Sunday 3 September 2017

‘’ಗುರು’ತ್ವ ಅನ್ನದಾನಂ ಮಹಾದಾನಂ ವಿದ್ಯಾದಾನಂ ಅಥಃಪರಃ| ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯೆಯಾ|| ಕ್ಷಣಿಕ ಹಸಿವನ್ನು ನೀಗಿಸುವ ಅನ್ನದಾನ ಮಹಾದಾನವಾದರೆ, ಜೀವನಕ್ಕೆ ಅಗತ್ಯವಾದ ಜ್ಞಾನಾಮೃತದ ಧಾರೆ ಎರೆಯುವ ವಿದ್ಯಾದಾನವು ಅದಕ್ಕಿಂತಲೂ ಮಿಗಿಲಾದುದು. ಇಂತಹ ಜ್ಞಾನದಕ್ಕಿಯ ಭಿಕ್ಷೆ ನೀಡುವವನು ‘ಗುರು’. ಈತ ನಿಜವಾಗಿಯೂ ದೇವಶ್ರೇಷ್ಠನು. ಅದಕ್ಕಾಗಿಯೇ ಗುರುವನ್ನು ಋಗ್ವೇದದಲ್ಲಿ “ಗುರುಬ್ರಹ್ಮ, ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ” ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ದೈವತ್ವಕ್ಕೇರಿಸಿ, ಕೊಂಡಾಡುತ್ತಾರೆ. ಹೌದು ಅರಿವನ್ನು ಸಮಾಜದ ಪೀಳಿಗೆಗಳಲ್ಲಿ ಸೃಷ್ಟಿ ಮಾಡುವುದರಿಂದ ಆತನು ಬ್ರಹ್ಮನೇ ಸರಿ, ಆ ಅರಿವಿನ ಸಹಾಯದಿಂದ ಸಮಾಜ, ದೇಶವನ್ನು ಮುನ್ನಡೆಸುತ್ತಾನೆಯಾದ್ದರಿಂದ ಆತ ವಿಷ್ಣುವೇ ಸರಿ, ದುರ್ಮಾರ್ಗಗಳನ್ನು ತೊಡೆದು ಸನ್ಮಾರ್ಗವನ್ನು ಪ್ರತಿಷ್ಠಾಪಿಸುತ್ತಾನೆಯಾದ್ದರಿಂದ ಆತ ಶಿವನೇ ಸರಿ. ಹೀಗೆ ಸೃಷ್ಟಿ, ಸ್ಥಿತಿ, ಲಯಗಳ ಕಾರಣಕರ್ತನಾಗಿ ಗುರು ಪಾತ್ರ ನಿರ್ವಹಿಸುತ್ತಾನೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಆತ ದೇವನಿಗಿಂತಲೂ ಶ್ರೇಷ್ಟ. ಗುರು ಗೋವಿಂದರಲ್ಲಿ ಯಾರು ಶ್ರೇಷ್ಠ?. ಗೋವಿಂದನನ್ನು ತೋರಿದ ಗುರುವೇ ಉತೃಷ್ಟ ಎಂಬ ಕಬೀರರ ಮಾತು ಇದಕ್ಕೆ ಅಕ್ಷರಶಃ ಸತ್ಯ ಸಾಕ್ಷಿಯಾಗಿದೆ. ಆದರೆ ಇಂದೇನಾಗುತ್ತಿದೆ? ಸೇವೆಯ ನೆಲೆ ಹೊಂದಿದ್ದ, ‘ಬೋಧನಾ ವೃತ್ತಿ’ ಇಂದು ವ್ಯಾಪಾರೀಕರಣಗೊಳ್ಳುತ್ತಿರುವುದು ನಿಜವಾಗಿಯೂ ಖೇಧನೀಯ. ‘ಗುರು’ವೆಂದರೆ, ಇದ್ದ ಘನತೆ ಮರೆಯಾಗುತ್ತಿದೆ. ವೃತ್ತಿಗೌರವವಂತೂ ಬಹುತೇಕರಲ್ಲಿ ಮರೆಯಾಗುತ್ತಿರುವುದು ಅನುಭವವೇದ್ಯವಾಗುತ್ತಿರುವ ಸಂಗತಿ. ವೃತ್ತಿಕ್ಷೇತ್ರಕ್ಕೆ ಬರುತ್ತಿರುವವರೂ ಸರ್ಕಾರಿ ಉದ್ಯೋಗ ನಿಮಿತ್ತವೋ?!....