನ್ನು ಆಧರಿಸಿದ 'ಸಮೂಹ'ಗಳಾಗಿವೆ ಎಂದು ವಿಶ್ಲೇಷಿಸಬಹುದು(ವಿಶೇಷ ಸೂಚನೆ: ಈ ತಿಳಿವು ನನ್ನ ಜ್ಞಾನಕ್ಕೆ ನಿಲುಕಿದಂತಹ ವಿಶ್ಲೇಷಣೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ).ಧನ್ಯವಾದಗಳು.
ಪದಾರ್ಥ ಚಿಂತಾಂಮಣಿಗೆ ನನ್ನ ಪ್ರತಿಕ್ರಿಯೆ ಕಾಸರಗೋಡು ಕನ್ನಡಿಗರವರ ಪ್ರಶ್ನೆ: ಶ್ರೇಷ್ಠ ನೃತ್ಯಕಲಾವಿದೆಯರನ್ನು ವರ್ಣಿಸುವಾಗ ''ನಾಟ್ಯ ಮಯೂರಿ' ಎನ್ನಲಾಗುತ್ತದೆ. ನೃತ್ಯಕಲಾವಿದೆ ಸ್ತ್ರೀಯಾದುದರಿಂದ ''ಮಯೂರಿ'" (ಹೆಣ್ಣು ನವಿಲು) ಎನ್ನುವುದು ಸರಿ. ಆದರೆ ಮಯೂರಿ (ಹೆಣ್ಣು ನವಿಲು) ಕುಣಿಯುವುದಿಲ್ಲ, ನಾಟ್ಯಕ್ಕೆ ಹೆಸರಾಗಿಯೂ ಇಲ್ಲ. ಸುಂದರವಾದ ಗರಿಗಳನ್ನು ಬಿಚ್ಚಿ ಸೊಗಸಾಗಿ ಕುಣಿಯುವುದು "ಮಯೂರ" (ಗಂಡು ನವಿಲು). ಆದುದರಿಂದ "ಮಯೂರಿ" ಗೆ ಹೋಲಿಸುವುದು ನೃತ್ಯಕಲಾವಿದೆಗೆ ಮಾಡುವ ಅವಮಾನವಲ್ಲವೆ? ಹಾಗೆಂದು "ನಾಟ್ಯಮಯೂರ" ಎಂದು ಕರೆದರೆ ಸ್ತ್ರೀಯನ್ನು ಪುರುಷನೆಂದು ಬಿಂಬಿಸಿದಂತಾಗುವುದೆ? ಈ ಗೊಂದಲವನ್ನು ಹೇಗೆ ಪರಿಹರಿಸಬಹುದು? ಅಥವಾ "ನವಿಲು" ಎಂಬ ಪದದಂತೆ "ಮಯೂರ" ವೂ ಹೆಣ್ಣು-ಗಂಡು ಎರಡು ಲಿಂಗಗಳಿಗೂ ಅನ್ವಯಿಸಬಹುದಾದ ಪದವೆ? ಕೆಲವರು ಕವನ ಬರೆಯುವ ಸ್ತ್ರೀಯನ್ನು ಕವಯತ್ರಿ/ ಕವಯಿತ್ರಿ ಎನ್ನದೇ ಕೇವಲ "ಕವಿ" (Poet ಎನ್ನುವಂತೆ) ಎಂದು ಕರೆಯುತ್ತಾರೆ. ನನ್ನ ಪ್ರತಿಕ್ರಿಯೆ: 'ಮಯೂರ' ಅಥವಾ 'ಮಯೂರಕ್'' ಸಂಸ್ಕೃತದಲ್ಲಿ ನವಿಲಿಗೆ ಬಳಸುವ ಪದವಾಗಿದೆ. ಇಲ್ಲಿ ಈ ಪದವು ಸ್ಪಷ್ಟವಾಗಿ 'ಪುಲ್ಲಿಂಗ' ಸೂಚಕವಾಗಿಯೇ ಬಳಕೆಯಾಗುತ್ತದೆ. ಏಕೆಂದರೆ, ಸಂಸ್ಕೃತವು ಪರಂಪರೆ ಹೊಂದಿರುವ ಭಾಷೆಯಾಗಿದ್ದು, ಭಾಷಾ ಬಳಕೆಯು ಪರಂಪರೆಗಳ ನೆಲೆಯಲ್ಲಿ ವಿಕಸಿಸುತ್ತಾ ವ್ಯವಸ್ಥಿತತೆಯನ್ನು ಪಡೆದಿದೆ. ಹಾಗಾಗೀ ಅದರ ಬಳಕೆಯ ಮೂಲವನ್ನು ಗಮನಿಸಿದಾಗ, ಅದರಲ್ಲಿ ಪದ ಬಳಕೆಗೂ ಸಂದರ್ಭಕ್ಕೂ, ಸಂಗತಿಗೂ ಸಂಬಂಧವಿರುತ್ತದೆ. ಆದರೆ, ಭಾಷೆ ಬದಲಾಗುವ ವಸ್ತು. ಭಾಷಾ ಬಳಕೆ ಸಂದರ್ಭ ಸನ್ನಿವೇಶಗಳನ್ನು ಅನುಸರಿಸಿ ತನ್ನ ಸ್ವರೂಪ ಬದಲಾಯಿಸಿಕೊಳ್ಳುವುದು ನಿಹಿತವಾದ ಸಂಗತಿಯಾಗಿದೆ.ನಾಟ್ಯಕಲೆಯ ಪೂರ್ವೇತಿಹಾಸವನ್ನು ಅವಲೋಕಿಸಿದಾಗ, 'ನಟರಾಜ' ಈ ಕಲೆಯ ಅಧಿಪತಿಯಾಗಿರುವುದನ್ನು ಕಾಣಬಹುದು. ಲಾಲಿತ್ಯ ಹೊಂದಿದ ಈ ಕಲೆಯನ್ನು ಸಾಮೂಹಿಕವಾಗಿ ಸ್ತ್ರೀಯರಿಗೆ ಪ್ರದರ್ಶಿಸಲು ಅವಕಾಶ ಲಭ್ಯವಾಗದ ಸಮಯವೂ ಕೂಡಾ ಇದ್ದಿರಲು ಸಾಧ್ಯ. ಆದರೆ, ಕಾಲಾ ನಂತರದಲ್ಲಿ ಸ್ತ್ರೀಯರಿಗೆ ಈ ಕಲೆಯ ಪ್ರದರ್ಶನಕ್ಕೆ ಅವಕಾಶ ಲಭ್ಯವಾದದಂದಿನಿಂದ, ಸ್ತ್ರೀಲಿಂಗ ವಾಚಕ ಪದದ ಬಳಕೆಯ ಅವಶ್ಯಕತೆ ಪ್ರಾದುರ್ಭವಿತವಾಗಿರಬಹುದು. ಆಗ ಸ್ತ್ರೀಲಿಂಗವಾಚಕವಾಗಿ, ಲಿಂಗ ರಚನೆಯಾಗುವ ಕ್ರಮವನ್ನು ಅನುಸರಿಸಿ, 'ಮಯೂರೀ' ಪದ ಸೃಷ್ಟಿಯಾಗಿರಬಹುದು (ಲಿಂಗ ರಚನೆಯ ನಿಯಮ: 'ಅ' ಕಾರಾಂತ್ಯ ಪದಗಳು, 'ಈ' ಕಾರಾಂತ್ಯವಾಗಿ ಸ್ತ್ರೀಲಿಂಗವಾಗುವುದು ಲಿಂಗ ಬದಲಾವಣೆಯ ಕ್ರಮ) 'ಮಯೂರ'ದ ನಾಟ್ಯಕ್ಕೂ ಸ್ತ್ರೀ ನಾಟ್ಯಕ್ಕೂ ಪದಗಳ ಅರ್ಥ ಹಾಗೂ ದೃಶ್ಯ ಸಾದೃಶ್ಯತೆ ಹೆಚ್ಚಾದ ಕಾರಣ, ಕಾಲಾಂತರದಲ್ಲಿ, 'ಮಯೂರೀ' ಪದವು ರೂಪಕವಾಗಿ ಬಳಕೆಯಾಗಲು ಪ್ರಚುರಗೊಂಡಿರುವ ಸಾಧ್ಯತೆ ಇದೆ. 'ಸ್ತ್ರೀಲಿಂಗ', 'ಪುಲ್ಲಿಂಗ' ಇತ್ಯಾದಿ ವ್ಯಾಕರಣ ನಿಯಮಗಳು ಭಾಷೆಗೆ ಹಾಕಿದ ಚೌಕಟ್ಟೇ ಹೊರತು, 'ಕಾವ್ಯ'ಕ್ಕೆ ಹಾಕಿದ ಚೌಕಟ್ಟಲ್ಲ. 