Wednesday 7 November 2018



ಬೆಳ’ಕಿಂಡಿ’ – ನಿಜವಾದ ಪ್ರಗತಿಪರತೆ
ಸಂಕ್ರಾಂತಿ ಆಯಿತು!............. ಯುಗಾದಿಯಾಯಿತು!.................. ದಸರೆಯಾಯಿತು!................. ಈಗಾಗಲೇ ‘ದೀಪಾವಳಿ’!...................ನಮ್ಮ ಜನಗಳಿಗೆ ಮತ್ತೇನು ಕೆಲಸವಿಲ್ಲ!............. ವರ್ಷದ ಮುಕ್ಕಾಲು ಭಾಗ ಹಬ್ಬಗಳ ಆಚರಣೆಯಲ್ಲಿಯೇ ಕಳಿಯುತ್ತಾರಲ್ಲ!................. ಎಂದು ನಮ್ಮ ಸಂಸ್ಕೃತಿಯ ಆಚರಣೆಗಳನ್ನು ನಾವೇ ಪ್ರಗತಿಪರತೆಯ ಸೋಗಿನಲ್ಲಿ ಹೀಗಳೆಯುವುದೇ ಹೆಚ್ಚು. ಆದರೆ, ಎಲ್ಲಾ ಹಬ್ಬಗಳ ಆಚರಣೆಯ ಹಿನ್ನೆಲೆಯನ್ನು ಬಹು ಸೂಕ್ಷ್ಮವಾಗಿ ಗಮನಿಸಿದಾಗ, ನಮ್ಮ ಗಮನಕ್ಕೆ ಬರುವ ಸಂಗತಿಯೆಂದರೆ, ವಾಸ್ತವವಾಗಿ ಪ್ರಗತಿಪರತೆಯ ಫಲವೇ, ನಿಜ ಮೌಢ್ಯವಾಗಿ ನಮ್ಮ ಸಂಸ್ಕೃತಿಯನ್ನು ಆವರಿಸಿರುವುದಾಗಿದೆ. ಇದಕ್ಕೆ ಸೂಕ್ತ ನಿದರ್ಶನವೇ, ದೀಪಾವಳಿ. ದೀಪಾವಳಿ ದೀಪಗಳ ಹಬ್ಬ. ಈ ಹಬ್ಬದಲ್ಲಿ ದೀಪಗಳದ್ದೇ ಕಾರೋಬಾರು. ದೀಪಾವಳಿ ಹಬ್ಬದ ಆಚರಣೆಯ ಹುಟ್ಟುನ್ನು ಪರಾವಲೋಕಿಸಿದೇ ಆದಲ್ಲಿ. ಈ ದೀಪಾವಳಿಯು ಆಶ್ವಯುಜ ಮಾಸದಿಂದ, ಕಾರ್ತ್ತೀಕ ಮಾಸದತ್ತ ಸ್ಥಿತ್ಯಂತರದ ಘಟ್ಟದಲ್ಲಿ ನಡೆಯುವ ವಿಶಿಷ್ಟ ಆಚರಣೆ. ಹಗಲಿನ ಪ್ರಮಾಣ ಕಡಿಮೆಯಾಗಿ ನಿಶೆಯ ಪ್ರಮಾಣ ಹೆಚ್ಚುವ ಸಮಯ. ಸಾಯಂ ಸಮಯದಲ್ಲಿ, ಬಹುಬೇಗನೇ ಈ ಸಂದರ್ಭದಲ್ಲಿ ಕತ್ತಲು ಆವರಿಸುವುದು ಪ್ರಕೃತಿ ನಿಯಮ. ವಿದ್ಯುತ್ ದೀಪಗಳಿಲ್ಲದ ಆ ಕಾಲವೊಂದಿತ್ತು. ಕೆಲಸ ಕಾರ್ಯ ಮುಗಿಸಿಕೊಂಡು ಮನೆಗೆ ತೆರಳುವ ಸಮೂಹಕ್ಕೆ ಸಂಜೆಗತ್ತಲು  ಹೆಜ್ಜೆ ಹಾಕಿ ಮನ್ನಡೆಯಲು ಸವಾಲೆಸಗುತ್ತಿತ್ತು.. ಈ ಹಿನ್ನೆಲೆಯಲ್ಲಿ,  ದೀಪಾವಳಿಯೇ ಆದಿಯಾಗಿ ಕಾರ್ತ್ತೀಕ ಮಾಸ ಪರ್ಯಂತ, ಸಂಜೆಯ ಹೊತ್ತು, ಮನೆ ಮುಂದೆ ದೀಪಗಳನ್ನು ಇಡಬೇಕೆನ್ನುವ ವಿಶಿಷ್ಟ ಆಚರಣೆ, ಆ ದಾರಿಹೋಕರಿಗೆ ದಾರಿದೀಪವಾಗುತ್ತಿತ್ತು. ಆದರೆ, ವೈಜ್ಞಾನಿಕ ಪ್ರಗತಿಯನ್ನು ದುರುಪಯೋಗ ಪಡಿಸಿಕೊಂಡ ನಾವು ‘ಧೀಪದ ಸಂಸ್ಕೃತಿ’ಯನ್ನು, ‘ಸಿಡಿ ಪಟಾಕಿಯ ಸಂಸ್ಕೃತಿ’ಯನ್ನಾಗಿಸಿದ್ದೇವೆ. ‘ಸಹಾಯ ಹಸ್ತ ನೀಡುವ ಉದ್ದೇಶ’ದಿಂದ ದೀಪ ಹಚ್ಚುವ ಆ ನಮ್ಮ ಜನಪದರ ಸಂಸ್ಕೃತಿಯೆಲ್ಲಿ?!.......... ಅಪಾಯದ ಸಿಡಿಮದ್ದನ್ನೇ ಸಿಡಿಸುವ ಇಂದಿನ ‘ಸಿಡಿ ಮದ್ದಿನ ಪಟಾಕಿ ಸಂಸ್ಕೃತಿ’ ಎಲ್ಲಿ?!...............
 ದೀಪಾವಳಿಯ ಮೊದಲ ದಿನ ನೀರು ತುಂಬವ ಹಬ್ಬ!................ “ಹಂಡೆಯನ್ನು ಫಳಫಳನೆ ಹೊಳೆಯುವಂತೆ ತೊಳೆದು, ರಂಗವಲ್ಲಿ ಹಾಕಿ, ಪೂಜಿಸುವ ಆಚರಣೆಯಲ್ಲೇನಿದೆ?!............... ಇವರೆಲ್ಲರೂ ಮೂರ್ಖರು!...... ಅಪ್ರಬುದ್ಧರು” ಎನ್ನುವವರೇ ಹೆಚ್ಚು!.............. ವರ್ಷ ಪೂರ್ತಿ ನಮಗಾಗಿ ಕಾವಿನಲ್ಲಿ ಬೆಂದು, ಬಿಸಿ ನೀರ ನೀಡಿದ ‘ಹಂಡೆಗೂ ಕೃತಜ್ಞತಾ ಭಾವವನ್ನು ಅರ್ಪಿಸುವುದು ಇಲ್ಲಿನ ಸಾಂಕೇತಿಕ ಆಚರಣೆ. ಆ ಆಚರಣೆ ಹಿಂದೆ, ‘ಕೃತಜ್ಞತಾ ಭಾವ’ದ ಸಮರ್ಪಣೆಯನ್ನು ಕಲಿಸುವ ಉದ್ದೇಶವಿದೆ. ಇತ್ತೀಚಿನ ಪೀಳಿಗೆಗಳಲ್ಲಿ ಸಹಕಾರ ಪಡೆದುಕೊಂಡು, ‘ಉಂಡ ಮನೆಗೇ ದ್ರೋಹ ಬಗೆಯುವ ಮನಸ್ಸಿನ ಸೃಷ್ಟಿಯಾಗುತ್ತಿದೆ. ಆದರೆ, ಮಾನವರಿಗೆ ಮಾತ್ರವಲ್ಲ, ನಿರ್ಜೀವ ವಸ್ತುಗಳಿಗೂ, ಕೃತಜ್ಞತೆಯನ್ನು ಸಲ್ಲಿಸಬೇಕೆಂಬ, ಸಂದೇಶ ಸಾರುವ ಈ ಘನ ಆಚರಣೆಯಲ್ಲಿ ಪ್ರಗತಿಪರತೆ ಕಾಣಿಸುತ್ತಿಲ್ಲವೇ!................