ಯಾವುದೋ ಒತ್ತಡಕ್ಕೋ?!.......... ಆಗುತ್ತಿರುವುದು ಪ್ರಸ್ತುತದ ಸಂಗತಿಯಾಗಿದೆ. ಇನ್ನೂ ವಿಷಾಧನೀಯ ಸಂಗತಿಯೆಂದರೆ, “ ಎಲ್ಲೂ ಸಲ್ಲದವ ಶಿಕ್ಷಕ ವೃತ್ತಿ’ಯಲ್ಲಿ ಸಲ್ಲುವ” ಎನ್ನುವ ಭಾವವನ್ನು ಈ ಪವಿತ್ರ ಕ್ಷೇತ್ರದಲ್ಲಿ ನಿರೀಕ್ಷಿಸಿರಲಿಲ್ಲ. ಆದರೆ, ಇಂದು ಈ ಉಕ್ತಿ ಸ್ವೀಕಾರಾರ್ಹವಾಗದಿದ್ದರೂ, ವಾಸ್ತವ ಅದೇ ಆಗಿದೆ. ಇ.ಎ.ಪೈರಸ್ ಒಂದು ಕಡೆ ಹೇಳುತ್ತಾನೆ, “ ನಮ್ಮ ದೇಶದ ಶಿಕ್ಷಕರು ಮೂರನೆಯ ವರ್ಗದವರಾದರೆ, ನಮ್ಮ ದೇಶವೂ ಮೂರನೆಯ ವರ್ಗವಾಗುತ್ತದೆ”, ಹೌದು ಆತನ ಮಾತು ಅಕ್ಷರಶಃ ಸತ್ಯ. ಒಬ್ಬ ವೈದ್ಯನ ಕರ್ತವ್ಯಲೋಪ, ಒಂದು ಜೀವವನ್ನು ಬಲಿ ತೆಗೆದುಕೊಳ್ಳಬಲ್ಲದು. ಅಂತೆಯೇ ಒಬ್ಬ ಅಭಿಯಂತರನ ಕರ್ತವ್ಯ ಲೋಪ ಒಂದು ಕಟ್ಟಡವನ್ನು ಬೀಳಿಸಬಲ್ಲದು. ಆದರೆ, ಒಬ್ಬ ಶಿಕ್ಷಕನು ತನ್ನ ಕರ್ತವ್ಯವನ್ನು ಮರೆತದ್ದೇ ಆದರೆ, ಅದು ದೇಶದ ಬುನಾದಿಯನ್ನೇ, ಸಮಾಜದ ನೆಲೆಯನ್ನೇ ಅಲುಗಾಡಿಸಬಲ್ಲದು .ಇದಕ್ಕೆಲ್ಲಾ ಯಾಂತ್ರಿಕ ಬದುಕಿನ ಬಳುವಳಿಯಾದ ‘ಬದ್ಧತೆ’ಯ ಕೊರತೆಯೇ ಕಾರಣವಾಗಿದೆ. ಭವಿಷ್ಯದ ಸಮಾಜ, ದೇಶದ ಕಟ್ಟಡಕ್ಕೆ, ಬುನಾದಿಯೇ ಭದ್ರವಾಗಿರದಿದ್ದಲ್ಲಿ ಭವಿಷ್ಯದ ಕನಸಿನ ಕೋಟೆ ಭದ್ರವಾಗಿ ನನಸಾಗುವುದಾದರೂ ಹೇಗೆ?!................................ ಮೌಲ್ಯ, ಬದ್ಧತೆ, ನೈತಿಕತೆಯ ನೆಲೆಯಲ್ಲಿ, ಅರಿವಿನ ಸೃಜನೆಯಾಗಬೇಕಾದುದು ನಿಹಿತವಾದುದಲ್ಲವೇ?!......