Saturday 20 August 2016

ಪದಾರ್ಥ ಚಿಂತಾಮಣಿ ಸಮೂಹ ಪ್ರಶ್ನೆಗೆ ನನ್ನ ಪ್ರತಿಕ್ರಿಯೆ
ಸಂಘ, ಸಂಸ್ಥೆ, ತಂಡ ಮತ್ತು ಗುಂಪು ಇವುಗಳ ನಡುವಿನ ವ್ಯತ್ಯಾಸ
'ಭಾಷೆ'ಯ ಮೂಲ ನಿಗೂಢವಾದ ಸಂಗತಿಯಾಗಿದ್ದು, ಅದರ ವಿಕಾಸ ಮಾತ್ರ ನಮಗೆ ಅನುಭವವೇದ್ಯವಾಗುವ ಸಂಗತಿಯಾಗಿದೆ. ಆದರೆ, ಬದಲಾವಣೆ ನಮ್ಮ ಅನುಭವಕ್ಕೆ ಬರುವ ಸಂಗತಿಯಾಗಿದ್ದರೂ, ಬದಲಾವಣೆ ಹೊಂದಿದ ಬಗೆಯನ್ನು ಕೆಲವೊಮ್ಮ ತಾರ್ಕಿಕ ಊಹೆಯ (ಪ್ರಾಕ್ಕಲ್ಪನೆ) ನೆಲೆಯಲ್ಲಿ ಗುರುತಿಸಬೇಕಾಗುತ್ತದೆ. ಅಂತಹುದೇ ಪ್ರಯತ್ನವನ್ನು ಈ ಸಂಘ, ಸಂಸ್ಥೆ, ತಂಡ, ಗುಂಪು ಈ ಪದಗಳ ಮೂಲ ಗುರುತಿಸಲು ಹಾಗೂ ಅವುಗಳ ನಡುವಿನ ವ್ಯತ್ಯಾಸ ತಿಳಿಯಲು ಮಾಡಬಹುದಷ್ಟೆ. 'ಸಂಘ', ಪ್ರಾಕೃತ ಮೂಲದ ಪದವಾಗಿರಬಹುದು. ಏಕೆಂದರೆ, 'ಸಂಘ' ಪದದ ಬಳಕೆ ಹೆಚ್ಚಾಗಿ ಬಳಕೆಯಲ್ಲಿ ಬರುವುದು 'ಬೌದ್ಧ ಸಾಹಿತ್ಯ'‍ದ ಜೊತೆ ಜೊತೆಯಲ್ಲಿಯೇ ಆಗಿದೆ. "ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ" , ಇದು ಇದಕ್ಕೆ ಪೂರಕವಾಗಿ ಬಳಕೆಯಾಗುವ ಪದವಾದ 'ಸಂಘಾರಾಮ'ವನ್ನು ಇಲ್ಲಿ ಉಲ್ಲೇಖಿಸಬಹುದು. ಇದರೊಟ್ಟಿಗೆ 'ಸಂಘಂ ಸಾಹಿತ್ಯ'ವನ್ನೂ ನೆನೆಯಬಹುದು. ನನ್ನ ಜ್ಞಾನಕ್ಕೆ ನಿಲುಕಿದ ಮಟ್ಟಿಗೆ 'ಸಂಘಂ' ಪದವನ್ನು ಸಂಸ್ಕೃತ ಮೂಲದಲ್ಲಿ ಗುರುತಿಸಲಾಗದು. ಆದರೆ, ಸಂಸ್ಕೃತದ ಅಪಭ್ರಂಶ ರೂಪವಾದ 'ಹಿಂದಿ' ಭಾಷೆಯಲ್ಲಿ, ಈ ಪದದ ಬಳಕೆಯನ್ನು ಕಾಣುತ್ತೇವೆ. ಬಹುಶಃ ಈ ಸಂಕ್ರಮಣ ಸಮಯದಲ್ಲಿಯೇ ಸಂಸ್ಕೃತದ ಅಪಭ್ರಂಶ ರೂಪಗಳು ಚಿಗುರೊಡೆದಿರಬಹುದು. ಇಲ್ಲಿ 'ಸಂಘ' ಎಂದರೆ, 'ಸಮೂದಾಯ', 'ದಳ','ಸಮಾಜ'(ಇಲ್ಲಿ ಬೌದ್ಧ ಸಮಾಜ) ಎಂಬ ಅರ್ಥವನ್ನು ಪಡೆದುಕೊಂಡಿತ್ತು. ಆದರೆ, ಕಾಲಾ ನಂತರದಲ್ಲಿ 'ಸಂಘ', ಸಮೂದಾಯವೆಂಬ ವಿಶಾಲ ಅರ್ಥದಿಂದ, ಅರ್ಥ ಸಂಕುಚನ ಹೊಂದಿ, ಒಂದು ಸಣ್ಣ ಗುಂಪಿಗೆ ಬಳಸುವುದು ರೂಢಿಯಾಯಿತು.'