Saturday 20 August 2016

ಪದಾರ್ಥ ಚಿಂತಾಂಮಣಿಗೆ ನನ್ನ ಪ್ರತಿಕ್ರಿಯೆ ಕಾಸರಗೋಡು ಕನ್ನಡಿಗರವರ ಪ್ರಶ್ನೆ: ಶ್ರೇಷ್ಠ ನೃತ್ಯಕಲಾವಿದೆಯರನ್ನು ವರ್ಣಿಸುವಾಗ ''ನಾಟ್ಯ ಮಯೂರಿ' ಎನ್ನಲಾಗುತ್ತದೆ. ನೃತ್ಯಕಲಾವಿದೆ ಸ್ತ್ರೀಯಾದುದರಿಂದ ''ಮಯೂರಿ'" (ಹೆಣ್ಣು ನವಿಲು) ಎನ್ನುವುದು ಸರಿ. ಆದರೆ ಮಯೂರಿ (ಹೆಣ್ಣು ನವಿಲು) ಕುಣಿಯುವುದಿಲ್ಲ, ನಾಟ್ಯಕ್ಕೆ ಹೆಸರಾಗಿಯೂ ಇಲ್ಲ. ಸುಂದರವಾದ ಗರಿಗಳನ್ನು ಬಿಚ್ಚಿ ಸೊಗಸಾಗಿ ಕುಣಿಯುವುದು "ಮಯೂರ" (ಗಂಡು ನವಿಲು). ಆದುದರಿಂದ "ಮಯೂರಿ" ಗೆ ಹೋಲಿಸುವುದು ನೃತ್ಯಕಲಾವಿದೆಗೆ ಮಾಡುವ ಅವಮಾನವಲ್ಲವೆ? ಹಾಗೆಂದು "ನಾಟ್ಯಮಯೂರ" ಎಂದು ಕರೆದರೆ ಸ್ತ್ರೀಯನ್ನು ಪುರುಷನೆಂದು ಬಿಂಬಿಸಿದಂತಾಗುವುದೆ? ಈ ಗೊಂದಲವನ್ನು ಹೇಗೆ ಪರಿಹರಿಸಬಹುದು? ಅಥವಾ "ನವಿಲು" ಎಂಬ ಪದದಂತೆ "ಮಯೂರ" ವೂ ಹೆಣ್ಣು-ಗಂಡು ಎರಡು ಲಿಂಗಗಳಿಗೂ ಅನ್ವಯಿಸಬಹುದಾದ ಪದವೆ? ಕೆಲವರು ಕವನ ಬರೆಯುವ ಸ್ತ್ರೀಯನ್ನು ಕವಯತ್ರಿ/ ಕವಯಿತ್ರಿ ಎನ್ನದೇ ಕೇವಲ "ಕವಿ" (Poet ಎನ್ನುವಂತೆ) ಎಂದು ಕರೆಯುತ್ತಾರೆ. ನನ್ನ ಪ್ರತಿಕ್ರಿಯೆ: 'ಮಯೂರ' ಅಥವಾ 'ಮಯೂರಕ್'' ಸಂಸ್ಕೃತದಲ್ಲಿ ನವಿಲಿಗೆ ಬಳಸುವ ಪದವಾಗಿದೆ. ಇಲ್ಲಿ ಈ ಪದವು ಸ್ಪಷ್ಟವಾಗಿ 'ಪುಲ್ಲಿಂಗ' ಸೂಚಕವಾಗಿಯೇ ಬಳಕೆಯಾಗುತ್ತದೆ. ಏಕೆಂದರೆ, ಸಂಸ್ಕೃತವು ಪರಂಪರೆ ಹೊಂದಿರುವ ಭಾಷೆಯಾಗಿದ್ದು, ಭಾಷಾ ಬಳಕೆಯು ಪರಂಪರೆಗಳ ನೆಲೆಯಲ್ಲಿ ವಿಕಸಿಸುತ್ತಾ ವ್ಯವಸ್ಥಿತತೆಯನ್ನು ಪಡೆದಿದೆ. ಹಾಗಾಗೀ ಅದರ ಬಳಕೆಯ ಮೂಲವನ್ನು ಗಮನಿಸಿದಾಗ, ಅದರಲ್ಲಿ ಪದ ಬಳಕೆಗೂ ಸಂದರ್ಭಕ್ಕೂ, ಸಂಗತಿಗೂ ಸಂಬಂಧವಿರುತ್ತದೆ. ಆದರೆ, ಭಾಷೆ ಬದಲಾಗುವ ವಸ್ತು. ಭಾಷಾ ಬಳಕೆ ಸಂದರ್ಭ ಸನ್ನಿವೇಶಗಳನ್ನು ಅನುಸರಿಸಿ ತನ್ನ ಸ್ವರೂಪ ಬದಲಾಯಿಸಿಕೊಳ್ಳುವುದು ನಿಹಿತವಾದ ಸಂಗತಿಯಾಗಿದೆ.ನಾಟ್ಯಕಲೆಯ ಪೂರ್ವೇತಿಹಾಸವನ್ನು ಅವಲೋಕಿಸಿದಾಗ, 'ನಟರಾಜ' ಈ ಕಲೆಯ ಅಧಿಪತಿಯಾಗಿರುವುದನ್ನು ಕಾಣಬಹುದು. ಲಾಲಿತ್ಯ ಹೊಂದಿದ ಈ ಕಲೆಯನ್ನು ಸಾಮೂಹಿಕವಾಗಿ ಸ್ತ್ರೀಯರಿಗೆ ಪ್ರದರ್ಶಿಸಲು ಅವಕಾಶ ಲಭ್ಯವಾಗದ ಸಮಯವೂ ಕೂಡಾ ಇದ್ದಿರಲು ಸಾಧ್ಯ. ಆದರೆ, ಕಾಲಾ ನಂತರದಲ್ಲಿ ಸ್ತ್ರೀಯರಿಗೆ ಈ ಕಲೆಯ ಪ್ರದರ್ಶನಕ್ಕೆ ಅವಕಾಶ ಲಭ್ಯವಾದದಂದಿನಿಂದ, ಸ್ತ್ರೀಲಿಂಗ ವಾಚಕ ಪದದ ಬಳಕೆಯ ಅವಶ್ಯಕತೆ ಪ್ರಾದುರ್ಭವಿತವಾಗಿರಬಹುದು. ಆಗ ಸ್ತ್ರೀಲಿಂಗವಾಚಕವಾಗಿ, ಲಿಂಗ ರಚನೆಯಾಗುವ ಕ್ರಮವನ್ನು ಅನುಸರಿಸಿ, 'ಮಯೂರೀ' ಪದ ಸೃಷ್ಟಿಯಾಗಿರಬಹುದು (ಲಿಂಗ ರಚನೆಯ ನಿಯಮ: 'ಅ' ಕಾರಾಂತ್ಯ ಪದಗಳು, 'ಈ' ಕಾರಾಂತ್ಯವಾಗಿ ಸ್ತ್ರೀಲಿಂಗವಾಗುವುದು ಲಿಂಗ ಬದಲಾವಣೆಯ ಕ್ರಮ) 'ಮಯೂರ'ದ ನಾಟ್ಯಕ್ಕೂ ಸ್ತ್ರೀ ನಾಟ್ಯಕ್ಕೂ ಪದಗಳ ಅರ್ಥ ಹಾಗೂ ದೃಶ್ಯ ಸಾದೃಶ್ಯತೆ ಹೆಚ್ಚಾದ ಕಾರಣ, ಕಾಲಾಂತರದಲ್ಲಿ, 'ಮಯೂರೀ' ಪದವು ರೂಪಕವಾಗಿ ಬಳಕೆಯಾಗಲು ಪ್ರಚುರಗೊಂಡಿರುವ ಸಾಧ್ಯತೆ ಇದೆ. 'ಸ್ತ್ರೀಲಿಂಗ', 'ಪುಲ್ಲಿಂಗ' ಇತ್ಯಾದಿ ವ್ಯಾಕರಣ ನಿಯಮಗಳು ಭಾಷೆಗೆ ಹಾಕಿದ ಚೌಕಟ್ಟೇ ಹೊರತು, 'ಕಾವ್ಯ'ಕ್ಕೆ ಹಾಕಿದ ಚೌಕಟ್ಟಲ್ಲ. 'ಕಾವ್ಯ'ಕ್ಕೆ ಚೌಕಟ್ಟನ್ನು ಜೋಡಿಸಲು ಸಾಧ್ಯವೂ ಇಲ್ಲ. ಏಕೆಂದರೆ, 'ಕಾವ್ಯ' ಎಲ್ಲವನ್ನೂ ಮೀರಿದ್ದು. ಒಮ್ಮೆ 'ಕಾವ್ಯ'ಕ್ಕೆ ಚೌಕಟ್ಟನ್ನು ಒದಗಿಸಿದರೂ ಅದು 'ಛಂದೋ-ಅಲಂಕಾರ' ಗಳಿಂದ ಮಾತ್ರ ಸಾಧ್ಯ, ರೂಪಕಾಲಂಕಾರಯುಕ್ತ ಪದಗಳೆಂದರೆ, ಉಪಮೇಯ-ಉಪಮಾನಗಳಲ್ಲಿ ಭೇದವನ್ನು ಕಲ್ಪಿಸದಿರುವುದು. ಇಲ್ಲಿ ನಾಟ್ಯಕ್ಕೂ, ಮಯೂರಕದ ನೃತ್ಯಕ್ಕೂ ಭೇದವಿಲ್ಲದಿರುವಂತೆ ಉಪಕಲ್ಪಿಸುವುದು. ಇಲ್ಲಿರುವುದು ನೃತ್ಯ ಸಾದೃಶ್ಯವೆನೆಸಿದೆ. ಹಾಗಾಗೀ 'ನಾಟ್ಯ ಮಯೂರೀ' ಪದದ ಬಳಕೆ, ಕಾವ್ಯಕ ಭಾಷೆಯಲ್ಲಿ ದೋಷವೆನಿಸುವುದಿಲ್ಲ. ಕೇವಲ ವ್ಯಾಕರಣ ಬದ್ಧತೆಯಿಂದ, ಪದದ ಅರ್ಥದ ನೆಲೆಯಲ್ಲಿ ಅರ್ಥೈಸುವುದಾದಲ್ಲಿ ಮಾತ್ರ ದೋಷವೆನಿಸುತ್ತದೆ. ಹಾಗಾಗೀ ಪದಬಳಕೆಯ ಸನ್ನಿವೇಶದ ಹಿನ್ನೆಲೆ ಭಾಷೆಯ ಬಳಕೆಯೇ ಅಥವಾ ಕಾವ್ಯಿಕ ನೆಲೆಯೇ? ಎಂಬುವುದನ್ನು ನೆಲೆಯಾಗಿಟ್ಟುಕೊಂಡು ಪದಬಳಕೆಯ 'ಸರಿ', 'ತಪ್ಪು'ಗಳನ್ನು ನಿರ್ಧರಿಸಬಹುದೆಂಬುದು ಅಭಿಪ್ರಾಯವಷ್ಟೇ! ಧನ್ಯವಾದಗಳು.

No comments:

Post a Comment