‘ಕೆರ್ಕ’ ಆಚರಣೆ:- ಇದೊಂದು ದೀಪಾವಳಿಯ ವಿಶಿಷ್ಟ ಆಚರಣೆ. ಈ ಆಚರಣೆಯಲ್ಲಿ, ಇಡೀ ದಿನ ಯಾರಾದರೂ ಮಾತನಾಡಿಸಿದಾಗ, ಹುಂ!, ಹ್ಞೂಂ!......ಹ್ಞುಂ!.........ಹ್ಞುಂ........ ಎನ್ನುವಂತಿಲ್ಲ. ವಾಕ್ಯ ಬದ್ಧವಾಗಿಯೇ ಮಾತನಾಡಬೇಕು ಇಲ್ಲವಾದಲ್ಲಿ, ‘’ಕೆರ್ಕ’ ಅಂದರೆ, ‘ಕೆರೆದುಕೋ!’ ಎಂದು ಚೇಡಿಸುವುದೇ ರೂಢಿ ಸಂಪ್ರದಾಯ, ಮಾತು ಕಲಿಸುವ ಈ ಆಚರಣೆಯಲ್ಲಿದೆಯೇನು ಮೌಢ್ಯತೆ!......... ಇಲ್ಲ ಇಲ್ಲಿರುವುದು ಸಂತಸದಾಯಕ ಕಲಿಕೆಯ ನಿತ್ಯತೆ!............. ಪ್ರಗತಿಪರತೆಯ ನೆಲೆಗಟ್ಟಿನಲ್ಲಿ ಸಾಗುತ್ತಿದ್ದೇವೆಂಬ ಭ್ರಮೆಯಲ್ಲಿರುವ ನಾವು ಮನೆಗೆ ಯಾರಾದರೂ ಬಂದರೆ, ಮಾತನಾಡಿಸುವುದೇ ಕಷ್ಟ!.............ಆಗ ಮನೆಗೆ ಯಾರಾದರೂ ಬಂದರೆ, ಸಂಭ್ರಮಿಸುತ್ತಿದ್ದ ನಾವುಗಳು ಇಂದು, ಹೊರಗಿನಿಂದ ಮನೆಗೆ ಬರುವವರು ಇರಲಿ, ಮನೆಯವರೊಂದಿಗೇ ಕಾಲ ಕಳೆಯಲು ಭಾನುವಾರದ ಕೆಲ ನಿಮಿಷಗಳನ್ನೂ ಮೀಸಲಿಡಲಾಗುತ್ತಿಲ್ಲ!.......................ಮನಕ್ಕೆ ಮುದ ನೀಡದ ಪ್ರಗತಿಪರತೆಯ ಲಾಭವೇನು?!............ ಅಂತಹದರಲ್ಲಿ, ಈ ಹಬ್ಬಗಳ ಆಚರಣೆ ನಿಮಗೆ, ದಿನ ಮಾತ್ರವಾದರೂ ಸಂತಸ ನೀಡಬಲ್ಲದು. “ಸಂತಸವಾಗಿದ್ದಲ್ಲಿ, ನಮ್ಮ ಆಯಸ್ಸು, ಆರೋಗ್ಯ ವೃದ್ಧಿಸಬಲ್ಲದು”. ನೂರು ವರ್ಷಕ್ಕೂ ಮೀರಿ ಬಾಳುತ್ತಿದ್ದ, ನಮ್ಮ ಹಿರಿಯರ ಜೀವನದ ಅರ್ಧಭಾಗವನ್ನೂ ತಲುಪಲು ನಮ್ಮಿಂದ ಇಂದು ಸಾಧ್ಯವಾಗುತ್ತಿಲ್ಲ!. ರಾಷ್ಟ್ರದ ಪ್ರಗತಿಯನ್ನು ಜೀವಿತಾವಧಿಯ ಅನುಪಾತದಿಂದಲೂ ಗಣಿಸಲಾಗುತ್ತದೆ. ಹಾಗಾದರೆ, ಪ್ರಗತಿಪರತೆಯ ಗುಂಗಿನಲ್ಲಿರುವ ನಾವು ವಾಸ್ತವವಾಗಿ ಅನುಭವಿಸುತ್ತಿರುವುದು ಪ್ರಗತಿಯೋ!............ವಿಗತಿಯೋ!..................