ಸಂಘ'ವನ್ನು, 'ಸಮೂದಾಯ'ದ ಒಳಗೇ ಇರುವ; ಸಮಾನ ಧ್ಯೇಯಗಳನ್ನು ಹೊಂದಿರುವ ಒಂದು ಚಿಕ್ಕ ಗುಂಪು ಎಂದು ಅರ್ಥೈಸಬಹುದು. ಉದಾಹರಣೆಗೆ, ಸ್ತ್ರೀ ಶಕ್ತಿ ಸಂಘಗಳು, ಯುವಕ ಸಂಘಗಳು ಇತ್ಯಾದಿ. ಆದರೆ, ವಾಸ್ತವವಾಗಿ ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ'ದ ಮೂಲ ರೂಪವೇ ಬೇರೆ. ಕನ್ನಡ ಭಾಷೆಯಲ್ಲಿ ಬಳಕೆಯಾಗುವ 'ಸಂಘ' ಪದದಲ್ಲಿ, ಮಹಾಪ್ರಾಣಾಕ್ಷರ, 'ಘ' ಮೂಲದಲ್ಲಿ ಇರುವುದಿಲ್ಲ. ಬದಲಿಗೆ, 'ಸಂಗ' ಈ ರೀತಿಯಲ್ಲಿ ಇರುತ್ತದೆ. ಇಲ್ಲಿ 'ಗ' ಅಲ್ಪಪ್ರಾಣ' ವಾಗಿರುವುದನ್ನು ಗಮನಿಸಬಹುದು. ಇಲ್ಲಿ 'ಸಂಗ' ಎಂದರೆ, 'ಸೇರುವುದು' ಎಂಬ ಅರ್ಥವನ್ನು ಪಡೆದಿದೆ. ಯಾವುದಾದರೂ ಏಕೋದ್ದೇಶದಿಂದ 'ಸಮೂದಾಯ'ದ ಮಂದಿ ಒಂದೆಡೆ ಸೇರುತ್ತಿದ್ದಿರಬಹುದು. ಆದರೆ, ಅದೇ ಸಂದರ್ಭದಲ್ಲಿ ಒದಗಿ ಬಂದ, 'ಸಂಘ' ಪದವು, 'ಸಂಗ' ಪದವನ್ನು ಅತಿಕ್ರಮಿಸಿರಬಹುದು. ಇಲ್ಲಿ 'ಸೇರುವಿಕೆ'ಗೂ 'ಸಂಘಕ್ಕೂ ಅರ್ಥ ಸಾದೃಶ್ಯ ಒದಗಿ, ಬಹುಶಃ 'ಸಂಘ' ವು ಔಪಚಾರಿಕ ನೆಲೆಯುಳ್ಳ ಪದವಾಗಿ ಪರಿವರ್ತಿತವಾಗಿರಬಹುದು. ಇದರೊಟ್ಟಿಗೆ, 'ಸಂಗ' ಪದ ಕ್ರಮೇಣ ಹೀನಾರ್ಥ ಪಡೆದು, 'ನಪುಂಸಕ' ಎಂದು ಬಳಕೆಯಾಗಿದ್ದರಿಂದ, 'ಸಂಘ' ಪದವೇ ಔಪಚಾರಿಕ ನೆಲೆಯಲ್ಲಿ ಉಳಿದುಕೊಂಡಿರಬಹುದು. 'ಸಂಘ' ಪದ ಪ್ರಸ್ತುತ 'ಏಕೋದ್ದೇಶ ಹೊಂದಿರುವ ಚಿಕ್ಕ ಸಮೂದಾಯದ ಒಂದು ಗುಂಪಾಗಿರುತ್ತದೆ. ಇದೇ ಮುಂದೆ, 'ಸಂಘಟನೆ'ಯಾಗಿ ಪರಿವರ್ತಿತವಾಗಿರಬಹುದು. ಇಲ್ಲಿ 'ಸಂಘಟನೆ' 'ಏಕೋದ್ದೇಶ' ಉಳ್ಳವರನ್ನು ಒಂದೆಡೆಗೆ 'ಘಟಿಸು'ವುದಾಗಿದೆ. ಇದಿಷ್ಟೂ 'ಸಂಘ' ಪದದ ವಿಕಸನದ ವಿಶ್ಲೇಷಣೆಯಾದರೆ, ಇನ್ನು 'ಸಂಸ್ಥಾ' ಪದದ ವಿಶ್ಲೇಷಣೆಯನ್ನು ಹೀಗೆ ಗುರುತಿಸಬಹುದು. 'ಸಂಸ್ಥಾ' ಇದು ಪ್ರತಿಶತ ಸಂಸ್ಕೃತ ಪದವೇ ಆಗಿದೆ. 'ಸಂಸ್ಥಾ' ಸ್ತ್ರೀ ಲಿಂಗವಾಚಿ ನಾಮಪದವಾಗಿದ್ದು, 'ಸಂಘ', 'ಸಭೆ'ಗ, ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವ ಪದೆವೇ ಆಗಿದೆ. ಆದರೆ, ನಂತರ 'ಸಂಸ್ಥಾ' ಪದ 'ಸಂಘ'ದ ಕಾರ್ಯ ನಿರ್ವಹಿಸುವ ಆಡಳಿತಾತ್ಮಕ ನಿರ್ವಹಣಾ ವ್ಯವಸ್ಥೆಯಾಗಿ, ಅರ್ಥ ಬಳಕೆಗೆ ಬಂದಿರಬಹುದು. ಸಂಸ್ಕೃತದ 'ಸಂಸ್ಥಾ', ಕನ್ನಡಕ್ಕೆ ಬರುವ ಸಂದರ್ಭದಲ್ಲಿ, ದೀರ್ಘ 'ಆ' ಕಾರ ಕಳೆದುಕೊಂಡು, 'ಸಂಸ್ಥೆ' ಆಗಿರುವುದು ಭಾಷಾ ವ್ಯತ್ಯಾಸ ನಿಯಮರೀತ್ಯ ಸತ್ಯ. ಹಾಗಾಗೀ ಸಂಘಟನೆಯೊಂದರೆ, ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಅಧಿಕೃತ ಮಾಧ್ಯಮವೇ 'ಸಂಸ್ಥೆ'.'ಸಂಘ'ಗಳು 'ಸಂಸ್ಥ'ಯನ್ನು ಹೊಂದಿರಬೇಕೆಂಬ ನಿಯಮವೇನಿಲ್ಲ. 'ಸಂಘ'ಗಳು, ಉದ್ದೇಶ ಸಾಧನೆಗೆ 'ಸಂಸ್ಥೆ'ಗಳನ್ನು ಸಂಸ್ಥಾಪಿಸಿಕೊಳ್ಳಬಹುದು. ಉದಾಹರಣೆಗೆ, ವಿದ್ಯಾಸಂಸ್ಥೆಗಳು. 'ಸಂಸ್ಥೆ'ಗಳು ನಿರ್ದಿಷ್ಟ 'ಉದ್ದೇಶ' ಹಾಗೂ 'ಉದ್ಯೋಗ'ಕ್ಕೆ ಸಂಬಂಧಿಸಿರುತ್ತವೆ.ಇನ್ನು 'ತಂಡ' ಪದದ ವಿಶ್ಲೇಷಣೆಗೆ ಉಪಕ್ರಮಿಸೋಣ. 'ತಂಡ'' ಇದು ಪಕ್ಷವೆಂಬ ಅರ್ಥವನ್ನು ಕೊಡುತ್ತಿದ್ದು, 'ಅಭಿಪ್ರಾಯ ಭಿನ್ನತ'ಯ ನೆಲೆಗಟ್ಟಿನಲ್ಲಿ ರೂಪುಗೊಂಡ ಪದವಾಗಿದೆ. 'ಏಕಾಭಿಪ್ರಾಯ ಉಳ್ಳವರ ಗುಂಪು', ತಂಡವಾಗಿ, ಭಿನ್ನಾಭಿಪ್ರಾಯ ಉಳ್ಳವರಿಂದ ಬೇರೆಯಾಗಿ ನಿಲ್ಲುತ್ತಾರೆ. ಕಾಲ ಕ್ರಮೇಣ ಈ ಪದವು ಅರ್ಥ ಸಂಕುಚನಕ್ಕೆ ಒಳಗಾಗಿ, ಪರ-ವಿರೋಧದ ಗುಂಪಿನ ಸ್ಪರ್ಧೆಗಳಲ್ಲಿ, ನೆಲೆಕಂಡು, ಕ್ರೀಡೆ, ಸ್ಪರ್ಧೆ ಇತ್ಯಾದಿಗಳಲ್ಲಿ ಪರಸ್ಪರ ವಿರುದ್ಧ ತಂಡಗಳೆಂಬ, ಅರ್ಥ ಸಂಕುಚನಕ್ಕೆ ಒಳಗಾಗಿರಬಹುದು. ಅಂತೆಯೇ, 'ಗುಂಪು' ಪದದ ಮೂಲ ನೆಲೆಯ ವಿಶ್ಲೇಷಣೆ ಇಲ್ಲಿದೆ. ಇದು 'ಗುಂಫ಼ನಾ' ಎಂಬ ಸಂಸ್ಕೃತದ ಪದಮೂಲದಿಂದ ಬಂದಂತಹ ಪದವಾಗಿದ್ದು, 'ಗುಂಫ಼ನಾ' ಎಂದರೆ, 'ಕೂಡಿಸಿ ಪೋಣಿಸುವುದು' ಎಂಬರ್ಥವನ್ನು ಪಡೆದಿದೆ. ಈ ಪದದ ಅರ್ಥವೂ 'ಸೇರಿಸುವಿಕೆ'ಯ ಕ್ರಿಯೆಗೆ ಸಂಬಂಧಿಸಿದೆ. ಆದರೆ, 'ಗುಂಪು' ಅರ್ಥಾತ್ 'ಸೇರಿಸುವುದು' ಉದ್ದೇಶ ಪೂರ್ವಕವಾಗಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು!....... ಉದಾಹರಣೆಗೆ, 'ಆಟದ ಗುಂಪುಗಳು', ಕ್ರೀಡೆಯನ್ನಾಡುವ ಉದ್ದೇಶದಿಂದ ಸೇರುವ ಗುಂಪುಗಳು. ಕೆಲವೊಮ್ಮೆ ಮುನ್ನಾ ಉದ್ದೇಶ ರಹಿತವಾಗಿಯೂ 'ಗುಂಪು' ಸೇರಬಹುದು. ಉದಾಹರಣೆಗೆ, 'ಅಪಘಾತ' ಸಂಭವಿಸಿದಾಗ, ಸೇರುವ 'ಜನಜಂಗುಳಿ', ಈ ರೀತಿಯ ಗುಂಪು ಏಕೋದ್ದೇಶ ಇಟ್ಟುಕೊಂಡು, ವ್ಯವಸ್ಥಿತವಾಗಿ ರೂಪುಗೊಂಡಂತಹ ಗುಂಪುಗಳಲ್ಲ. ಸಂದರ್ಭ, ಸನ್ನಿವೇಶಗಳಿಂದ ಪ್ರೇರಿತವಾಗಿ ರೂಪುಗೊಳ್ಳುವ 'ತಾತ್ಕಾಲಿಕ ಗುಂಪುಗಳು'. ಹಾಗಾಗೀ 'ಗುಂಪು'ಗಳಿಗೆ, ಅಧಿಕೃತ 'ಸಂಸ್ಥಾ' ನೆಲೆಯಿರುವುದಿಲ್ಲ. 'ಸಂಘ'ಗಳು 'ಏಕೋದ್ದೇಶ'ವನ್ನು ಆಧರಿಸಿದ್ದರೆ, 'ಸಂಸ್ಥ'ಗಳು ಉದ್ದೇಶ ಸಾಧನೆಗೆ 'ಮಾಧ್ಯಮ' ಎನ್ನಬಹುದು. 'ತಂಡ'ವು 'ಏಕಾಭಿಪ್ರಾಯ'ವನ್ನು ಆಧರಿಸಿ ರೂಪುಗೊಳ್ಳುವ 'ಸಮೂಹ' ಎನಿಸಿದರೆ, 'ಗುಂಪು', 'ಆಸಕ್ತಿ', ಸನ್ನಿವೇಶ'ವನ್ನು ಆಧರಿಸಿದ 'ಸಮೂಹ'ಗಳಾಗಿವೆ ಎಂದು ವಿಶ್ಲೇಷಿಸಬಹುದು(ವಿಶೇಷ ಸೂಚನೆ: ಈ ತಿಳಿವು ನನ್ನ ಜ್ಞಾನಕ್ಕೆ ನಿಲುಕಿದಂತಹ ವಿಶ್ಲೇಷಣೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ).ಧನ್ಯವಾದಗಳು.

No comments:

Post a Comment