'ಕಾವ್ಯ'ಕ್ಕೆ ಚೌಕಟ್ಟನ್ನು ಜೋಡಿಸಲು ಸಾಧ್ಯವೂ ಇಲ್ಲ. ಏಕೆಂದರೆ, 'ಕಾವ್ಯ' ಎಲ್ಲವನ್ನೂ ಮೀರಿದ್ದು. ಒಮ್ಮೆ 'ಕಾವ್ಯ'ಕ್ಕೆ ಚೌಕಟ್ಟನ್ನು ಒದಗಿಸಿದರೂ ಅದು 'ಛಂದೋ-ಅಲಂಕಾರ' ಗಳಿಂದ ಮಾತ್ರ ಸಾಧ್ಯ, ರೂಪಕಾಲಂಕಾರಯುಕ್ತ ಪದಗಳೆಂದರೆ, ಉಪಮೇಯ-ಉಪಮಾನಗಳಲ್ಲಿ ಭೇದವನ್ನು ಕಲ್ಪಿಸದಿರುವುದು. ಇಲ್ಲಿ ನಾಟ್ಯಕ್ಕೂ, ಮಯೂರಕದ ನೃತ್ಯಕ್ಕೂ ಭೇದವಿಲ್ಲದಿರುವಂತೆ ಉಪಕಲ್ಪಿಸುವುದು. ಇಲ್ಲಿರುವುದು ನೃತ್ಯ ಸಾದೃಶ್ಯವೆನೆಸಿದೆ. ಹಾಗಾಗೀ 'ನಾಟ್ಯ ಮಯೂರೀ' ಪದದ ಬಳಕೆ, ಕಾವ್ಯಕ ಭಾಷೆಯಲ್ಲಿ ದೋಷವೆನಿಸುವುದಿಲ್ಲ. ಕೇವಲ ವ್ಯಾಕರಣ ಬದ್ಧತೆಯಿಂದ, ಪದದ ಅರ್ಥದ ನೆಲೆಯಲ್ಲಿ ಅರ್ಥೈಸುವುದಾದಲ್ಲಿ ಮಾತ್ರ ದೋಷವೆನಿಸುತ್ತದೆ. ಹಾಗಾಗೀ ಪದಬಳಕೆಯ ಸನ್ನಿವೇಶದ ಹಿನ್ನೆಲೆ ಭಾಷೆಯ ಬಳಕೆಯೇ ಅಥವಾ ಕಾವ್ಯಿಕ ನೆಲೆಯೇ? ಎಂಬುವುದನ್ನು ನೆಲೆಯಾಗಿಟ್ಟುಕೊಂಡು ಪದಬಳಕೆಯ 'ಸರಿ', 'ತಪ್ಪು'ಗಳನ್ನು ನಿರ್ಧರಿಸಬಹುದೆಂಬುದು ಅಭಿಪ್ರಾಯವಷ್ಟೇ! ಧನ್ಯವಾದಗಳು.
ಪದಾರ್ಥ ಚಿಂತಾಮಣಿ ಸಮೂಹ ಪ್ರಶ್ನೆಗೆ ನನ್ನ ಪ್ರತಿಕ್ರಿಯೆ
ಸಂಘ, ಸಂಸ್ಥೆ, ತಂಡ ಮತ್ತು ಗುಂಪು ಇವುಗಳ ನಡುವಿನ ವ್ಯತ್ಯಾಸ
'ಭಾಷೆ'ಯ ಮೂಲ ನಿಗೂಢವಾದ ಸಂಗತಿಯಾಗಿದ್ದು, ಅದರ ವಿಕಾಸ ಮಾತ್ರ ನಮಗೆ ಅನುಭವವೇದ್ಯವಾಗುವ ಸಂಗತಿಯಾಗಿದೆ. ಆದರೆ, ಬದಲಾವಣೆ ನಮ್ಮ ಅನುಭವಕ್ಕೆ ಬರುವ ಸಂಗತಿಯಾಗಿದ್ದರೂ, ಬದಲಾವಣೆ ಹೊಂದಿದ ಬಗೆಯನ್ನು ಕೆಲವೊಮ್ಮ ತಾರ್ಕಿಕ ಊಹೆಯ (ಪ್ರಾಕ್ಕಲ್ಪನೆ) ನೆಲೆಯಲ್ಲಿ ಗುರುತಿಸಬೇಕಾಗುತ್ತದೆ. ಅಂತಹುದೇ ಪ್ರಯತ್ನವನ್ನು ಈ ಸಂಘ, ಸಂಸ್ಥೆ, ತಂಡ, ಗುಂಪು ಈ ಪದಗಳ ಮೂಲ ಗುರುತಿಸಲು ಹಾಗೂ ಅವುಗಳ ನಡುವಿನ ವ್ಯತ್ಯಾಸ ತಿಳಿಯಲು ಮಾಡಬಹುದಷ್ಟೆ. 'ಸಂಘ', ಪ್ರಾಕೃತ ಮೂಲದ ಪದವಾಗಿರಬಹುದು. ಏಕೆಂದರೆ, 'ಸಂಘ' ಪದದ ಬಳಕೆ ಹೆಚ್ಚಾಗಿ ಬಳಕೆಯಲ್ಲಿ ಬರುವುದು 'ಬೌದ್ಧ ಸಾಹಿತ್ಯ'‍ದ ಜೊತೆ ಜೊತೆಯಲ್ಲಿಯೇ ಆಗಿದೆ. "ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ" , ಇದು ಇದಕ್ಕೆ ಪೂರಕವಾಗಿ ಬಳಕೆಯಾಗುವ ಪದವಾದ 'ಸಂಘಾರಾಮ'ವನ್ನು ಇಲ್ಲಿ ಉಲ್ಲೇಖಿಸಬಹುದು. ಇದರೊಟ್ಟಿಗೆ 'ಸಂಘಂ ಸಾಹಿತ್ಯ'ವನ್ನೂ ನೆನೆಯಬಹುದು. ನನ್ನ ಜ್ಞಾನಕ್ಕೆ ನಿಲುಕಿದ ಮಟ್ಟಿಗೆ 'ಸಂಘಂ' ಪದವನ್ನು ಸಂಸ್ಕೃತ ಮೂಲದಲ್ಲಿ ಗುರುತಿಸಲಾಗದು. ಆದರೆ, ಸಂಸ್ಕೃತದ ಅಪಭ್ರಂಶ ರೂಪವಾದ 'ಹಿಂದಿ' ಭಾಷೆಯಲ್ಲಿ, ಈ ಪದದ ಬಳಕೆಯನ್ನು ಕಾಣುತ್ತೇವೆ. ಬಹುಶಃ ಈ ಸಂಕ್ರಮಣ ಸಮಯದಲ್ಲಿಯೇ ಸಂಸ್ಕೃತದ ಅಪಭ್ರಂಶ ರೂಪಗಳು ಚಿಗುರೊಡೆದಿರಬಹುದು. ಇಲ್ಲಿ 'ಸಂಘ' ಎಂದರೆ, 'ಸಮೂದಾಯ', 'ದಳ','ಸಮಾಜ'(ಇಲ್ಲಿ ಬೌದ್ಧ ಸಮಾಜ) ಎಂಬ ಅರ್ಥವನ್ನು ಪಡೆದುಕೊಂಡಿತ್ತು. ಆದರೆ, ಕಾಲಾ ನಂತರದಲ್ಲಿ 'ಸಂಘ', ಸಮೂದಾಯವೆಂಬ ವಿಶಾಲ ಅರ್ಥದಿಂದ, ಅರ್ಥ ಸಂಕುಚನ ಹೊಂದಿ, ಒಂದು ಸಣ್ಣ ಗುಂಪಿಗೆ ಬಳಸುವುದು ರೂಢಿಯಾಯಿತು.'ಸಂಘ'ವನ್ನು, 'ಸಮೂದಾಯ'ದ ಒಳಗೇ ಇರುವ; ಸಮಾನ ಧ್ಯೇಯಗಳನ್ನು ಹೊಂದಿರುವ ಒಂದು ಚಿಕ್ಕ ಗುಂಪು ಎಂದು ಅರ್ಥೈಸಬಹುದು. ಉದಾಹರಣೆಗೆ, ಸ್ತ್ರೀ ಶಕ್ತಿ ಸಂಘಗಳು, ಯುವಕ ಸಂಘಗಳು ಇತ್ಯಾದಿ. ಆದರೆ, ವಾಸ್ತವವಾಗಿ ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ'ದ ಮೂಲ ರೂಪವೇ ಬೇರೆ. ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ' ಪದದಲ್ಲಿ, ಮಹಾಪ್ರಾಣಾಕ್ಷರ, 'ಘ' ಮೂಲದಲ್ಲಿ ಇರುವುದಿಲ್ಲ. ಬದಲಿಗೆ, 'ಸಂಗ' ಈ ರೀತಿಯಲ್ಲಿ ಇರುತ್ತದೆ. ಇಲ್ಲಿ 'ಗ' ಅಲ್ಪಪ್ರಾಣ' ವಾಗಿರುವುದನ್ನು ಗಮನಿಸಬಹುದು. ಇಲ್ಲಿ 