Thursday 11 January 2018

ವಿವೇಕ’ ಶಿಕ್ಷಣ “ಏಳಿ!.............ಎದ್ದೇಳಿ!................ಗುರಿ ಮುಟ್ಟುವ ತನಕ ನಿಲ್ಲದಿರಿ!.............” ಎಂಬ ನುಡಿಝೇಂಕಾರದ ಮಾರ್ದನಿಯು, ನರನಾಡಿಗಳನ್ನೆಲ್ಲಾ ಹುರಿಗೊಳಿಸಿ, ಮಹೋನ್ನತಿ ಸಾಧಿಸುವ ಪರಮ ಮಂತ್ರವೇ ಆಗಿದೆ. ಇಂತಹ ದನಿಯ ಸೆಲೆ ಇರುವುದು ‘ವಿವೇಕ ಪ್ರಜ್ಞೆ’ಯಲ್ಲಿ. ವಿವೇಕಪೂರ್ಣತೆ, ಬಯಸುವುದು ಎಚ್ಚರದ ಮನವನ್ನು!......... ಬರಿ ಎಚ್ಚರದಿಂದಿದಷ್ಟೇ ಸಾಲದು!............ಸರಿ ದಾರಿಯಲ್ಲಿ ಸಾಗುವ ವಿವೇಚನೆ ಅತಿ ಅವಶ್ಯಕವಾದುದು. ಹಾಗಾದರೆ, ಸರಿ ದಾರಿ ಯಾವುದು ಎಂಬ ಪ್ರಶ್ನೆ ನಮ್ಮ, ನಿಮ್ಮೆಲ್ಲರನ್ನು ಕಾಣುತ್ತದೆ!... ಹೌದು ಸರಿ ದಾರಿಯೆಂದರೆ ಯಾವುದು?............ಅವರರವರ ಕಾರ್ಯೋದ್ದೇಶಗಳಿಗೆ ಅನುಗುಣವಾಗಿ ಆರಿಸಿಕೊಂಡ ಮಾರ್ಗಗಳು ಸರಿಯೇ ಎನಿಸುತ್ತವೆ. ಒಬ್ಬರಿಗೆ ಸರಿ ಎನಿಸಿದ ಮಾರ್ಗ, ಮತ್ತೊಬ್ಬರಿಗೆ ತಪ್ಪಾಗಿ ಕಾಣುತ್ತದೆ. ಸನ್ನಿವೇಶಾತ್ಮಕವಾಗಿ ‘ಸರಿ’ ಹಾಗೂ ‘ತಪ್ಪು’ಗಳು ನಿರ್ಧಾರಿತವಾಗುತ್ತದೆ. ದೃಷ್ಟಿಕೋನ ಬದಲಾದಂತೆ, ಸರಿ-ತಪ್ಪುಗಳು ಬದಲಾಗುತ್ತಾ ಸಾಗಿದಲ್ಲಿ, ‘ಸರಿ’ ಅಥವಾ ‘ತಪ್ಪು’ ಇವುಗಳ ಚೌಕಟ್ಟು ನಿರ್ಮಾಣ ಹೇಗೆ ಸಾಧ್ಯ? ಎಂಬ ದ್ವಂದ್ವಕ್ಕೆ ಪರಿಹಾರ ಹುಡುಕುತ್ತಾ ಸಾಗಿದಂತೆ, ನಮಗೆ ಉತ್ತರ ದೊರೆಯುವುದು ವಿವೇಕರ ಶಿಕ್ಷಣದಲ್ಲಿ. ವಿವೇಕರು ಪ್ರತಿಪಾದಿಸಿದ ‘ಮಾನವ ನಿರ್ಮಾಣ ಶಿಕ್ಷಣ’ ಕ್ರಮದಲ್ಲಿ. ಹೀಗೆ ‘ಸರಿ’, ‘ತಪ್ಪು’ಗಳ ಸರಿಕ್ರಮದ ವಿವೇಚನೆಯೇ ‘ವಿವೇಕ’, ಅದು ಮಾನವ ನಿರ್ಮಾಣದತ್ತ ಮುಖ ಮಾಡಿರಬೇಕು ಎನ್ನುವ ಮಹೋನ್ನತ ಧ್ಯೇಯ ವಿವೇಕರ ಚಿಂತನೆಗಳಲ್ಲಿ ಗೋಚರವಾಗುತ್ತದೆ. ದೇಶದ ಉನ್ನತಿಕೆ ಉಂಟಾಗಲು, ಇಂದು ವಿವೇಕರ ಧ್ಯೇಯವಾಕ್ಯವನ್ನು ಆಧಾರವಾಗಿ ಇಟ್ಟುಕೊಂಡು ನಡೆಯುವ ಅಗತ್ಯತೆ ಇದೆ. ಆಲಸ್ಯದಿಂದ ಯಾವುದೇ ಕಾರ್ಯ ಸಾಗುವುದಿಲ್ಲ, ಪ್ರಗತಿಯ ದರ್ಶನವೂ ಆಗಲಾರದು. ಪ್ರಗತಿಪರತೆಯು ಸಾಧ್ಯವಾಗಬೇಕಾದರೆ, ಅವಶ್ಯಕವಾಗಿರುವುದು ನಮ್ಮಲ್ಲಿರುವ ನಿರಂತರ ಕಾರ್ಯ ತತ್ಪರತೆಯ ‘ಯುವ ಲಕ್ಷಣ’ವನ್ನು ಮೈಗೂಡಿಸಿಕೊಂಡಿರುವುದು, ಯಾವುದೇ ಕಾರ್ಯವನ್ನು ಮಾಡುತ್ತಾ ಇದ್ದಲ್ಲಿ, ಕಾರ್ಯಕ್ಕೆ ತಕ್ಕ ಫಲ ದೊರೆತೇ ದೊರೆಯುತ್ತದೆ. ಹಾಗಾಗೀ ನಾವು ನವ ಹುರುಪಿನೊಂದಿಗೆ ಕಾರ್ಯ ನಿರ್ವಹಿಸುತ್ತಲೇ ಸಾಗಬೇಕು. ಈ ಕಾರ್ಯ ಪ್ರಗತಿಪರತೆಯತ್ತ ಸಾಗುವಂತೆ ನೋಡಿಕೊಳ್ಳುವ ನಿಶ್ಚಿತ ಪ್ರಜ್ಞೆ ನಮ್ಮಲ್ಲಿರಬೇಕು. ಈ ನಿಶ್ಚಿತ ಪ್ರಜ್ಞೆಯನ್ನು ವಿವೇಚನೆ, ವಿವೇಕ ನಮಗೆ ನೀಡುತ್ತದೆ. ಇಂತಹ ‘ವಿವೇಕ ಪ್ರಜ್ಞೆ’ಯನ್ನು ನೀಡುವ ಶಿಕ್ಷಣ ನಮ್ಮ ವ್ಯವಸ್ಥೆಯಲ್ಲಿ ಜಾರಿ ಬರುವುದು ಇಂದಿನ ಅಗತ್ಯವಾಗಿದೆ. ನವ ಹುಮ್ಮಸ್ಸು ಪ್ರವಾಹೋಪಾದಿಯಲ್ಲಿ ಯುವ ಚೇತನಗಳಲ್ಲಿ ಪ್ರಕಟವಾಗುತ್ತಿರುತ್ತದೆ. ನೀರಿನ ಪ್ರವಾಹದ ರಭಸ, ವಿನಾಶವನ್ನೂ ಮಾಡಬಲ್ಲದು. ಆ ನೀರಿನ ರಭಸಕ್ಕೆ ಸರಿಯಾಗಿ ಅಣೆಕಟ್ಟೆಯನ್ನು ಕಟ್ಟಿ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಲ್ಲಿ ಅದೇ ನೀರಿನ ಪ್ರವಾಹದಿಂದ ವಿದ್ಯುಚ್ಛಕ್ತಿಯನ್ನು ತಯಾರಿಸಿ, ಯುಕ್ತ ರೀತಿಯಲ್ಲಿ ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಅಂತೆಯೇ, ರಭಸದಿಂದ ಪ್ರವಹಿಸುವ ಯುವಶಕ್ತಿಯ ನೀರನ್ನು ತಡೆಯುವುದು ಬಲುಕಷ್ಟ. ಇಂತಹ ಪ್ರವಾಹವನ್ನು ತಡೆದು ಅದನ್ನು ಸರಿಶಕ್ತಿಯಾಗಿ ಬಳಸುವುದು ಸುಲಭ ಸಾಧ್ಯವೇನಲ್ಲ. ಯುವ ಶಕ್ತಿಯ ರಭಸಕ್ಕೆ, ಸತ್-ಚಿಂತನೆಯೆಂಬ ಅಣೆಕಟ್ಟನ್ನು ನಿರ್ಮಿಸಿ, ನೀತಿ ಹಾದಿಯ ಮೂಲಕ ಸದ್ವಿಚಾರಗಳ ನೀರು ಹಾಯಿಸಿ, ಉತ್ತಮ ಮಾನವ ಸಮಾಜವೆಂಬ ಬೆಳೆಯನ್ನು ತೆಗೆಯಬೇಕಾದುದು ‘ಮಾನವ ನಿರ್ಮಾಣ ಶಿಕ್ಷಣ’ದ ಗುರಿಯಾಗಬೇಕು. ಉದ್ಯೋಗ ಸೃಷ್ಟಿಯಿಂದ ಉತ್ಪಾದನೆ, ಉತ್ಪಾದನೆಯಿಂದ ಉನ್ನತಿಕೆ ಈ ಉನ್ನತಿಕೆಯಿಂದ ಮಾನವ ಪ್ರಗತಿ ಇಂದಿನ ಧ್ಯೇಯವಾಗಬೇಕು. ಪ್ರಗತಿಯ ಗಂಟೆ ಮುಂದೋಡುತ್ತಾ ಸಾಗಬೇಕು. ‘ಯುವಶಕ್ತಿ’ ಇಂದು ಪ್ರಗತಿಯ ಭ್ರಮೆಯಲ್ಲಿದೆ. ಇದಕ್ಕೆ ಕಾರಣ, ನಾವು ಗಡಿಯಾರದಲ್ಲಿನ ಲೋಲಕದ ರೀತ್ಯ ನಿಂತಲ್ಲೇ ಅತ್ತಲಿತ್ತ ಚಲಿಸುತ್ತಿರುವುದು. ಗಡಿಯಾರದ ಮುಳ್ಳುಗಳಂತೆ ಮುಂದೆ ಮುಂದೆ ನಾವು ಚಲಿಸುತ್ತಲೇ ಇಲ್ಲ. ಗಡಿಯಾರದ ಮುಳ್ಳುಗಳು ಮುಂದೆ ಚಲಿಸಿದಲ್ಲಿ ಮಾತ್ರ ದಿನ ಗತಿಸಿ, ಹೊಸದಿನ, ಹೊಂಬೆಳಕು ಒಡ ಮೂಡುವುದು. ಈ ಹಿನ್ನೆಲೆಯಲ್ಲಿ ಶಿಕ್ಷಣವು ವಿವೇಚನೆಯನ್ನು ಬೆಳೆಸುವತ್ತ ಮನ್ನಡಿ ಇಡುವುದು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ರಮವನ್ನು ಪುನರ್ರಚಿಸುವುದು ಅಪೇಕ್ಷಣೀಯ. ಪರಿವರ್ತಿತ ಶಿಕ್ಷಣದಲ್ಲಿ ಯುವಶಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದು ಅಪೇಕ್ಷಣೀಯ. ಯುವಶಕ್ತಿಯೆಂದರೆ, ಕೇವಲ ಯುವಕರು ಮಾತ್ರವಲ್ಲ, ಪ್ರಗತಿಪರ ಚಿಂತನೆಯ ಎಲ್ಲಾ ‘ಜಾಗೃತ ಯುವ ಮನಗಳು’. “ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು” ಎಂಬ ವಿವೇಕ ವಾಣಿಯು ದೇಹ, ಮನಸ್ಸುಗಳ ಸ್ವಸ್ಥತೆಯನ್ನು ಸಾರುತ್ತದೆ. ಮನೋ ಸ್ವಸ್ಥತೆ, ಪ್ರಗತಿಪರತೆಯ ಧ್ಯೋತಕವಾಗಿರುತ್ತದೆ. ಮನೋಸ್ವಸ್ಥತೆಯನ್ನು ದಿಗ್ಧರ್ಶಿಸುವುದು ವಿವೇಚನಾಪೂರ್ಣ ವರ್ತನೆ. ದುಡುಕಿನ ನಿರ್ಧಾರ, ವಿವೇಚನಾಶೂನ್ಯ ನಿರ್ಣಯಗಳು ಪ್ರಗತಿಪರತೆಯನ್ನು ವಿಗತಿಯತ್ತ ಕೊಂಡೊಯ್ಯಬಲ್ಲವು. ಹಾಗಾಗೀ ಪ್ರಸನ್ನ ಮನಸ್ಕಸ್ಥಿತಿಯನ್ನು ಸೃಷ್ಟಿಸುವುದು ಶಿಕ್ಷಣದ ಅಗತ್ಯ ಎನಿಸಿದೆ. ಸ್ವಸ್ಥ ಮನಕ್ಕೆ ಧ್ಯಾನ ಏಕಾಗ್ರತೆ, ಮಾನವೀಯತೆಗಳ ತರಬೇತಿ, ಸ್ವಸ್ಥದೇಹಕ್ಕೆ ಯುಕ್ತ ‘ಯೋಗ ಶಿಕ್ಷಣ’ ಅಗತ್ಯವಾದುದು. ಮನುಕುಲದ ಪ್ರಗತಿಗೆ ಯುವಜನತೆ ಕಾರ್ಯೋನ್ಮುಖವಾಗುವುದು ಅತ್ಯಗತ್ಯ. ಯುವಜನತೆ ಪ್ರಗತಿಪರತೆಯತ್ತ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ, ‘ವಿವೇಕ ಶಿಕ್ಷಣ’ ಇಂದಿನ ಅಗತ್ಯತೆಯಾಗಿದೆ.

No comments:

Post a Comment