ಹಬ್ಬ ಹರಿದಿನಗಳಲ್ಲಿ ಹಿರಿಯರು ನಿಯಮಬದ್ಧಗೊಳಿಸಿದ ಆಹಾರಾಭ್ಯಾಸಗಳು, ನಮ್ಮ ಆರೋಗ್ಯದ ಮೇಲೆ ಸತ್ಪರಿಣಾಮ ಬೀರುತ್ತಿತ್ತು. ಪಂಚಾಮೃತ, ತರಕಾರಿಗಳ ಪಲ್ಯೆ, ಕಾಳು-ಬೇಳೆಗಳಿಂದ ತಯಾರಿಸಿದ ವಿಶಿಷ್ಠ ಖಾದ್ಯಗಳು, ನಮ್ಮ ದೇಹದಲ್ಲಿ ‘ರೋಗ ನಿರೋಧಕ ಶಕ್ತಿ’ಯನ್ನು ಹೆಚ್ಚಿಸಿ, ಅನಾರೋಗ್ಯಕ್ಕೆ ಈಡಾಗದಂತೆ, ತಡೆ ಹಿಡಿಯುತ್ತಿದ್ದವು. ಆದರೆ, ಇಂತಹ ಆಹಾರಾಭ್ಯಾಸಗಳೆಲ್ಲವೂ ಕೆಲಸವಿಲ್ಲದವರು ಮಾಡಿದ ನಿಯಮಗಳೆಂದು ನಾವು ಹೀಗಳೆದು, ನಮ್ಮ ಆರೋಗ್ಯ ಭಾಗ್ಯವನ್ನು ನಾವೇ ದೂರ ತಳ್ಳಿದ್ದೇವೆ.
ದೀಪಾವಳಿಯ ಎರಡನೇ ದಿನ ‘ನರಕ ಚತುರ್ದಶಿ’. ಇಂದೇ ‘ನೀರು ಹಾಕಿಕೊಳ್ಳುವ ಹಬ್ಬ’. ಮಳೆಗಾಲ ಕಳೆದು ಚಳಿ
ಆವರಿಸುವ ಹೊತ್ತಿನಲ್ಲಿ, ‘ಅಭ್ಯಂಜನ’ ಅರ್ಥಾತ್ ‘ಎಣ್ಣೆ ಸ್ನಾನ’ ಅವಶ್ಯಕವಾಗಿ ಬೇಕು. ಎಂಬುದನ್ನು ಸಾಂಕೇತಿಕವಾಗಿ, ತೋರಿಸೋ ಅರ್ಥಪೂರ್ಣ ಹಬ್ಬ. ಚಳಿಗಾಲದಲ್ಲಿ ದೇಹದ ಸಮತೋಲನ ಕಾಯ್ದುಕೊಳ್ಳಲು, ‘ಅಭ್ಯಂಜನ’ ಅಗತ್ಯ ಎಂದು ಮನಗಂಡಿದ್ದವರು ನಮ್ಮ ಜನಪದರು. ಎಣ್ಣೆ ಚಟ್ಟಿಸಿಕೊಂಡು, ಸೀಗೆಯಲ್ಲಿ ಸ್ನಾನ ಮಾಡುವುದು ಒಂದು ತರಹ ಹಿತಕರವಾದ ಸಂಕಟ. ಎಣ್ಣೆ ಸ್ನಾನ ಎಂದರೆ, ಓಡುವವರೇ ಹೆಚ್ಚು!................. ಅಂತೆಯೇ, ಧಾರ್ಮಿಕ ಆಚರಣೆಗೆ ತಲೆಬಾಗುವುದೂ ಸಹಜ!. ಈ ತಥ್ಯವನ್ನು ಮನಗಂಡಿದ್ದ, ನಮ್ಮ ಹಿರಿಯರು, ನರಕನ ಸಂಗತಿಯನ್ನು, ‘ಅಭ್ಯಂಜನ’ಕ್ಕೆ ಹೊಂದಿಸಿದರು. ನರಕಾಸುರ ಮಹಾ ಪಾತಕಿ. 16,000 ಸ್ತ್ರೀಯರನ್ನು, ಋಷಿ, ಮುನಿಗಳನ್ನು ಬಂಧನದಲ್ಲಿ ಇರಿಸಿಕೊಂಡಿದ್ದ. ಅವನನ್ನು, ಶ್ರೀಕೃಷ್ಣನು ಸಂಹರಿಸಿ, ಆ ಸ್ತ್ರೀ, ಋಷಿ, ಮುನಿಗಳಿಗೆ  ಮುಕ್ತಿಯನ್ನು ಕೊಟ್ಟ. ನರಕಾಸುರ ತನ್ನ ಅಂತಿಮ ಕ್ಷಣದಲ್ಲಿ ಕೃಷ್ಣನಿಂದ ವರ ಪಡೆದ. ನನ್ನ ಸಾವಿನ ಈ ದಿನದಂದು ‘ಅಭ್ಯಂಜನ’ ಮಾಡಿದವರಿಗೆ, ನರಕ ಪ್ರಾಪ್ತಿಯಾಗದಿರಲೆಂದು!........................ ಇದಕ್ಕೆ ವರನೀಡಿ, ಶ್ರೀಕೃಷ್ಣ ತಾನೇ ಈ ದಿನದಂದು ಅಭ್ಯಂಜನ ಮಾಡಿ, ಆತನಿಗೆ ನೀಡಿದ್ದ ವರವನ್ನು ಪೂರೈಸಿದ!...... ಹೀಗೆ ಪೌರಾಣಿಕ ಕತೆಗಳ ಲೇಪನವನ್ನು ಮಾಡಿ, ನಿಯಮದ ರೂಪದಲ್ಲಿ, ‘ಅಭ್ಯಂಜನ’ವನ್ನು ಕಡ್ಡಾಯಗೊಳಿಸಿದರು. ಕತೆ ಏನೇ ಇರಲಿ, ವೈಜ್ಞಾನಿಕ ಕ್ರಮವೊಂದನ್ನು, ಧಾರ್ಮಿಕ ಆಚರಣೆಯಲ್ಲಿ ಹೊಂದಿಸಿದ ಬುದ್ಧಿವಂತಿಕೆ ನಮ್ಮ ಜನಪದರಲ್ಲಿ ಎದ್ದು ಕಾಣುತ್ತಿದೆ. ಆಚರಣೆಯ ಕತೆಯ ತೊಡುಗೆಯ ಹಿಂದೆ ಇರುವ ಪ್ರಗತಿಪರತೆಯ ತಥ್ಯವನ್ನು, ಗುರುತಿಸಿದಲ್ಲಿ, ಆಚರಣೆಯ ಬಗ್ಗೆ ಹಗುರ ನುಡಿಗಳು ಬರಲಾರವು.
ದೀಪಾವಳಿಯ ಮುಖ್ಯ ಆಚರಣೆ, ‘ಲಕ್ಷ್ಮೀ ಪೂಜೆ’. ಲಕ್ಷ್ಮೀದೇವಿ ಕ್ಷೀರಸಾಗರದಿಂಧ ಹುಟ್ಟಿದ ದಿನವೆಂದು, ಆಕೆ, ಮಹಾವಿಷ್ಣುವನ್ನು ವರಿಸಿದ ದಿನವೆಂಬುದು ಹೈಂದವೀ ಧರ್ಮದ ನಂಬಿಕೆ.  ಲಕ್ಷ್ಮೀದೇವಿಯನ್ನು, ‘ಧನ-ಧಾನ್ಯ ಸಂಪತ್ತಿನ ಅಧಿದೇವತೆಯಾಗಿ, ಹೈಂದವೀ ಧರ್ಮದಲ್ಲಿ ಪೂಜಿಸುವುದು ವಾಡಿಕೆ. ಸಂಪತ್ತು, ಸಮೃದ್ಧಿ ನಮ್ಮಲ್ಲಿದ್ದರೆ, ಸುಖ ಜೀವನ. ಇಲ್ಲವಾದಲ್ಲಿ, ನಮ್ಮ ಜೀವನ ಅಯೋಮಯ. ಲಕ್ಷ್ಮೀದೇವಿಯನ್ನು ಪ್ರಕೃತಿ ಎಂತಲೂ ಕರೆಯುತ್ತಾರೆ. ಆಕೆಯನ್ನು ಪೂಜಿಸುವ ಅಷ್ಟೋತ್ತರದಲ್ಲಿ ಮೊದಲ ನಾಮವೇ ‘ಪ್ರಕೃತಿಯೇ ನಮಃ’ ಎನ್ನುವುದು. ಅದೇ ಅಷ್ಟೋತ್ತರದ ಎರಡನೇ ನಾಮವೇ, ‘ವಿಕೃತಿಯೇ ನಮಃ’. ಎನ್ನುವುದು. ಇದರ ಹಿನ್ನೆಲೆಯ ಅರಿವು ಮೂಡಿಸುವುದು ಇಲ್ಲಿ ಔಚಿತ್ಯ ಎನಿಸುತ್ತದೆ. ಹೌದು. ನಮ್ಮದು ಅಪ್ಪಟ ಜನಪದ ಸಂಸ್ಕೃತಿ. ನಮ್ಮನ್ನು ರಕ್ಷಿಸುವ ಪ್ರಕೃತಿಯನ್ನು ಆರಾಧಿಸಿಕೊಂಡು ಬಂದರಿರುವ ಸಂಸ್ಕೃತಿ. ತಾಯಿ ಲಕ್ಷ್ಮೀ (ಪ್ರಕೃತಿ) ನಮಗೆ ಕೊಡುವ ಸಂಪನ್ಮೂಲ ಅಪಾರ. ಈ ಪ್ರಕೃತಿಯು ಒದಗಿಸಿರುವ ಸಂಪನ್ಮೂಲಗಳ, ‘ಸದ್ಭಳಕೆ’ ನಮ್ಮ ಜನಪದರ ನಡೆಯಾಗಿತ್ತು.  ಪ್ರಕೃತಿಯು ಒದಗಿಸಿರುವ ಸಂಪನ್ಮೂಲಗಳ ‘ದುರ್ಬಳಕೆ’ ಇಂದು ನಮ್ಮ ನಡೆಯಾಗಿದೆ  ಇದೇ ನಮ್ಮ ‘ವಿಕೃತಿ’. ಅಷ್ಟೋತ್ತರದ ಆ ಎರಡು ನಾಮಗಳು ನಮ್ಮನ್ನು ಎಚ್ಡರಿಸುತ್ತಿವೆ. ನಿಜ ಸಂಸ್ಕೃತಿಯನ್ನು ಅರಿಯುವಲ್ಲಿ, ಮಡಿವಂತಿಕೆ ಇಟ್ಟುಕೊಳ್ಳದಿರಿ. ನಮ್ಮ ಸಂಸ್ಕೃತಿಯ ಮೇಲೆ ಪೂರ್ವಾಗ್ರಹ ಪೀಡಿತ ಭಾವನೆ ಬೇಡ!............ ವಾಸ್ತವದಲ್ಲಿ ಯಾವ ಅಂಶಗಳೂ ಸರಿಯೂ ಅಲ್ಲ!........ ತಪ್ಪೂ ಅಲ್ಲ!......... ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ, ಅವು ಸರಿ-ತಪ್ಪುಗಳಾಗಿ ಪರಿಣಮಿಸುತ್ತವೆ. ಅದಕ್ಕಾಗಿ, ನಿಜಸಂಸ್ಕೃತಿಯ ಆಲೋಡನೆ ಅಗತ್ಯವಾದುದು. ಅದಕ್ಕಾಗಿ, ಎಲ್ಲಾ ಭಾಷೆಗಳನ್ನು ಕಲಿಯಬೇಕು. ಭಾಷೆಯ ಮುಖೇಣ ಸಂಸ್ಕೃತಿಯ ಆಚರಣೆಯಲ್ಲಿರುವ ಹಿನ್ನೆಲೆಗಳನ್ನು ಸಂಶೋಧಿಸಬೇಕು. ಸಂಸ್ಕೃತಿಯ ಆಚರಣೆಯು ಮೌಢ್ಯವಾಗಿ ಬದಲಾದ, ಸ್ಥಿತ್ಯಂತರ ಬಿಂದುವನ್ನು ಗುರುತಿಸಬೇಕು. ಆ ಮೌಢ್ಯವನ್ನು ಕಳೆದು ನಿಜ ಸಂಸ್ಕೃತಿಯ ಆಚರಣೆಯ ಹಿನ್ನೆಲೆಯನ್ನು ಗುರುತಿಸಿದಲ್ಲಿ, ಪ್ರಗತಿಪರತೆಯ ಬೆಳ’ಕಿಂಡಿ’ ತೆರೆಯಬಲ್ಲದು. ‘ಅಮಾವಾಸ್ಯೆ’ ಕತ್ತಲಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆಯಾಗಿ, ‘ಅಮಾವಾಸ್ಯೆಯನ್ನು ಕೆಟ್ಟದಿನವನ್ನಾಗಿ ಬಿಂಬಿಸಲಾಗುತ್ತದೆ. ನಿಜ ಪ್ರಗತಿಪರತೆಯು ಇದನ್ನು ಖಂಡಿಸುತ್ತದೆ. ಆದರೆ, ‘ದೀಪಾವಳಿಯ ಲಕ್ಷ್ಮೀಪೂಜೆ’ಯು ಇದೇ ಅಮಾವಾಸ್ಯೆಯ ದಿನದಂದೇ ಆಗಿದೆ. ವಾಸ್ತವವಾಗಿ ‘ಅಮಾವಾಸ್ಯೆಯ ಬಗೆಗಿರುವ ಮೌಢ್ಯತೆಯನ್ನು ಈ ಸಾಂಸ್ಕೃತಿಕ ಆಚರಣೆಯೇ ಕಳೆಯುತ್ತದೆ. ಅದಕ್ಕಾಗಿಯೇ, ಅಮಾವಾಸ್ಯೆಯ ದಿನದಂದೇ, ಈ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕತ್ತಲನ್ನು ಓಡಿಸಲು ದೀಪದ ಬೆಳಕು ಅವಶ್ಯಕ. ಈ ಹಿನ್ನೆಲೆಯಲ್ಲಿ, “ಅರಿವಿನ ಜ್ಯೋತಿ, ‘ಅಜ್ಞಾನದ ಕತ್ತಲನ್ನು ಕಳೆಯಬಲ್ಲದು” ಎಂಬುದು ಆಚರಣೆಯ ಹಿಂದಿನ ಸಾಂಕೇತಿಕ ತಥ್ಯವಾಗಿದೆ.