'ಸಂಗ' ಎಂದರೆ, 'ಸೇರುವುದು' ಎಂಬ ಅರ್ಥವನ್ನು ಪಡೆದಿದೆ. ಯಾವುದಾದರೂ ಏಕೋದ್ದೇಶದಿಂದ 'ಸಮೂದಾಯ'ದ ಮಂದಿ ಒಂದೆಡೆ ಸೇರುತ್ತಿದ್ದಿರಬಹುದು. ಆದರೆ, ಅದೇ ಸಂದರ್ಭದಲ್ಲಿ ಒದಗಿ ಬಂದ, 'ಸಂಘ' ಪದವು, 'ಸಂಗ' ಪದವನ್ನು ಅತಿಕ್ರಮಿಸಿರಬಹುದು. ಇಲ್ಲಿ 'ಸೇರುವಿಕೆ'ಗೂ 'ಸಂಘಕ್ಕೂ ಅರ್ಥ ಸಾದೃಶ್ಯ ಒದಗಿ, ಬಹುಶಃ 'ಸಂಘ' ವು ಔಪಚಾರಿಕ ನೆಲೆಯುಳ್ಳ ಪದವಾಗಿ ಪರಿವರ್ತಿತವಾಗಿರಬಹುದು. ಇದರೊಟ್ಟಿಗೆ, 'ಸಂಗ' ಪದ ಕ್ರಮೇಣ ಹೀನಾರ್ಥ ಪಡೆದು, 'ನಪುಂಸಕ' ಎಂದು ಬಳಕೆಯಾಗಿದ್ದರಿಂದ, 'ಸಂಘ' ಪದವೇ ಔಪಚಾರಿಕ ನೆಲೆಯಲ್ಲಿ ಉಳಿದುಕೊಂಡಿರಬಹುದು. 'ಸಂಘ' ಪದ ಪ್ರಸ್ತುತ 'ಏಕೋದ್ದೇಶ ಹೊಂದಿರುವ ಚಿಕ್ಕ ಸಮೂದಾಯದ ಒಂದು ಗುಂಪಾಗಿರುತ್ತದೆ. ಇದೇ ಮುಂದೆ, 'ಸಂಘಟನೆ'ಯಾಗಿ ಪರಿವರ್ತಿತವಾಗಿರಬಹುದು. ಇಲ್ಲಿ 'ಸಂಘಟನೆ' 'ಏಕೋದ್ದೇಶ' ಉಳ್ಳವರನ್ನು ಒಂದೆಡೆಗೆ 'ಘಟಿಸು'ವುದಾಗಿದೆ. ಇದಿಷ್ಟೂ 'ಸಂಘ' ಪದದ ವಿಕಸನದ ವಿಶ್ಲೇಷಣೆಯಾದರೆ, ಇನ್ನು 'ಸಂಸ್ಥಾ' ಪದದ ವಿಶ್ಲೇಷಣೆಯನ್ನು ಹೀಗೆ ಗುರುತಿಸಬಹುದು. 'ಸಂಸ್ಥಾ' ಇದು ಪ್ರತಿಶತ ಸಂಸ್ಕೃತ ಪದವೇ ಆಗಿದೆ. 'ಸಂಸ್ಥಾ' ಸ್ತ್ರೀ ಲಿಂಗವಾಚಿ ನಾಮಪದವಾಗಿದ್ದು, 'ಸಂಘ', 'ಸಭೆ'ಗ, ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವ ಪದೆವೇ ಆಗಿದೆ. ಆದರೆ, ನಂತರ 'ಸಂಸ್ಥಾ' ಪದ 'ಸಂಘ'ದ ಕಾರ್ಯ ನಿರ್ವಹಿಸುವ ಆಡಳಿತಾತ್ಮಕ ನಿರ್ವಹಣಾ ವ್ಯವಸ್ಥೆಯಾಗಿ, ಅರ್ಥ ಬಳಕೆಗೆ ಬಂದಿರಬಹುದು. ಸಂಸ್ಕೃತದ 'ಸಂಸ್ಥಾ', ಕನ್ನಡಕ್ಕೆ ಬರುವ ಸಂದರ್ಭದಲ್ಲಿ, ದೀರ್ಘ 'ಆ' ಕಾರ ಕಳೆದುಕೊಂಡು, 'ಸಂಸ್ಥೆ' ಆಗಿರುವುದು ಭಾಷಾ ವ್ಯತ್ಯಾಸ ನಿಯಮರೀತ್ಯ ಸತ್ಯ. ಹಾಗಾಗೀ ಸಂಘಟನೆಯೊಂದರೆ, ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಅಧಿಕೃತ ಮಾಧ್ಯಮವೇ 'ಸಂಸ್ಥೆ'.'