ಹೀಗಾಗೀ ಮುಂದಿನ ಪೀಳಿಗೆಯ ಭದ್ರನೆಲೆಗೆ ಶಿಕ್ಷಕರಿಗೆ ನೀಡುವ ಸೇವಾ ಪೂರ್ವ ತರಬೇತಿ ಕಾರ್ಯಕ್ರಮವು ಗುಣಮಟ್ಟವನ್ನು ಆಧರಿಸಿರುವುದು ಅಪೇಕ್ಷಣೀಯ. ಆದರೆ, ಇಂದಿನ ಸೇವಾಪೂರ್ವ ತರಬೇತಿಯ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಹಣಕೊಟ್ಟು ಯಶಸ್ವೀ ತರಬೇತಿಯ ಪ್ರಮಾಣಪತ್ರ ಪಡೆಯುವ ಭಾವೀ ‘ಶಿಕ್ಷ’ಕ (‘ಶಿಕ್ಷಾ’ರ್ಹ) ರಿಂದ ಭದ್ರ ಭವಿಷ್ಯದ ನಿರೀಕ್ಷೆ ಸಾಧ್ಯವೇ?!......... ತರಬೇತಿ ಸಂಸ್ಥೆಗಳಾದರೋ, ಹಣ ಮಾಡುವ ಕೇಂದ್ರಗಳಾಗಿ ಪರಿವರ್ತಿತವಾಗುತ್ತಿರುವುದು ನಿಜವಾಗಿಯೂ ಖೇಧನೀಯ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ, ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ದಿಟ್ಟ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಹಿಂಜರಿದರೆ, ಭವಿಷ್ಯ ಅಯೋಮಯವಾಗುವುದಂತೂ ನಿಶ್ಚಿತ. ಈ ಕಾರ್ಯ ಸುಲಭ ಸಾಧ್ಯವೇನಲ್ಲ. ಇಂತಹ ತರಬೇತಿ ಕೇಂದ್ರಗಳಿಗೆ ಬೆಂಬಲಾಸ್ತ್ರವಾಗಿ,ನಿಂತಿರುವ ರಾಜಕಾರಣವನ್ನು ಮೆಟ್ಟಿನಿಲ್ಲುವುದು ಅವಶ್ಯಕವಾಗಬಹುದು. ಆದರೆ, ಭವ್ಯ ದೇಶದ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಇದು ಅಗತ್ಯವಾದುದು. ಈಗಾಗಲೇ ಈ ಅವ್ಯವಸ್ಥಿತ ತರಬೇತಿಯಿಂದ ಮುಂದಾಗಬಹುದಾದ ಸಮಸ್ಯೆಯನ್ನೂ ತಡೆಗಟ್ಟಬೇಕಿದೆ. ಅದಕ್ಕಾಗಿ, ಶಿಕ್ಷಕರ ಆಯ್ಕೆಯ ಪ್ರಕ್ರಿಯೆ ಹೆಚ್ಚು ಸುಧಾರಿಸಬೇಕು. ಗುಣಾತ್ಮಕ ನೆಲೆಗಟ್ಟಿನಲ್ಲಿ, ವೃತ್ತಿಪರ ಖಾಳಜಿ ಉಳ್ಳವರ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಷಯ ಜ್ಞಾನವಷ್ಟೇ, ಶಿಕ್ಷಕರ ಆಯ್ಕೆಗೆ ಮಾನದಂಡವಾಗದೇ, ಸೃಜನಾತ್ಮಕತೆ, ರಚನಾತ್ಮಕತೆ, ಮೌಲಿಕತೆ ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿತ್ವ ಸಂಬಂಧೀ ಅಂಶಗಳ ನೆಲೆಯನ್ನು ಮಾನದಂಡವಾಗಿರಿಸಿಕೊಂಡು, ಬದ್ಧ ಶಿಕ್ಷಕರನ್ನು ಆರಿಸಿದಲ್ಲಿ ಭವಿಷ್ಯ ಉಜ್ವಲವಾಗಬಲ್ಲದು. ಈ ಸಂದರ್ಭದಲ್ಲಿ ಕೊಠಾರಿ ಶಿಕ್ಷಣ ಆಯೋಗದ ನುಡಿಮುತ್ತು ನೆನಪಿಗೆ ಬರುತ್ತಿದೆ. “ಭವ್ಯ ಭಾರತದ ಭವಿಷ್ಯ ತರಗತಿಯ ಕೋಣೆಗಳಲ್ಲಿ ನಿರ್ಮಾಣವಾಗುತ್ತಿದೆ”. ಎಂಬ ಮಾತು ನಿಜವಾಗಿಯೂ ಸರ್ವರಿಗೂ ಎಚ್ಚರಿಕೆಯ ಗಂಟೆ. ಈ ಹಿನ್ನೆಲೆಯಲ್ಲಿ ‘ಗುರು’ತ್ವದ ಪಟ್ಟಕ್ಕೇರುವ ಮುನ್ನ ಅಥವಾ ಆ ಪಟ್ಟಕ್ಕೆ ಏರಿಸುವ ಮುನ್ನ ಆಲೋಚಿಸುವುದು ಅವಶ್ಯಕ. ‘ಗುರು’ತ್ವದ ಪವಿತ್ರ ಪಟ್ಟ ಏರುವ ಮುನ್ನ, ‘ಗುರು’ತ್ವದ ವ್ರತಗಳಾದ ಶ್ರದ್ಧೆ, ಭಕ್ತಿ, ಸೇವೆ, ನಿಷ್ಟೆ ಇತ್ಯಾದಿಗಳಿಗೆ ಬದ್ಧರಾಗಿರುವುದು ಅನಿವಾರ್ಯ ಎಂಬುದನ್ನು ಮರೆಯದಿರಿ. ‘ಗುರು’ತ್ವದ ಪಟ್ಟಕ್ಕೇರುವುದು ಸಾಧನೆಯ ಹಾದಿಯಿಂದ ಮಾತ್ರವೇ ಪರಂತು, ಜೀವನ ನಿರ್ವಹಣೆ ಮಾತ್ರಕ್ಕಾಗಿ, ಶಿಕ್ಷಕ ವೃತ್ತಿಯನ್ನು ಬಳಸಿಕೊಳ್ಳುವುದರಿಂದಲ್ಲ. ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ, ಈ ಲೇಖನ ಪ್ರಸ್ತುತವೆಂದು ಭಾವಿಸುತ್ತಾ, ಶಿಕ್ಷಕರ ದಿನಾಚರಣೆಗಾಗಿಯೇ 2013ರಲ್ಲಿ ಸ್ವರಚಿಸಿ, ಸ್ವಯಂ ರಾಗ ಸಂಯೋಜಿಸಿ, ನನ್ನ ‘ಅಕ್ಕರೆ’ ಬ್ಲಾಗರ್ ನಲ್ಲಿ ಪ್ರಕಟಿಸಿದ ಹಾಗೂ ಮೈಸೂರಿನ ಸೇಂಟ್ ಮಥಾಯಿಸ್ ಶಾಲೆಯ ಮಕ್ಕಳಿಂದ ಆಕಾಶವಾಣಿಯಲ್ಲಿ ಹಾಡಲ್ಪಟ್ಟ ‘ಗುರು ನಮನ’ ಗೀತೆಯೊಂದಿಗೆ ಈ ‘ಗುರು’ತ್ವ ಲೇಖನಕ್ಕೆ ಸದ್ಯ ವಿರಾಮ ಇಡುತ್ತಿದ್ದೇನೆ. ಗುರುನಮನ ಜ್ಞಾನವೇ ಜಗದಲ್ಲಿ ಶ್ರೇಷ್ಠತಮ ಜ್ಞಾನ ನೀಡೋ ಗುರುವೇ ಸರ್ವೋತ್ತಮ ಮೌಢ್ಯಾಂಧಕಾರವೆಂಬೋ ಅಜ್ಞಾನತಮ ತೊಡೆಯುವ ಗುರುವೇ ಜ್ಯೋತಿರ್ಗಮ|| ಜ್ಞಾನ|| ಅನುಭವಗಳ ಸವಿಯು ಹೃದಯಂಗಮ ಅದ ನೀಡೋ ಗುರು ಮಂದಿರವೇ ಜ್ಞಾನಸಂಗಮ ದಿವ್ಯ ಭವ್ಯ ಚೇತನಗಳ ಸೃಷ್ಟ ಉಗಮ ಕಾರಣಿಕ ಗುರುವೇ ಪುರುಷೋತ್ತಮ ||ಜ್ಞಾನ|| ಕಲಿಕೆಯ ಹಾದಿಯು ಬಲು ಕಠಿಣತಮ ಮಾರ್ಗಕಾರ ಗುರುವಿರಲು ಹಾದಿ ಸುಗಮ ವಿದ್ಯಾದಾನ ಶ್ರೇಷ್ಠದಾನ ಉತ್ತಮೋತ್ತಮ ಅದ ನೀಡೋ ಶಿಕ್ಷಕನಿಗೆ ದೀರ್ಘ ಪ್ರಣಾಮ ||ಜ್ಞಾನ|| ಜೈ ಜೈ ಗುರುದೇವ