ದೀಪಾವಳಿಯ ಕೊನೆಯ ದಿನ, ‘ಬಲಿ ಪಾಡ್ಯಮಿ’. ವಾಮನಾವತಾರದಲ್ಲಿ ಬಂದ ವಿಷ್ಣು, ಬಲಿಯ ರೂಪದ ಅಹಂಕಾರವನ್ನು ಮೆಟ್ಟಿದ ದಿನದ ಸಂಕೇತ. ಮೂರಡಿ ಭೂಮಿಯನ್ನು ಬೇಡಿದ ವಾಮನನ್ನು ನೋಡಿ, ಅಹಂ ಭಾವದ ಉನ್ಮತ್ತತೆಯಿಂದ ಮೆರೆದ ಬಲಿಯನ್ನು ತ್ರಿವಿಕ್ರಮನಾಗಿ ಮಹಾ ವಿಷ್ಣುವು ತುಳಿದ ದಿನವೆಂದು, ಜನಾನುರಾಗಿ ದೊರೆಯು ಒಂದು ದಿನವಾದರೂ ಭುವಿಗೆ ಬಂದು ತನ್ನ ಪ್ರಜೆಗಳನ್ನು ನೋಡಿ ಹೋಗಬೇಕೆಂಬ ಬಯಕೆಗೆ, ಮಹಾವಿಷ್ಣುವು ವರ ನೀಡಿದನೆಂದು, ಈ ದಿನದಂದೇ, ಆತ ಬಂದು ಹೋಗುವನೆಂದು ನಂಬಿಕೆ. ತನ್ನನ್ನು ಆಳಿದ ದೊರೆಯನ್ನು ಸ್ವಾಗತಿಸಲು, ಅಂದು, ಮನೆ ಸಾರಿಸಿ, ರಂಗವಲ್ಲಿ ಇಕ್ಕಿ, ಹಸುವಿನ ಸಗಣಿಯಲ್ಲಿ ಕೋಟೆ ಕಟ್ಟಿ, ಕನ್ನಡಿಯ ಮುಂದೆ ಅದನ್ನು ಇಟ್ಟು, ಬಲಿ ಚಕ್ರವರ್ತಿ ಎಂದು ಪೂಜಿಸುತ್ತಾರೆ ನಮ್ಮ ಜನಪದರು. ಇದೇನು ಅರ್ಥವಿಲ್ಲದ ಆಚರಣೆ ಎಂದು ಮತ್ತೆ ಹೇಳಬೇಡಿ!........ ರಾಜ ಹಾಗೂ ಪ್ರಜೆಗಳ ಅನ್ನೋನ್ಯ ಸಂಬಂಧವನ್ನು ಈ ಆಚರಣೆ ಸಾರುತ್ತದೆ. ನಮ್ಮ ಕೋಟೆ ರಾಜ್ಯವನ್ನು ಅರ್ಥಾತ್ ಜನರನ್ನು ಪ್ರತಿನಿಧಿಸಿದರೆ, ಕನ್ನಡಿ ಬಲಿ ಅರ್ಥಾತ್ ರಾಜನನ್ನು ಪ್ರತಿನಿಧಿಸುತ್ತದೆ. ‘ಪ್ರಜಾ ಪ್ರಭುತ್ವ’ದ ನೀತಿ ಪಾಠ ಹೇಳುವ ಇಂದಿನ ರಾಜಕೀಯ ವ್ಯಕ್ತಿಗಳಿಗೆ, “ ರಾಜ ಹೇಗಿರಬೇಕು?!..........” ಎಂಬ ನೀತಿ ಪಾಠವನ್ನು ಇದೊಂದು ಆಚರಣೆಯೇ ತಿಳಿಸುತ್ತದೆ. ಬಲಿಯನ್ನು ಪೂಜಿಸಿ, ಮನೆಯ ತುಂಬಾ ಹಾಲು, ಬೆಣ್ಣೆಗಳನ್ನು ಸಾಂಕೇತಿಕವಾಗಿ ಹಾಕಿ, ಮನೆಯಲ್ಲಿ ಹೊನ್ನಿನ ಬಣ್ಣದ ಹಳದಿ ಹೂವುಗಳನ್ನು ಸುರಿದು, “ಹಳ್ಳ ಎಲ್ಲಾ ಹಾಲಾಗಲಿ, ದಿಣ್ಣೆ ಎಲ್ಲಾ ಬೆಣ್ಣೆಯಾಗಲಿ, ಬಲೀಂದ್ರನ ರಾಜ್ಯವೆಲ್ಲಾ ಹೊನ್ನೋ! ಹೊನ್ನೋ!” ಎಂಬ ಉದ್ಗಾರ ತೆಗೆಯುವುದು ನಿಜವಾಗಿಯೂ ಅವರ ಜೀವನದ ಸದಾಶೆಯನ್ನು ತೋರಿಸುತ್ತದೆ. ಇಲ್ಲಿ ಸ್ವಾರ್ಥವಿಲ್ಲ!........... ವಂಚನೆಯಿಲ್ಲ!......... ಅಹಮಿಕೆಯಂತೂ ಇಲ್ಲವೇ ಇಲ್ಲ!............ ‘”ಸರ್ವರೂ ಸುಖವಾಗಿರಲಿ”, ಎಂಬ ಮಹದಾಸೆ ಅಭಿವ್ಯಕ್ತವಾಗಿದೆ. ಇಂತಹ ಸರ್ವೋನ್ನತಿ ಬಯಸುವ ಸಂಸ್ಕೃತಿಯಲ್ಲಿದೆ ‘ಪ್ರಗತಿಪರತೆ’!........... ಒತ್ತಡಪೂರ್ಣ ಜೀವನವನ್ನು ಬಳುವಳಿಯಾಗಿ ಪಡೆದು, ಮಾನವೀಯತೆಯನ್ನು ಮರೆತು, ಮೌಲ್ಯಗಳನ್ನು ಬದಿಗೊತ್ತಿ, ಪ್ರೀತಿ-ವಿಶ್ವಾಸಗಳನ್ನು ಮರೆತು, ನಡೆಯುವುದರಲ್ಲಿಲ್ಲ ‘ಪ್ರಗತಿಶೀಲತೆ’. ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ, ಪಾತಕಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ, ಅದಕ್ಕೆ ಕಾರಣ, ಪ್ರಗತಿಪರತೆಯ ಸೋಗಿನಲ್ಲಿ, ಮಕ್ಕಳನ್ನು ಸಂಸ್ಕೃತಿಯಿಂದ ದೂರವಿಟ್ಟು ಬೆಳಸುತ್ತಿರುವುದೇ ಆಗಿದೆ. ಜನಪದರದು ಅನುಭವಪೂರ್ಣವಾದ ಜೀವನ!....ಅನುಭಾವಿಕ ಸಂಸ್ಕೃತಿ!............. ಅದನ್ನು ಉಳಿಸಿ, ಬೆಳಸಿದಲ್ಲಿ, ನಿಜವಾದ ‘ಪ್ರಗತಿಶೀಲತೆಯನ್ನು ಕಾಣಬಹುದು. ದೀಪದಿಂದ ದೀಪವ ಹಚ್ಚುತ್ತಾ, ಅಜ್ಞಾನಾಂಧಕಾರವನ್ನು ತೊಡೆದು ಬೆಳಗಿಸುವ ‘ಬೆಳ’ಕಿಂಡಿ’ ಈ ದೀಪಾವಳಿಯಂದು ತೆರೆಯಲಿ ಎಂಬುದೇ ಆಶಯ.
 “ತಮಸೋಮಾS ಜ್ಯೋತಿರ್ಗಮಯ” – ದೀಪಾವಳಿ ಶುಭ ತರಲಿ.

No comments:

Post a Comment