ಸಂಘ'ಗಳು 'ಸಂಸ್ಥ'ಯನ್ನು ಹೊಂದಿರಬೇಕೆಂಬ ನಿಯಮವೇನಿಲ್ಲ. 'ಸಂಘ'ಗಳು, ಉದ್ದೇಶ ಸಾಧನೆಗೆ 'ಸಂಸ್ಥೆ'ಗಳನ್ನು ಸಂಸ್ಥಾಪಿಸಿಕೊಳ್ಳಬಹುದು. ಉದಾಹರಣೆಗೆ, ವಿದ್ಯಾಸಂಸ್ಥೆಗಳು. 'ಸಂಸ್ಥೆ'ಗಳು ನಿರ್ದಿಷ್ಟ 'ಉದ್ದೇಶ' ಹಾಗೂ 'ಉದ್ಯೋಗ'ಕ್ಕೆ ಸಂಬಂಧಿಸಿರುತ್ತವೆ.ಇನ್ನು 'ತಂಡ' ಪದದ ವಿಶ್ಲೇಷಣೆಗೆ ಉಪಕ್ರಮಿಸೋಣ. 'ತಂಡ'' ಇದು ಪಕ್ಷವೆಂಬ ಅರ್ಥವನ್ನು ಕೊಡುತ್ತಿದ್ದು, 'ಅಭಿಪ್ರಾಯ ಭಿನ್ನತ'ಯ ನೆಲೆಗಟ್ಟಿನಲ್ಲಿ ರೂಪುಗೊಂಡ ಪದವಾಗಿದೆ. 'ಏಕಾಭಿಪ್ರಾಯ ಉಳ್ಳವರ ಗುಂಪು', ತಂಡವಾಗಿ, ಭಿನ್ನಾಭಿಪ್ರಾಯ ಉಳ್ಳವರಿಂದ ಬೇರೆಯಾಗಿ ನಿಲ್ಲುತ್ತಾರೆ. ಕಾಲ ಕ್ರಮೇಣ ಈ ಪದವು ಅರ್ಥ ಸಂಕುಚನಕ್ಕೆ ಒಳಗಾಗಿ, ಪರ-ವಿರೋಧದ ಗುಂಪಿನ ಸ್ಪರ್ಧೆಗಳಲ್ಲಿ, ನೆಲೆಕಂಡು, ಕ್ರೀಡೆ, ಸ್ಪರ್ಧೆ ಇತ್ಯಾದಿಗಳಲ್ಲಿ ಪರಸ್ಪರ ವಿರುದ್ಧ ತಂಡಗಳೆಂಬ, ಅರ್ಥ ಸಂಕುಚನಕ್ಕೆ ಒಳಗಾಗಿರಬಹುದು. ಅಂತೆಯೇ, 'ಗುಂಪು' ಪದದ ಮೂಲ ನೆಲೆಯ ವಿಶ್ಲೇಷಣೆ ಇಲ್ಲಿದೆ. ಇದು 'ಗುಂಫ಼ನಾ' ಎಂಬ ಸಂಸ್ಕೃತದ ಪದಮೂಲದಿಂದ ಬಂದಂತಹ ಪದವಾಗಿದ್ದು, 'ಗುಂಫ಼ನಾ' ಎಂದರೆ, 'ಕೂಡಿಸಿ ಪೋಣಿಸುವುದು' ಎಂಬರ್ಥವನ್ನು ಪಡೆದಿದೆ. ಈ ಪದದ ಅರ್ಥವೂ 'ಸೇರಿಸುವಿಕೆ'ಯ ಕ್ರಿಯೆಗೆ ಸಂಬಂಧಿಸಿದೆ. ಆದರೆ, 'ಗುಂಪು' ಅರ್ಥಾತ್ 'ಸೇರಿಸುವುದು' ಉದ್ದೇಶ ಪೂರ್ವಕವಾಗಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು!....... ಉದಾಹರಣೆಗೆ, 'ಆಟದ ಗುಂಪುಗಳು', ಕ್ರೀಡೆಯನ್ನಾಡುವ ಉದ್ದೇಶದಿಂದ ಸೇರುವ ಗುಂಪುಗಳು. ಕೆಲವೊಮ್ಮೆ ಮುನ್ನಾ ಉದ್ದೇಶ ರಹಿತವಾಗಿಯೂ 'ಗುಂಪು' ಸೇರಬಹುದು. ಉದಾಹರಣೆಗೆ, 'ಅಪಘಾತ' ಸಂಭವಿಸಿದಾಗ, ಸೇರುವ 'ಜನಜಂಗುಳಿ', ಈ ರೀತಿಯ ಗುಂಪು ಏಕೋದ್ದೇಶ ಇಟ್ಟುಕೊಂಡು, ವ್ಯವಸ್ಥಿತವಾಗಿ ರೂಪುಗೊಂಡಂತಹ ಗುಂಪುಗಳಲ್ಲ. ಸಂದರ್ಭ, ಸನ್ನಿವೇಶಗಳಿಂದ ಪ್ರೇರಿತವಾಗಿ ರೂಪುಗೊಳ್ಳುವ 'ತಾತ್ಕಾಲಿಕ ಗುಂಪುಗಳು'. ಹಾಗಾಗೀ 'ಗುಂಪು'ಗಳಿಗೆ, ಅಧಿಕೃತ 'ಸಂಸ್ಥಾ' ನೆಲೆಯಿರುವುದಿಲ್ಲ. 'ಸಂಘ'ಗಳು 'ಏಕೋದ್ದೇಶ'ವನ್ನು ಆಧರಿಸಿದ್ದರೆ, 'ಸಂಸ್ಥ'ಗಳು ಉದ್ದೇಶ ಸಾಧನೆಗೆ 'ಮಾಧ್ಯಮ' ಎನ್ನಬಹುದು. 'ತಂಡ'ವು 'ಏಕಾಭಿಪ್ರಾಯ'ವನ್ನು ಆಧರಿಸಿ ರೂಪುಗೊಳ್ಳುವ 'ಸಮೂಹ' ಎನಿಸಿದರೆ, 'ಗುಂಪು', 'ಆಸಕ್ತಿ', ಸನ್ನಿವೇಶ'ವನ್ನು ಆಧರಿಸಿದ 'ಸಮೂಹ'ಗಳಾಗಿವೆ ಎಂದು ವಿಶ್ಲೇಷಿಸಬಹುದು(ವಿಶೇಷ ಸೂಚನೆ: ಈ ತಿಳಿವು ನನ್ನ ಜ್ಞಾನಕ್ಕೆ ನಿಲುಕಿದಂತಹ ವಿಶ್ಲೇಷಣೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ).ಧನ್ಯವಾದಗಳು.
                                                               'ಬನಸಿರಿ'
ಬನಸಿರಿಯಾ ದೇಗುಲದಿ ವನಸಿರಿಯಾ ಮಡಿಲಿನಲಿ
ಹಸಿರಿನಾ ಹಂದರದಾ ಸಿರಿ ಮುಡಿಯಾ ಅಡಿಯಲ್ಲಿ ||2||
ನಿತ್ಯ ಹರಿದ್ವರ್ಣವನದ ತರುಲತೆಗಳಾ ಮಲೆಯಲ್ಲಿ ||2||
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಬನಸಿರಿ||

ಹೇ ಅಗ್ನಿ! ಹೇ ವಾಯು! ಹೇ ಜಲಶಕ್ತಿಯೇ!
ಆಕಾಶ ಈ ಪೃಥ್ವಿ ಸಮನ್ವಿತ ಸಮಷ್ಟಿಯೇ||2||
ಪಂಚಭೂತ ಸೃಷ್ಟಿಯೇ! ನಿಸರ್ಗದ ಸಮದೃಷ್ಟಿಯೇ ||2||
ನಿತ್ಯೋತ್ಸವ ತಾಯೇ ನಿತ್ಯೋತ್ಸವ ||ಬನಸಿರಿ||

ಮಲೆ ಹಸಿರಿನ ಸೀಮೆಯೇ! ಹಿಮ ಅಗ್ನಿಯ ಶ್ರೇಣಿಯೇ!
ನದಿ, ಸಾಗರ, ಜಲಪಾತ ಧುಮ್ಮಿಕ್ಕುವ ಧಾರೆಯೇ!
 ಆ ಉಸುಬಿನ, ಈ ಸೊಬಗಿನ ಪ್ರಸ್ಥಭೂಮಿಯಾ ನೆಲೆಯೇ||2||
ನಿತ್ಯೋತ್ಸವ ತಾಯೇ ನಿತ್ಯೋತ್ಸವ ||ಬನಸಿರಿ||





                                                         ||ಶ್ರಮಯೇವ ಜಯತೆ||
ಜಯತೇ ಜಯತೇ ಜಯತೇ
ಶ್ರಮಯೇವ ಜಯತೇ ಶ್ರಮಯೇವ ಜಯತೇ ಶ್ರಮಯೇವ ಜಯತೇ ||ಜಯತೇ||

ಮಾರ್ಗಮೆ ಕರ್ಮ ಮಾರ್ಗಂ ಉತ್ತಮಂ
ಶ್ರೇಷ್ಠ ಮಾರ್ಗಂ ಉದ್ಯೋಗಂ
ಪ್ರೇಮ ಮುದಿತ ಮನ ಕರ್ಮ ನಿರ್ವಾಹಣಂ
ಯಶೋ ಲಾಭಂಚ ಸಿದ್ದಿನಿ ||ಜಯತೇ||

ಶ್ರಮ ಮಹಾಶಕ್ತಿಃ ಜ್ಞಾನ ಹಿ ಯುಕ್ತಿಃ
ಭಕ್ತಿಃ ಶಕ್ತಿಃ ಮಾಧ್ಯಮಮ್
ತ್ರಿಗುಣ ಸಮ್ಮಿಲಿತ ಅಭಿವ್ಯಕ್ತಿ ಕರ್ಮಃ
ಉನ್ನತಿ ಸಂಕಲ್ಪ ಸಿದ್ಧತ್ಯೇ||ಜಯತೇ||


                                                                         ಭೂಮಾತೆ
ಮಾತೆ ಮಾತೆ ಭೂ ಮಾತೆ.........
ಸಹನೆಯಾ ಮೂರುತಿ ಅಭಿಜಾತೆ||ಮಾತೆ||

ಗ್ರಹ ಮಂಡಲದಲಿ ನೀನೆ ಜೀವಜಾತೆ
ಕ್ಷಮಯಾ ಧರಿತ್ರಿ ನೀ ವಾತ್ಸಲ್ಯದಾತೆ
ಜೀವ ಸಂಕುಲಕೆ ನೀ ಆಶ್ರಯಾದಾತೆ.........||2||
ಮಾತೆ ಮಾತೆ ಮಾತೆ ||ಮಾತೆ||

ದಿನ ರಾತ್ರಿ ನಿನ್ನಿಂದ ಭ್ರಮಣಿಸುವೆ ಮಾತೆ
ವರುಷಗಳ ಆಯುಷ್ಯ ಹರುಷಗಳಾದಾತೆ ||2||
ಸಂಜೀವಿನಿ ಇಳೆ ನೀ ಬುವಿ ನೀ ಮಾತೆ............||2||
ಮಾತೆ ಮಾತೆ ಮಾತೆ ||ಮಾತೆ||

ಶೀತೋಷ್ಣ ಸಮನೆಲೆಯ ವೈಶಿಷ್ಠ್ಯ ರೂಪೆ
ಜಲ ವಾಯು ಭೂ ಮಂಡಲ ವೈವಿಧ್ಯರೂಪೆ||2||
ಮಳೆ ಇಳಿಯೆ ಬೆಳೆ ನೀಡೋ ಇಳೆ ನೀನು ಮಾತೆ........||2||
ಮಾತೆ ಮಾತೆ ಮಾತೆ ||ಮಾತೆ||

ಭವದಾಸೆ ಹೊಂದಿದ ಭವಿಗೆ ಸಂಭವಿ ನೀ
ಮಹದಾಸೆ ಹೊಂದಿದ ಲಾಲಸಿಗೆ ವಿನಾಶಿನಿ||2||
ಕಂಪಿಸುತಾ ಗುಡುಗುವಾ ಸಮ್ಮೋಹಕರ್ಷಿಣಿ..........||2||
ಮಾತೆ ಮಾತೆ ಮಾತೆ ||ಮಾತೆ||